ಜಪಾನ್ ದೇಶದ ಮಂಗಾ ಕಲಾವಿದೆ ಅಥವಾ ಹೊಸ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೋ ಟಟ್ಸುಕಿ ಅವರು ಜುಲೈ 5,2025ರಂದು ಜಪಾನ್‌ನಲ್ಲಿ ಭೀಕರ ಸುನಾಮಿ ಸಂಭವಿಸುತ್ತದೆ ಎಂದು ಹೇಳಿರುವುದನ್ನು ಭಾರತದ ಮಾಧ್ಯಮಗಳು ಒಳಗೊಂಡಂತೆ ವಿಶ್ವದ ಹಲವಾರು ಮಾಧ್ಯಮಗಳು ವೈಭವೀಕರಿಸಿ ಸುದ್ದಿ ಮಾಡಿದ್ದವು. ವೈಜ್ಞಾನಿಕ ಆಧಾರವಿಲ್ಲದ ಇಂತಹ ಸುದ್ದಿಗಳು ಜನರಲ್ಲಿ ಭೀತಿಯನ್ನೂ, ಗೊಂದಲವನ್ನು ಹೆಚ್ಚಿಸುತ್ತದೆ ಎಂದು ಮಂಗಳೂರು ವಿವಿಯ ಸಾಗರ ಭೂ ವಿಜ್ಞಾನ ವಿಭಾಗದ ಮಾಜಿ ಪ್ರಾಧ್ಯಾಪಕರಾದ ಡಾ. ಬಿ ಆರ್ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಜಪಾನ್ ವಿಶ್ವದ ಅತ್ಯಂತ ಭೂಕಂಪ ಸಕ್ರಿಯ ಪ್ರದೇಶಗಳಲ್ಲಿ ಒಂದಾಗಿದೆ ಎಂಬುದು ಸತ್ಯ. ಈವರೆಗೆ ಜಪಾನ್‌ನಲ್ಲಿ ಹಲವಾರು ಭೀಕರ ಭೂಕಂಪಗಳು ಮತ್ತು ಸುನಾಮಿಗಳು ಸಂಭವಿಸಿರುವುದೂ ನಿಜ. ಆದರೂ ಕೂಡ, ಭೂಕಂಪ ಅಥವಾ ಸುನಾಮಿಯನ್ನು ನಿಖರವಾಗಿ ಯಾವ ದಿನ, ಯಾವ ಸಮಯದಲ್ಲಿ ಸಂಭವಿಸುತ್ತವೆ ಎಂಬುದನ್ನು ಹೇಳಬಹುದಾದ ಯಾವುದೇ ವಿಜ್ಞಾನ ಅಥವಾ ತಂತ್ರಜ್ಞಾನವನ್ನು ಈವರೆಗೆ ಅಭಿವೃದ್ಧಿಪಡಿಸಲಾಗಿಲ್ಲ ಎಂದು ಮಂಜುನಾಥ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ
ಭೂಕಂಪವು ಭೂಮಿಯ ಲಿಥೋಸ್ಫಿಯರ್‌ನಲ್ಲಿ ಒತ್ತಡ ಸಂಗ್ರಹವಾಗಿ, ಬಂಡೆಗಳು ಒತ್ತಡವನ್ನು ತಡೆಯಲಾಗದೆ ಒಡೆಯುವುದರಿಂದ ಉಂಟಾಗುತ್ತದೆ. ಈ ಆಕಸ್ಮಿಕ ಒಡಕು ಭೂಕಂಪ ತರಂಗಗಳ ರೂಪದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ತರಂಗಗಳು ಭೂಮಿಯ ಮೇಲ್ಮೈಯಲ್ಲಿ ಕಂಪನವನ್ನು ಉಂಟುಮಾಡುತ್ತವೆ, ಇದು ಭೂಕಂಪವಾಗಿ ಅನುಭವವಾಗುತ್ತದೆ. ಪ್ರಮುಖ ಭೂಕಂಪ ಅಥವಾ ಸುನಾಮಿಯಿಂದ ಬಿಡುಗಡೆಯಾಗುವ ಶಕ್ತಿಯು ಪರಮಾಣು ಸ್ಫೋಟಕ್ಕೆ ಸಮಾನವಾಗಿರಬಹುದು, ಆದರೆ ಈ ಒತ್ತಡ ಯಾವಾಗ ಒಡೆಯುತ್ತದೆ ಎಂಬುದನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ ಎಂದು ಮಂಜುನಾಥ್ ತಿಳಿಸಿದ್ದಾರೆ.
ಜುಲೈ 5, 2025ರಂದು ಜಪಾನ್‌ನಲ್ಲಿ ‘ದೊಡ್ಡ ಸುನಾಮಿ’ ಸಂಭವಿಸುತ್ತದೆ ಎಂಬ ಮಾತು ವೈಜ್ಞಾನಿಕವಾಗಿ ಅಸಾಧ್ಯ. ಏಕೆಂದರೆ ಶಿಲೆಗಳಲ್ಲಾಗುವ ಒತ್ತಡ ಯಾವಾಗ ತೀವ್ರವಾಗಿ ಹರಿದು ಭೂಕಂಪ ಉಂಟಾಗುತ್ತದೆ ಎಂಬುದನ್ನು ನಿಖರವಾಗಿ ಯಾರೂ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ರೀತಿಯ ಹೇಳಿಕೆಗಳು ಕೇವಲ ಊಹಾಪೋಹವಾಗಿಯೇ ಉಳಿಯುತ್ತವೆ. ಆದ್ದರಿಂದ ಮಾಧ್ಯಮಗಳು ಸೃಷ್ಟಿಸುವ ಇಂತಹ ಸುಳ್ಳುಗಳನ್ನು ಸಾರ್ವಜನಿಕರು ನಂಬಬಾರದು.ಈ ರೀತಿಯ ಊಹಾಪೋಹಗಳು ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುವುದರಿಂದ, ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಅಗತ್ಯವಾಗಿದೆ ಎಂದು ಡಾ. ಬಿ ಆರ್ ಮಂಜುನಾಥ್ ಮನವಿ ಮಾಡಿದ್ದಾರೆ.
