ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ (ಕೆಎಸ್‌ಡಿಸಿ) ಆಯೋಜಿಸಿರುವ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ’ಕ್ಕೆ ಸಾಗರೋಪಾದಿಯಲ್ಲಿ ಉದ್ಯೋಗಕಾಂಕ್ಷಿಗಳು ಹರಿದುಬಂದರು.
ಸೋಮವಾರ ಮತ್ತು ಮಂಗಳವಾರ ಆಯೋಜನೆಯಾಗಿರುವ ಉದ್ಯೋಗ ಮೇಳದಲ್ಲಿ ಭಾಗಿಯಾಗಿರುವ ಸಾವಿರಾರು ಆಕಾಂಕ್ಷಿಗಳಲ್ಲಿ ಅನೇಕರು ವಿವಿಧ ಕಂಪನಿಗಳ ನೇಮಕ ಪತ್ರ ಪಡೆದು ಸಂಭ್ರಮಪಟ್ಟರು.
ಮೇಳದ ಕುರಿತು ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಕೆಎಸ್‌ಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಆರ್.ಕೃಷ್ಣಕುಮಾರ್, “ಸುಮಾರು 617 ಕಂಪನಿಗಳು ಈ ಮೇಳಕ್ಕೆ ಬಂದಿವೆ. ಐಟಿ ಸೆಕ್ಟರ್, ಹಾಸ್ಪಿಟಾಲಿಟಿ, ಅಗ್ರಿಕಲ್ಚರ್, ಏರೋಸ್ಪೇಸ್, ಫೈನಾನ್ಸ್, ಬ್ಯಾಂಕಿಂಗ್ ಸೇರಿದಂತೆ ಸುಮಾರು 36 ವಲಯಗಳ ಕಂಪನಿಗಳು ಪಾಲ್ಗೊಂಡಿವೆ. ಸುಮಾರು 1,38,000 ಉದ್ಯೋಗವಕಾಶಗಳು ಇಲ್ಲಿವೆ. 88,000 ವಿದ್ಯಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಸೋಮವಾರ 22,000 ಯುವಜನರು ಬಂದಿದ್ದರು. ಮಂಗಳವಾರ 15,000ಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದಾರೆ” ಎಂದು ಮಾಹಿತಿ ನೀಡಿದರು.

“ಕಾಗದ ರಹಿತ ಉದ್ಯೋಗ ಮೇಳ ಇದಾಗಿದೆ. ಪೋರ್ಟಲ್ ಮೂಲಕವೇ ನೋಂದಣಿ ಮಾಡಿಕೊಂಡಿದ್ದೇವೆ. ಅಭ್ಯರ್ಥಿ ಮತ್ತು ಕಂಪನಿಗಳ ಮ್ಯಾಪಿಂಗ್ ಕೂಡ ಮಾಡುತ್ತಿದ್ದೇವೆ. ಅಭ್ಯರ್ಥಿಗಳು ಕನಿಷ್ಠ ಹತ್ತು ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಊಟ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ” ಎಂದು ತಿಳಿಸಿದರು.
“ಈಗಾಗಲೇ 4,000 ಮಕ್ಕಳು ಶಾರ್ಟ್ ಲೀಸ್ಟ್ ಆಗಿದ್ದಾರೆ. 1,800ಕ್ಕೂ ಹೆಚ್ಚು ಯುವಜನರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲಿ ಸಂದರ್ಶನಕ್ಕೆ ಹಾಜರಾಗಿರುವ ಕನಿಷ್ಠ ಅರ್ಧದಷ್ಟು ಜನರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಭರವಸೆ ನೀಡಿದರು.
“ಸೋಮವಾರ ಇಂಟರ್‌ನೆಟ್ ಸಮಸ್ಯೆಯಾಗಿತ್ತು. ದೊಡ್ಡಮಟ್ಟದ ಜನರು ಒಮ್ಮೆಲೆ ಸೇರುವುದರಿಂದ ಸಮಸ್ಯೆ ಆಗುತ್ತದೆ ಎಂಬ ಸೂಚನೆ ಇತ್ತು. ಪ್ಲಾನ್ ಬಿ ಪ್ರಕಾರ ಮ್ಯಾನ್ಯುಯಲಿ ಗೊಂದಲವನ್ನು ಪರಿಹರಿಸಿಕೊಂಡಿದ್ದೇವೆ” ಎಂದರು.
