‘ಹೆಸರೆತ್ತಿ ಪ್ರಾಣ ಭಿಕ್ಷೆ ಬೇಡಿದೆವು, ಆದರೂ ಅವರು ಸುಮ್ಮನಾಗಲಿಲ್ಲ’: ಕೊಲೆಯಾದ ರಹ್ಮಾನ್ ಜೊತೆಗಿದ್ದ ಶಾಫಿಯ ಕಣ್ಣೀರ ನುಡಿ

Date:

Advertisements

“ಅವರು ಯಾರೂ ಅಪರಿಚಿತರಲ್ಲ. ಎಲ್ಲರೂ ಪರಿಚಿತರೇ. ಅವರ ಹೆಸರು ಕರೆದುಕೊಂಡೇ ಅವರಲ್ಲಿ ಪ್ರಾಣ ಭಿಕ್ಷೆ ಬೇಡಿದೆವು. ನಮ್ಮ ಭಿಕ್ಷೆಗೆ ಅವರು ಕಿವಿಯಾಗಲಿಲ್ಲ. ರಕ್ತ ಕುಡಿಯಲೆಂದೇ ಬಂದ ಅವರು, ಅವರ ದಾಹ ತೀರಿಸಿಕೊಂಡರು. ರಹ್ಮಾನ್‌ನನ್ನು ಕೊಂದೇ ಬಿಟ್ಟರು. ನನ್ನ ಮೇಲೆ ಕಡಿದರು, ನಾನು ಓಡಿ ತಪ್ಪಿಸಿಕೊಂಡೆ. ನಮ್ಮದು ಹಲವು ವರ್ಷಗಳ ಗೆಳೆತನ. ಕೊನೆ ಕ್ಷಣದಲ್ಲಿ ರಹ್ಮಾನ್‌ನ ಮುಖ ನೋಡುವ ಭಾಗ್ಯ ನನಗೆ ಇಲ್ಲದಾಯಿತು” ಎಂದು ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿ ಘಟನೆಯ ಕ್ಷಣವನ್ನು ವಿವರಿಸುವಾಗ ಖಲಂದರ್ ಶಾಫಿ ಕಣ್ಣಲ್ಲಿ ನೀರು ಜಿನುಗುತ್ತಿತ್ತು.

ಕಳೆದ ಮೇ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಕೋಮುವಾದಿಗಳಿಂದ ಹತ್ಯೆಯಾದ ಸಂದರ್ಭದಲ್ಲಿ ರಹ್ಮಾನ್ ಜೊತೆಯಲ್ಲಿ ಇದ್ದ ಕೊಳ್ತಮಜಲು ನಿವಾಸಿ ಖಲಂದರ್ ಶಾಫಿಯ ಮಾತುಗಳಿವು.

ಕೊಳ್ತಮಜಲು ನಿವಾಸಿ ಖಾದರ್ ಮತ್ತು ಬಿಫಾತಿಮಾ ದಂಪತಿಯ ಪುತ್ರ. ದಂಪತಿಯ ಮೂವರು ಪುತ್ರಿಯರು, ಓರ್ವ ಪುತ್ರರಲ್ಲಿ ಶಾಫಿ ಕೊನೆಯವ. ಅವಿವಾಹಿತನಾಗಿರುವ ಶಾಫಿ ಮನೆಗೆ ಆಧಾರವಾಗಿದ್ದ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಣ್ಣ ವಯಸ್ಸಿನಲ್ಲೇ ಶಾಲೆ ತೊರೆದು ಗಾರೆ ಕೆಲಸಕ್ಕೆ ಹೋಗಲು ಆರಂಭಿಸಿದ್ದ. ಮೂರು ವರ್ಷಗಳಿಂದ ಕೊಲೆಯಾದ ರಹ್ಮಾನ್‌ನ ಪಿಕ್ ಅಪ್ ಗೆ ಮರಳು ತುಂಬಿಸುವ ಕೆಲಸ ಮಾಡುತ್ತಿದ್ದ.

