ರಾಜ್ಯದಲ್ಲಿ ಹಲವೆಡೆ ಮಳೆ ಆರಂಭವಾಗಿದ್ದು, ಮೈಸೂರು ಹಾಗೂ ಬೆಂಗಳೂರಿನ ಅಲ್ಲಲ್ಲಿ ಸೋಮವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಬಿಟ್ಟೂ ಬಿಡದೆ ಮಳೆ ಸುರಿದಿದೆ. ಸಂಜೆ ವೇಳೆ ಸುರಿದ ಭಾರೀ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಉಂಟಾಗಿತ್ತು.
ಮೈಸೂರಿನಲ್ಲೂ ಅಧಿಕ ಮಳೆ ಸುರಿದಿದ್ದು, ಸತತ ಒಂದೂವರೆ ಗಂಟೆಯಿಂದ ಸುರಿದ ಧಾರಾಕಾರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಗಿತ್ತು. ದಿಢೀರ್ ಮಳೆಯಿಂದಾಗಿ ಜನರು ಆಶ್ರಯಕ್ಕಾಗಿ ಬಸ್ ನಿಲ್ದಾಣಗಳ ಮೊರೆ ಹೋಗುತ್ತಿದ್ದ ದೃಶ್ಯ ಕಂಡುಬಂದಿತ್ತು.
ಮೂರು ದಿನ ಭಾರೀ ಮಳೆಯ ಎಚ್ಚರಿಕೆ
ಸೋಮವಾರ ತಮಿಳುನಾಡು ಮೂಲಕ ಕನ್ಯಾಕುಮಾರಿವರೆಗೆ ಸಮುದ್ರ ಮಟ್ಟದಲ್ಲಿ ಟ್ರಫ್(ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ) ಎದ್ದಿದೆ. ಇದರ ಪ್ರಭಾವದಿಂದಾಗಿ ದಕ್ಷಿಣ ಒಳನಾಡಲ್ಲಿ ಇನ್ನು ಮೂರು ದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಿದೆ.