ಒಳಮೀಸಲಾತಿಗೆ ಲಂಬಾಣಿ (ಬಂಜಾರ) ಸಮುದಾಯದ ವಿರೋಧ ಇಲ್ಲ. ಆದರೆ ನಿಖರ ದತ್ತಾಂಶ ಸಂಗ್ರಹವಾಗುವವರೆಗೂ ಒಳಮೀಸಲಾತಿ ಜಾರಿ ಮಾಡಬಾರದು ಎಂಬ ಸಂದೇಶವನ್ನು ಬಂಜಾರ ಜನಜಾಗೃತಿ ರಾಜ್ಯ ಸಮಾವೇಶ ನೀಡಿದೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಸಮುದಾಯದ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸ್ವಾಮೀಜಿಗಳು, ವಕೀಲರು, ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ನಾಯೆಕ್, ಡಾವೊ ಕಾರಬಾರಿಗಳು, ನಸಾಬಿಗಳು ಪಾಲ್ಗೊಂಡಿದ್ದರು.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ವಾಸ್ತವಿಕ ದತ್ತಾಂಶಗಳ ಆಧಾರದಲ್ಲಿ ಪ್ರಾತಿನಿಧ್ಯದ ಕೊರತೆ ಸಾಬೀತುಪಡಿಸಬೇಕು. ಅಗತ್ಯ ಸಮೀಕ್ಷೆ, ಅಧ್ಯಯನದ ಮೂಲಕ ವಾಸ್ತವಿಕ ಪರಿಸ್ಥಿತಿಗಳನ್ನು ಪತ್ತೆ ಹಚ್ಚಬೇಕು. ಆನಂತರ ಪ್ರಾತಿನಿಧ್ಯ ಇಲ್ಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅವಕಾಶ ಆಗುವಂತೆ ವರ್ಗೀಕರಣ ಮಾಡಬಹುದು ಎಂದು ಕೋರ್ಟ್ ಇತ್ತೀಚೆಗೆ ಹೇಳಿದೆ. ಇದರನ್ವಯ ಒಳಮೀಸಲಾತಿ ಜಾರಿಯಾಗಲಿ ಎಂದು ಬಂಜಾರ ಸಮುದಾಯ ಹಕ್ಕೊತ್ತಾಯ ಮಂಡಿಸಿದೆ.
ವರ್ಗೀಕರಣ ವೇಳೆ ಸಮುದಾಯಗಳ ಹಕ್ಕುಗಳು ಮತ್ತು ಅವಕಾಶಗಳಿಗೆ ತೊಂದರೆ ಮಾಡಬಾರದು. ರಾಜ್ಯ ಸರ್ಕಾರಗಳು ಮಾಡಬಹುದಾದ ಮೀಸಲಾತಿ ವರ್ಗೀಕರಣ ಪ್ರಕ್ರಿಯೆಯು ನ್ಯಾಯಾಲಯದ ಪರಾಮರ್ಶೆಗೆ ಒಳಪಡಲಿದೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸಮಾವೇಶ ತಿಳಿಸಿದೆ.
ಪರಿಶಿಷ್ಟ ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯನ್ನು ವಾಸ್ತವಿಕ ದತ್ತಾಂಶಗಳ ಮೂಲಕ ನಿರೂಪಿಸಿ ಸಾಬೀತುಪಡಿಸಲು ರಾಜ್ಯ ಸರ್ಕಾರದ ಬಳಿ ಸದ್ಯ ಯಾವುದೇ ವೈಜ್ಞಾನಿಕ ಅಧ್ಯಯನ, ಸಮೀಕ್ಷೆ, ಪರಾಮರ್ಶೆ ಮಾಡಿರುವ ವರದಿಗಳು ಇಲ್ಲ. ನೂರೊಂದು ಪರಿಶಿಷ್ಟ ಜಾತಿ ಸಮುದಾಯಗಳ ನಿಖರವಾದ ಜನಸಂಖ್ಯೆ, ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಸ್ಥಿತಿಗಳನ್ನು ಒಳಗೊಂಡಿರುವ ವಾಸ್ತವಿಕ ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸಲು ಅಗತ್ಯವಿರುವ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಬೇಕಿದೆ. ಪ್ರತಿ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಗುರುತಿಸಬೇಕಿದೆ. ಜೊತೆಗೆ ಪ್ರಾತಿನಿಧ್ಯದ ಕೊರತೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಬಹಿರಂಗ ಚರ್ಚೆಗೆ ಒಳಪಡಿಸಬೇಕಿದೆ ಎಂದು ಸಮಾವೇಶ ಆಗ್ರಹಿಸಿದೆ.