Advertisements

ಈದಿನ ಡಾಟ್ ಕಾಮ್ ಜೊತೆ ಮಾತನಾಡಿದ ಖಲಂದರ್ ಶಾಫಿ, “ಅಂದು ಮಧ್ಯಾಹ್ನ ಸಮಯ. ಜೋರಾಗಿ ಮಳೆ ಸುರಿಯುತ್ತಿತ್ತು. ರಹ್ಮಾನ್ ನನಗೆ ಕರೆ ಮಾಡಿದ. ‘ತುರ್ತಾಗಿ ದೀಪಕ್ ಮನೆಗೆ ಒಂದು ಲೋಡ್ ಮರಳು ಹಾಕುವಂತೆ ಜಗದೀಶ್ ನನಗೆ ಕರೆ ಮಾಡಿ ಹೇಳಿದ್ದಾನೆ. ಕೂಡಲೇ ನೀನು ಬಾ. ಒಂದು ಲೋಡ್ ತುಂಬಿಸಿ ಕೊಡು’ ಎಂದು ನನಗೆ ರಹ್ಮಾನ್ ತಿಳಿಸಿದ. ಜಗದೀಶ್ ನಮ್ಮದೇ ಗ್ರಾಮದ, ನಮ್ಮೊಂದಿಗೆ ದಿನ ನಿತ್ಯ ಮಾತನಾಡುವ ಗಾರೆ (ಮೇಸ್ತ್ರಿ) ಕೆಲಸ ಮಾಡುವ ವ್ಯಕ್ತಿ. ದೀಪಕ್ ಮತ್ತು ಜಗದೀಶ್ ಸಂಬಂಧಿಕರು.” ರಹ್ಮಾನ್‌ನ ಕರೆಯಂತೆ ಹೊರಡಲು ನಾನು ಸಿದ್ಧನಾಗಿ ನಿಂತೆ.

addoor 2
ಕೊಲೆಯಾದ ಅಬ್ದುಲ್ ರಹ್ಮಾನ್

ಮರಳು ತುಂಬಿಸುವ ಸ್ಥಳಕ್ಕೆ ನಾನು ಯಾವಾಗಲೂ ನನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆ. ರಹ್ಮಾನ್‌ನ ಪಿಕ್ ಅಪ್‌ನಲ್ಲಿ ಟಿಪ್ಪರ್ ಮಾದರಿಯಲ್ಲಿ ಸ್ವಯಂ ಅನ್ ಲೋಡ್ ಮಾಡುವ ವ್ಯವಸ್ಥೆ ಇರುವುದರಿಂದ ಅನ್ ಲೋಡ್ ಮಾಡಲು ಜನ‌ ಬೇಕಾಗಿಲ್ಲ. ಹಾಗಾಗಿ ನಾನು ಮರಳು ತುಂಬಿಸಿದ ಬಳಿಕ ನನ್ನ ಮನೆಗೆ ತೆರಳುತ್ತಿದ್ದೆ. ರಹ್ಮಾನ್ ಯಾರು ಮರಳಿಗೆ ಹೇಳಿರುತ್ತಾರೊ‌ ಅಲ್ಲಿಗೆ ಮರಳು ತೆಗೆದುಕೊಂಡು ಹೋಗುತ್ತಿದ್ದ ಎಂದು ಶಾಫಿ ತಮ್ಮ ದೈನಂದಿನ ವ್ಯವಹಾರವನ್ನು ವಿವರಿಸಿದರು.

