ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ ಕೆ ಸುರೇಶ್ ಸೋಲನ್ನು ನನ್ನ ವೈಯಕ್ತಿಕ ಸೋಲು ಎಂದು ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಸಿ.ಎನ್.ಮಂಜುನಾಥ್ 2.69 ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಬಗ್ಗೆ ಈ ಸಂದರ್ಭದಲ್ಲಿ ಉಲ್ಲೇ ಖಿಸಿದರು.
“ಇದು ನನ್ನ ವೈಯಕ್ತಿಕ ಸೋಲು. ಬೆಂಗಳೂರು ಗ್ರಾಮಾಂತರ ಸೋಲಿನಿಂದ ಮೊದಲು ಚೇತರಿಸಿಕೊಳ್ಳಬೇಕು. ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ. ನಾನು ಸೋತಿದ್ದೇನೆ ಎಂದ ಮಾತ್ರಕ್ಕೆ ಸುಮ್ಮನಿರುವುದಿಲ್ಲ” ಎಂದರು.
“ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ವಿರೋಧಿ ಮತಗಳು ಒಂದಾಗುತ್ತವೆ ಎಂದು ಗೊತ್ತಿತ್ತು. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ಮತಗಳು ಒಟ್ಟಿಗೆ ಬರುತ್ತವೆ ಎಂದು ನಮಗೆ ತಿಳಿದಿತ್ತು. ಆದರೆ ಅದು ಆ ರೀತಿ ಆಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ.ಇದು ನನ್ನ ವೈಯಕ್ತಿಕ ಸೋಲು” ಎಂದು ಹೇಳಿದರು.
ಚನ್ನಪಟ್ಟಣಕ್ಕೆ ಡಿ ಕೆ ಸುರೇಶ್ ನಿಲ್ಲಿಸುವ ಚಿಂತನೆಯಿಲ್ಲ
ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ ಕೆ ಸುರೇಶ್ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಶಿವಕುಮಾರ್, ಆ ಬಗ್ಗೆ ಯಾವುದೇ ಚಿಂತನೆ ಸದ್ಯಕ್ಕಿಲ್ಲ. ಮಾಧ್ಯಮದವರಿಗೆ ಆ ಬಗ್ಗೆ ಚಿಂತನೆಯಿರಬೇಕು ಅಷ್ಟೇ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
“ಈಗಾಗಿರುವ ಸೋಲಿನಿಂದ ಚೇತರಿಸಿಕೊಳ್ಳಬೇಕಿದೆ. ಸೋತೆವು ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ. ನನ್ನನ್ನು ನಂಬಿರುವ ಜನ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡುತ್ತೇನೆ. ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಲು ತಂತ್ರ, ಪ್ರತಿತಂತ್ರ ಏನು ಮಾಡಬೇಕೋ ಎಲ್ಲವೂ ಗೊತ್ತಿದೆ. ದೊಡ್ಡ, ದೊಡ್ಡ ನಾಯಕರೇ ಸೋತಿದ್ದಾರೆ” ಎಂದು ಡಿ ಕೆ ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ 14 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಆದರೂ, 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆಯಾಗಿದ್ದೇವೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನ ಬರಬೇಕಿತ್ತು. ಕಡಿಮೆ ಸ್ಥಾನ ಬಂದಿದ್ದರ ಬಗ್ಗೆ ಚಿಂತನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ, ಮುಂದೆ ಅದನ್ನು ಸರಿಪಡಿಸುತ್ತೇವೆ ಎಂದರು.
ನನ್ನ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಗೆಲುವು ಸಾಧಿಸಿದ್ದು, ಅವರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಪಕ್ಷಕ್ಕಿಂತ ಅಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಆದರೂ, ಇಷ್ಟು ದೊಡ್ಡ ಅಂತರದಲ್ಲಿ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ಡಿ.ಕೆ.ಸುರೇಶ್ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧ ಇರಲಿಲ್ಲ. ಜನರು ಡಾ.ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಅವರನ್ನು ಗೆಲ್ಲಿಸಿದ್ದಾರಷ್ಟೆ. ಕನಕಪುರ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಆದರೆ, ಅಷ್ಟು ಕಡಿಮೆ ಅಂತರ ಬಂದಿದ್ದನ್ನು ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶದ ಮೂಲಕ ಜನರು ನೀಡಿರುವ ಸಂದೇಶವನ್ನು ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪನ್ನು ಒಪ್ಪುತ್ತೇನೆ ಎಂದು ಹೇಳಿದರು.
