ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಮೇಲೆ ಹಲ್ಲೆಗೆ ಯತ್ನಿಸಿರುವ ಸಂಬಂಧ ಮಂಡ್ಯದಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರೈತ ಸಂಘದ ಎರಡು ಬಣಗಳ ನಡುವೆ ಆಗಿರುವ ಮುಖಾಮುಖಿಯ ಸಂಬಂಧ ದೂರು ಪ್ರತಿದೂರು ಸಲ್ಲಿಕೆಯಾಗಿವೆ.
ರೈತ ಮುಖಂಡ ನಾಗೇಂದ್ರ ಅವರ ಮೇಲೆ ಮತ್ತೊಂದು ಬಣದ ಇಂಗಲಗುಪ್ಪೆ ಕೃಷ್ಣ ಅವರು ಹಲ್ಲೆ ನಡೆಸಲು ಯತ್ನಿಸಿರುವುದಾಗಿ ಆರೋಪ ಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಡಗಲಪುರ ನಾಗೇಂದ್ರ ಅವರು, “ಸಂಘಟನೆಯ ಕೆಲಸದ ನಿಮಿತ್ತ ಮಂಡ್ಯಕ್ಕೆ ಬಂದಿದ್ದೆ. ಜಿಲ್ಲಾಧಿಕಾರಿ ಕಚೇರಿಗೆ ಸ್ನೇಹಿತರೊಂದಿಗೆ ಹೋಗುತ್ತಿದ್ದೆ. ಇಂಗಲಗುಪ್ಪೆ ಕೃಷ್ಣೇಗೌಡರ ಕಾರನ್ನು ಅತಿವೇಗವಾಗಿ ಓಡಿಸಿಕೊಂಡು ಬಂದು ನಾನು ಹೋಗುತ್ತಿದ್ದಲ್ಲಿ ಬ್ರೇಕ್ ಹಾಕಿ ನಿಲ್ಲಿಸಲಾಯಿತು. ಮೂರು ಜನರು ಕಾರಿನಿಂದ ಇಳಿದರು. ಕೃಷ್ಣೇಗೌಡ ಮಾತನಾಡುತ್ತಾ, ‘ಏನ್ ಮಂಡ್ಯ ಜಿಲ್ಲೆಗೆ ಬಂದುಬಿಟ್ಟಿದ್ದೀಯಾ? ನನ್ನ ಮೇಲೆ ಕಂಪ್ಲೇಟ್ ಕೊಟ್ಟಿದ್ರಿ. ನಿಮ್ಮನ್ನೆಲ್ಲ ಹೆಂಗೆ ನೋಡಿಕೊಳ್ಳಬೇಕೋ ನೋಡಿಕೊಳ್ಳುತ್ತೇನೆ. ಮುಂದೆ ನಿನ್ನನ್ನು ಮುಗಿಸುತ್ತೇನೆ’ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆಬೆದರಿಕೆ ಹಾಕುವ ಜೊತೆಗೆ ನನ್ನ ಮೇಲೆ ದೌರ್ಜನ್ಯವನ್ನೂ ನಡೆಸಿದ್ದಾರೆ. ನಮ್ಮ ಸ್ನೇಹಿತರೆಲ್ಲ ಓಡಿಬಂದಾಗ, ಜಿಲ್ಲಾಧಿಕಾರಿ ಕಚೇರಿಗೆ ಕೃಷ್ಣ ಅವರು ಓಡಿಹೋದರು. ಈ ಕುರಿತು ದೂರು ನೀಡಿದ್ದೇನೆ. ಐಪಿಸಿ ಸೆಕ್ಷನ್ 506, 341, 323, 279 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ತಿಳಿಸಿದ್ದಾರೆ.
“ರೈತ ಸಂಘದ ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿರುವ ವ್ಯಕ್ತಿ ಕೃಷ್ಣ. ಪೋರ್ಜರಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಸಾಲ ತೆಗೆದಿದ್ದಾರೆ. ಈ ಕುರಿತು ತನಿಖೆಯಾಗಲಿ ಎಂದು ಒತ್ತಾಯಿಸಿದ್ದೆವು. ರೌಡಿ ಶೀಟರ್ ಆಗಿರುವ ಇವರು ಹಸಿರು ಟವೆಲ್ ಹಾಕಿಕೊಂಡು ರಕ್ಷಣೆ ಪಡೆಯುತ್ತಿದ್ದಾರೆ” ಎಂದು ದೂರಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೃಷ್ಣ, “ರಸ್ತೆ ದುರಸ್ತಿ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ನೀಡಲು ಹೋಗಿದ್ದಾಗ ಬಡಗಲಪುರ ನಾಗೇಂದ್ರ ಮತ್ತು ಮತ್ತವರ ಬೆಂಬಲಿಗರು ಬೆದರಿಕೆ ಒಡ್ಡಿದರು. ನಂತರ ಕಾರು ತಡೆದು ಹಲ್ಲೆಗೆ ಯತ್ನಿಸಿದರು. ಘಟನೆ ವಿಡಿಯೊ ಮಾಡುತ್ತಿದ್ದ ಬೆಂಬಲಿಗರ ಮೇಲೂ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಆರೋಪ ಪ್ರತ್ಯಾರೋಪ ಸಂಬಂಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.