ಘಟನೆ ನಡೆದ ದಿನ ರಹ್ಮಾನ್ ನನಗೆ ಪಿಕ್ ಅಪ್ ನಲ್ಲಿ ಬರುವಂತೆ ಹೇಳಿದ. ಮನೆಗೆ ಸಿಮೆಂಟ್ ಬೇಕಿದೆ. ನಾನು ವಾಪಸ್ ಇಲ್ಲಿಗೆ ಬರುತ್ತೇನೆ ಎಂದ. ಹಾಗಾಗಿ ನಾನು ದ್ವಿಚಕ್ರ ವಾಹನ ಬಿಟ್ಟು ರಹ್ಮಾನ್‌ನ ಪಿಕಪ್‌ನಲ್ಲಿ ಹೋದೆ. ಪಿಕಪ್‌ನಲ್ಲಿ ಹೋಗುತ್ತಿರುವಾಗ “ಜಗದೀಶ್ ದಪ್ಪ ಮರಳು ಹಾಕುವಂತೆ ಹೇಳಿದ್ದಾನೆ” ಎಂದು ರಹ್ಮಾನ್ ನನಗೆ ತಿಳಿಸಿದ. ಮರಳು ರಾಶಿ ಹಾಕಿದ್ದ ಜಾಗದಲ್ಲಿ ಸಪೂರ ಮರಳು ಎದುರು ಭಾಗದಲ್ಲಿ ಇತ್ತು. ಅದರ ಹಿಂಭಾಗದಲ್ಲಿ ದಪ್ಪ ಮರಳು ಇತ್ತು. ಸಪೂರ ಮರಳು ನಮಗೆ ಸುಲಭದಲ್ಲಿ ತುಂಬಿಸಬಹುದಿತ್ತು. ದಪ್ಪ ಮರಳು ಹಿಂಭಾಗದಲ್ಲಿದ್ದರಿಂದ ತುಂಬಾ ಕಷ್ಟಪಟ್ಟು ತುಂಬಿಸಿ ದೀಪಕ್ ಮನೆಗೆ ತೆಗೆದುಕೊಂಡು ಹೋದೆವು.

ದೀಪಕ್ ಮನೆಗೆ ತಲುಪಿದಾಗ ದೀಪಕ್ ಮನೆಯಲ್ಲಿದ್ದ. ನಮ್ಮನ್ನು ನೋಡಿ ಪಿಕ್ ಅಪ್ ಹತ್ತಿರ ಬಂದ. ರಹ್ಮಾನ್ ಡ್ರೈವರ್ ಸೀಟಿನಲ್ಲಿ ಕೂತಿದ್ದ. ನಾನು ಪಿಕ್ ಅಪ್ ನ ಹಿಂಭಾಗದ ಡೋರ್ ತೆಗೆಯಲು ಇಳಿದು ಹಿಂಭಾಗಕ್ಕೆ ಹೋಗಿದ್ದೆ. ಮರಳು ಅನ್ ಲೋಡ್ ಮಾಡಿದಾಗ “ಈ ಮರಳು ದಪ್ಪ ಇದೆ. ನಮಗೆ ಬೇಕಿರುವುದು ಸಪೂರ ಮರಳು” ಎಂದು ದೀಪಕ್ ಹೇಳಿದ. ನಾನು ಮುಂದೆ ಬಂದು ದೀಪಕ್ ಹೇಳಿದನ್ನು ರಹ್ಮಾನ್ ಗೆ ಹೇಳಿದೆ. ಈ ವೇಳೆ ದೀಪಕ್ ರಹ್ಮಾನ್ ಕೂತಿದ್ದ ಬಲ ಬದಿಯ ಬಾಗಿಲ ಹತ್ತಿರ ಬಂದು ನಿಂತ. ನಾನು ಡೋರ್ ತೆಗೆದು ರಹ್ಮಾನ್ ನ ಎಡ ಬದಿಯ ಸೀಟ್ ನಲ್ಲಿ ಕುಳಿತೆ. “ಜಗದೀಶ್ ಹೇಳಿರುವುದಕ್ಕೆ ದಪ್ಪ ಮರಳು ತಂದಿರುವುದು. ಅಲ್ಲಿ ಸಪೂರ ಮರಳು ಇತ್ತು” ಎಂದು ಹೇಳುತ್ತಾ ರಹ್ಮಾನ್ ಜಗದೀಶ್‌ಗೆ ಕರೆ ಮಾಡಿದ. ರಹ್ಮಾನ್ ಮಾತನಾಡಿ ಆತನ ಮೊಬೈಲ್ ಫೋನ್ ಅನ್ನು ದೀಪಕ್‌ಗೆ ಕೊಟ್ಟ.