ನಮ್ಮ ಸಮುದಾಯಗಳ ಹೋರಾಟದ ಕಾರಣದಿಂದಾಗಿ ಜಸ್ಟಿಸ್ ಸದಾಶಿವ ಆಯೋಗದ ವರದಿಯು ಅಪ್ರಸ್ತುತ ಎಂದು ತೀರ್ಮಾನಿಸಿ ರಾಜ್ಯ ಸರ್ಕಾರ ಅದನ್ನು ಮುಕ್ತಾಯಗೊಳಿಸಿದೆ. ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ‘ಶೈಕ್ಷಣಿಕ, ಸಾಮಾಜಿಕ ಸಮೀಕ್ಷಾ ವರದಿ’ ಅಂಗೀಕಾರವಾಗಿಲ್ಲ. ಹೀಗಾಗಿ ಇದನ್ನು ಅವಲಂಬಿಸಿ ಮೀಸಲಾತಿ ವರ್ಗೀಕರಣ ಸಾಧ್ಯವಿಲ್ಲ. ಸರ್ವಪಕ್ಷಗಳು, ಕಾನೂನು ತಜ್ಞರು ಮತ್ತು ಸಮಾಜಶಾಸ್ತ್ರ ತಜ್ಞರ ಅಭಿಪ್ರಾಯ ಪಡೆದು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು. ನಾಡಿನ ಬಂಜಾರರು ಸೇರಿದಂತೆ ದಮನಿತ ಸಮುದಾಯಗಳ ಹಿತರಕ್ಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯ ಸರ್ಕಾರ ನೇಮಿಸಿರುವ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಅವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ತರಾತುರಿಯಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಮಾಡಬಾರದು. ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಸಮಗ್ರ ಅಧ್ಯಯನ ಮಾಡಬೇಕು. ವಾಸ್ತವಿಕ ದತ್ತಾಂಶ ಸಂಗ್ರಹಿಸಲು ಹೊಸದಾಗಿ ಪರಿಶಿಷ್ಟ ಜಾತಿಗಳ ಗಣತಿ, ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಆಯೋಗವು ರಾಜ್ಯವ್ಯಾಪಿ ಪ್ರವಾಸ ಮಾಡಿ ಸಮುದಾಯಗಳ ಬಂಧುಗಳ ಅಹವಾಲು ಸ್ವೀಕರಿಸಬೇಕು. ಜೊತೆಗೆ ಎಲ್ಲ ಪರಿಶಿಷ್ಟ ಜಾತಿಗಳ ಜನಪ್ರತಿನಿಧಿಗಳನ್ನು, ತಜ್ಞರನ್ನು ಆಹ್ವಾನಿಸಿ ಮಾಹಿತಿ, ಅಹವಾಲು ಪಡೆಯಬೇಕು ಎಂದು ಸಮಾವೇಶ ಹೇಳಿದೆ.
ಇದನ್ನೂ ಓದಿರಿ: ಬಡವರ ಬಿಪಿಎಲ್ ಕಾರ್ಡ್ ರದ್ದಾದರೆ ಅಧಿಕಾರಿಗಳ ವಿರುದ್ಧವೇ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಸಮಾವೇಶದಲ್ಲಿ ಸೇನಾ ಭಗತ್ ಮಹಾರಾಜ, ಶಿವಪ್ರಕಾಶ್ ಮಹಾರಾಜ್, ಸರ್ದಾರ್ ಸ್ವಾಮೀಜಿ, ಧೆನಾ ಭಗತ್ ಗುರೂಜಿ, ಮೂರಾಹರಿ ಮಹಾರಾಜ್, ವಿಠ್ಠಲ್ ಮಹಾರಾಜ್, ಮಂಜು ಮಹಾರಾಜ್, ತಿಪ್ಪೇಸ್ವಾಮಿ ಮಹಾರಾಜ್, ವೆಂಕಟೇಶ ಗುರೂಜಿ, ನಾಗುಸಾದ್ ಪಂಡಿತ್ ಸಾನ್ನಿಧ್ಯ ವಹಿಸಿದ್ದರು. ಸಮಾವೇಶದ ಅಧ್ಯಕ್ಷತೆಯನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ವಹಿಸಿದ್ದರು. ಶಾಸಕಿ ಶಾರದಾಬಾಯಿ ಪೂರ್ಯನಾಯ್ಕ, ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಸಚಿವರಾದ ರೇವುನಾಯ್ಕ ಬೆಳಮಗಿ, ಪಿ.ಟಿ.ಪರಮೇಶ್ವರ ನಾಯ್ಕ, ಬಾಬುರಾವ್ ಚವ್ಹಾಣ್, ಮಾಜಿ ಶಾಸಕರಾದ ಪ್ರಕಾಶ್ ರಾಠೋಡ್, ಬಸವರಾಜ್ ನಾಯ್ಕ, ಜಲಜಾಬಾಯಿ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಯದೇವ ನಾಯ್ಕ, ವಕೀಲರಾದ ಎನ್.ಅನಂತನಾಯ್ಕ, ಸುಭಾಷ್ ರಾಠೋಡ್, ಎನ್.ಆರ್.ನಾಯ್ಕ, ನಿವೃತ್ತ ನ್ಯಾಯಾಧೀಶರಾದ ಗಣೇಶ್ ನಾಯ್ಕ, ಸುಭಾಷ್ ಚಂದ್ರ ರಾಠೋಡ್, ಬಂಜಾರ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ, ಬಾಲರಾಜ್ ನಾಯ್ಕ, ರಾಘವೇಂದ್ರ ನಾಯ್ಕ, ಪಾಂಡುರಂಗ ಪಮ್ಮಾರ್, ಗಣೇಶ್ ನಾಯ್ಕ ಗೋರ್ ಸಿಕವಾಡಿ, ಶೈಲಜಾ ಬಾಯಿ ಮೊದಲಾದ ಮುಖಂಡರು ವೇದಿಕೆಯಲ್ಲಿ ಹಾಜರಿದ್ದರು.