ABDUL RAHMAN

ಈ ವೇಳೆ ದೀಪಕ್ ಮನೆ ಕಡೆಯಿಂದ ರವಿರಾಜ್ ಎಂಬಾತ ಬಂದು ನಮಗೊಂದು ಲೋಡ್ ಮರಳು ಬೇಕು. ಬೆಲೆ ಎಷ್ಟು ಎಂದು ರಹ್ಮಾನ್ ಬಳಿ ಕೇಳಿದ. “ಬೆಲೆ ಯಾಕೆ ಕೇಳುತ್ತಿದ್ದಿಯಾ? ನಾನು ಯಾರಿಂದಾದರೂ ಜಾಸ್ತಿ ತೆಗೆಯುತ್ತೇನಾ. ನಾಳೆ ಮರಳು ಹಾಕುತ್ತೇನೆ. ಹಣ ಇಲ್ಲದಿದ್ದರೆ ಪರವಾಗಿಲ್ಲ. ಇದ್ದಾಗ ಕೊಡು” ಎಂದು ನಗುತ್ತಾ ರಹ್ಮಾನ್ ಉತ್ತರಿಸಿದ.

ದೀಪಕ್ ಜಗದೀಶ್ ಜೊತೆ ಮಾತನಾಡಿ ರಹ್ಮಾನ್‌ಗೆ ಮೊಬೈಲ್ ಫೋನ್ ಕೊಟ್ಟ. ಪಿಕ್ ಅಪ್ ಡೋರಿಗೆ ಒರಗಿ ನಿಂತಿದ್ದ ರವಿರಾಜ್ ತಕ್ಷಣ ಪಿಕ್ ಅಪ್ ನ ಕೀ ಎಳೆದ. ಕೀ ಎಳೆದ ಕ್ಷಣದಲ್ಲೇ ಹಿಂದಿನಿಂದ ಬಂದಿದ್ದ ಸುಮಿತ್ ಎಂಬಾತ ಪಿಕಪ್ ನಲ್ಲಿ ಕೂತಿದ್ದ ರಹ್ಮಾನ್‌ನ ಕೈಗೆ ಕತ್ತಿಯಿಂದ ಕಡಿದ. ಬಳಿಕ ಪೃಥ್ವಿರಾಜ್ ಮತ್ತು ಚಿಂತನ್ ಎಂಬವರು ಬಂದು ರಹ್ಮಾನ್ ಮೇಲೆ ದಾಳಿ ಮಾಡಲು ಆರಂಭಿಸಿದರು.

ಇದನ್ನು ಓದಿದ್ದೀರಾ? ವಿಶೇಷ ಕಾರ್ಯಪಡೆ ರಚನೆಯಿಂದ ಕೋಮು ಹಿಂಸಾಚಾರಕ್ಕೆ ತಡೆ ನೀಡಲು ಸಾಧ್ಯವೇ?

“ಯಾಕೆ ಕಡಿಯುತ್ತಿದ್ದೀರಿ. ನಿಮಗೆ ನಾವೇನು ಮಾಡಿದ್ದೇವೆ. ನಮ್ಮನ್ನು ಬಿಟ್ಟುಬಿಡಿ” ಎಂದು ಅವರ ಹೆಸರು ಹೇಳುತ್ತಲೇ ನಾವು ಅವರಲ್ಲಿ ಬೇಡಿಕೊಂಡೆವು. ಈ ವೇಳೆ ಚಿಂತನ್ ಮತ್ತು ಪೃಥ್ವಿರಾಜ್ ನಾನು ಕೂತಿದ್ದ ಬದಿಗೆ ಬಂದು ನನ್ನ ಮೇಲೆ ದಾಳಿ ಮಾಡಲು ಆರಂಭಿಸಿದರು. ದೀಪಕ್, ರವಿರಾಜ್, ಸುಮಿತ್ ರಹ್ಮಾನ್ ಮೇಲೆ ಕತ್ತಿಯಿಂದ ದಾಳಿ ನಡೆಸುತ್ತಿದ್ದರು. ದಾಳಿಯಿಂದ ನನ್ನ ಎಡ ಕೈಗೆ ಗಾಯವಾಯಿತು. ಬೆರಳು ನೇತಾಡುತ್ತಿತ್ತು. ಕತ್ತಿಯ ಒಂದು ಏಟು ನನ್ನ ಬಲ ಎದೆಗೆ ಬಿದ್ದು ರಕ್ತ ಬರುತ್ತಿತ್ತು.

ನನ್ನ ಮೇಲೆ ದಾಳಿ ಮಾಡುತ್ತಿದ್ದ ಪೃಥ್ವಿರಾಜ್ “ಆತ ಸತ್ತನಾ?” ಎಂದು ರಹ್ಮಾನ್ ಮೇಲೆ ದಾಳಿ ಮಾಡುತ್ತಿದ್ದ ರವಿರಾಜ್ ಬಳಿ ಕೇಳಿದ. “ಇನ್ನೂ ಸತ್ತಿಲ್ಲ” ಎಂದು ರವಿರಾಜ್ ಉತ್ತರಿಸಿದ. ಕೂಡಲೇ ಚಿಂತನ್ ಮತ್ತು ಪೃಥ್ವಿರಾಜ್ ರಹ್ಮಾನ್ ಕಡೆ ಹೋದರು. ಪಿಕ್ ಅಪ್ ಡೋರ್ ತೆಗೆದ ಆ ಐವರು ರಹ್ಮಾನ್ ನನ್ನು ಎಳೆದು ಹೊರಗೆ ಹಾಕಿ ಮಾರಕಾಸ್ತ್ರಗಳಿಂದ ಕಡಿಯಲು ಆರಂಭಿಸಿದರು. ನಾನು ಪಿಕ್ ಅಪ್ ನ ಡ್ಯಾಶ್ ಬೋರ್ಡ್ ನಲ್ಲಿದ್ದ ನನ್ನ ಮೊಬೈಲ್ ಫೋನ್ ಅನ್ನು ಪ್ಯಾಂಟಿನ ಜೇಬಿಗೆ ಹಾಕಿ ಡೋರ್ ತೆಗೆದು ಅಲ್ಲಿಂದ ಓಡಲು ಆರಂಭಿಸಿದೆ.

ನಾನು ಓಡುತ್ತಿದ್ದಾಗ ರವಿರಾಜ್ ಮತ್ತು ದೀಪಕ್ ನನ್ನ ಬೆನ್ನಟ್ಟಿ ಬಂದರು. ರವಿರಾಜ್ ಬೀಸಿದ ತಲವಾರು ನನ್ನ ಬೆನ್ನಿಗೆ ತಾಗಿತು. ಗಾಯವಾಯಿತು. ಒಂದು ಈ ಗಾಯ ಸ್ವಲ್ಪ ಆಳವಾಗುತ್ತಿದ್ದರೆ ಹೃದಯಕ್ಕೆ ತಲವಾರು ತಾಗಿ ನಿನ್ನ ಜೀವ ಹೋಗುತ್ತಿತ್ತು ಎಂದು ವೈದ್ಯರು ನನಗೆ ತಿಳಿಸಿದ್ದಾರೆ. ಸ್ವಲ್ಪ ದೂರದ ವರೆಗೆ ನನ್ನ ಬೆನ್ನು ಹಟ್ಟಿಕೊಂಡು ಬಂದ ರವಿರಾಜ್ ಮತ್ತು ದೀಪಕ್ ವಾಪಸ್ ಹೋದರು. ನಾನು ಓಡುತ್ತಾ ಮರಗಳು ತುಂಬಿದ ನಿರ್ಜನ ಗುಡ್ಡೆಯಲ್ಲಿ ಹೋಗಿ ಕುಳಿತೆ.

ಕೈಯಲ್ಲಿ ರಕ್ತ ಇದ್ದ ಕಾರಣ ಬೇಜಿನಿಂದ ಮೊಬೈಲ್ ಫೋನ್ ತೆಗೆದಾಗ ಅದರಲ್ಲಿ ಕೂಡಾ ರಕ್ತ ತುಂಬಿತ್ತು. ಮೊಬೈಲ್ ಡಿಸ್ಪೆ ಮೇಲೆ ರಕ್ತ ಇದ್ದಿದ್ದರಿಂದ ನನಗೆ ಮೊಬೈಲ್ ಲಾಕ್ ತೆಗೆಯಲು ಆಗುತ್ತಿರಲಿಲ್ಲ. ಎಡ ಕೈ ಕಡಿದ ಗಾಯ ವಾಗಿತ್ತು. ಬಲ ಕೈ ನಡುಗುತ್ತಿತ್ತು. ಮೊಬೈಲ್ ಅನ್ನು ಪ್ಯಾಂಟ್ ಗೆ ಉಜ್ಜಿ ಉಜ್ಜಿ ರಕ್ತ ಒರೆಸಿ ನಡುಗುತ್ತಿದ್ದ ಕೈಯಿಂದ ಹೇಗೋ ಮೊಬೈಲ್ ಲಾಕ್ ತೆಗೆದೆ. ನನ್ನ ಗೆಳೆಯರಾದ ರಾಝಿಕ್ ಮತ್ತು ಮುಸ್ತಫಾ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದೆ ಎಂದು ಕಣ್ಣೀರಿಡುತ್ತಲೇ ವಿವರಿಸಿದರು ಖಲಂದರ್ ಶಾಫಿ.

WhatsApp Image 2025 05 31 at 9.02.36 PM 2

ಸ್ಥಳಕ್ಕೆ ಬಂದ ಗೆಳೆಯರು ಅಲ್ಲಿಂದ ನನ್ನನ್ನು ಕಾರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದುಕೊಂದು ಬಂದರು. ಅರ್ಧ ದಾರಿಯಲ್ಲಿ ಆಂಬ್ಯುಲೆನ್ಸ್ ಬಂತು. ಬಳಿಕ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯ ಬೆಡ್ ನಲ್ಲಿ ನಾನು ಮಲಗಿದ್ದೇನೆ. ನನ್ನ ಗೆಳೆಯ ಆರಡಿ ಮಣ್ಣಿನಡಿ ಮಲಗಿದ್ದಾನೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ. ನಮ್ಮ ಮೇಲೂ ಯಾರಿಗೂ ದ್ವೇಷ ಇಲ್ಲ. ಮತ್ತೆ ಯಾಕೆ ಅವರು ಹೀಗೆ ಮಾಡಿದರು‌. ನಮ್ಮನ್ನು ಬಿಟ್ಟು ಬಿಡಿ ಬೇಡಿಕೊಂಡೆವು. ದೀಪಕ್ ಮರಳು ತರಿಸಿದ್ದರಿಂದ “ದೀಪಕ್ ಏನಿದು. ನೀನಾದರೂ ಅವರಿಗೆ ಹೇಳು” ಎಂದು ಸಹಾಯ ಯಾಚಿಸಿದೆವು. ಆದರೆ ಆತ ಕೂಡಾ ನಮ್ಮ ಮೇಲೆ ತಲವಾರಿನಿಂದ ದಾಳಿ ಮಾಡುತ್ತಿದ್ದ ಎಂದು ಖಲಂದರ್ ಶಾಫಿ ಕಣ್ಣೀರಿಡುತ್ತಾ ತನ್ನ ಕಣ್ಣೆದುರಿಗೆ ನಡೆದ ಘಟನೆಯನ್ನು ವಿವರಿಸಿದರು.

WhatsApp Image 2025 05 08 at 16.45.05 70e5a46e
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X