ಮೊದಲ ದಿನಕ್ಕಿಂತ ಎರಡನೇ ದಿನ ಜನರ ಪ್ರಮಾಣ ಕಡಿಮೆಯಾಗಿತ್ತಾದರೂ ವಿವಿಧ ಕಂಪನಿಗಳ ಕೌಂಟರ್‌ಗಳು ತುಂಬಿದ್ದವು. ರಾಜ್ಯದ ಮೂಲೆಮೂಲೆಯಿಂದ ಬಂದ ಯುವಜನರು ಉದ್ಯೋಗ ಪಡೆದುಕೊಂಡು ಖುಷಿಯನ್ನು ಹಂಚಿಕೊಂಡರು.
‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಬೆಂಗಳೂರಿನ ನಿವಾಸಿ ರಮ್ಯಾ, “ಎರಡು ದಿನವೂ ನಾನು ಮೇಳದಲ್ಲಿ ಪಾಲ್ಗೊಂಡಿರುವೆ. ಮೊದಲ ದಿನ ಐದು ಕಂಪನಿಗಳಿಗೆ ಅರ್ಜಿ ಹಾಕಿದ್ದೆ. ಆದರೆ ಆಯ್ಕೆ ಆಗಿರಲಿಲ್ಲ. ಪಟ್ಟು ಬಿಡದೆ ಎರಡನೇ ದಿನವೂ ಪ್ರಯತ್ನಿಸಿದೆ. ಪೂಜ್ಯಾಯ ಸೆಕ್ಯುರಿಟಿ ಸರ್ವೀಸ್‌ನಲ್ಲಿ ಅಕೌಂಟೆಂಟ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಸಿಕ್ಕಿದೆ. ಉದ್ಯೋಗ ಮೇಳ ಆಯೋಜಿಸಿದ್ದಕ್ಕೆ ಧನ್ಯವಾದಗಳು” ಎಂದು ಕೃತಜ್ಞತೆ ಸಲ್ಲಿಸಿದರು.

ಹಲಸೂರಿನ ನಿವಾಸಿ ಅಮೃತಾ ಮಾತನಾಡಿ, “ನಾನು ಬಿಕಾಂ ಮುಗಿಸಿದ್ದೇನೆ. ಎಲ್ಲಾ ಕಡೆ ಕೆಲಸ ಹುಡುಕುತ್ತಿದ್ದೆ. ಆದರೆ ಎಲ್ಲಿಯೂ ಸಿಕ್ಕಿರಲಿಲ್ಲ. ಕೆಎಸ್‌ಡಿಸಿಯಿಂದ ಈಗ ಉದ್ಯೋಗ ದೊರಕಿದೆ. ಅದಕ್ಕಾಗಿ ಆಭಾರಿ” ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯ ಫಖ್ರೂದ್ದೀನ್ ನದಾಫ್ ಮಾತನಾಡಿ, “ನಾನು ಐಟಿಐ ಮುಗಿಸಿದ್ದೇನೆ. ಎರಡು ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿದ್ದೆ. ಮೊನ್ನೆ ಯೂಟ್ಯೂಬ್‌ನಲ್ಲಿ ಉದ್ಯೋಗ ಮೇಳದ ಮಾಹಿತಿ ನೋಡಿ ಇಲ್ಲಿಗೆ ಬಂದೆ. ಈಗ ಕೆಲಸ ಸಿಕ್ಕಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಸ್ವಸ್ತಿಕ್ ಮಾತನಾಡಿ, “ಒಂದು ವರ್ಷದಿಂದ ಉದ್ಯೋಗ ಹುಡುಕುತ್ತಿದ್ದೆ. ಉದ್ಯೋಗ ಮೇಳದಲ್ಲಿ ಪೀಪಲ್ ಎಡ್ಜ್ ಎಂಬ ಸಂಸ್ಥೆಯಲ್ಲಿ ಈಗ ಕೆಲಸ ಸಿಕ್ಕಿದೆ. ಇತರ ಕೆಲವು ಕಂಪನಿಗಳಿಗೂ ಅರ್ಜಿ ಸಲ್ಲಿಸಿದ್ದೆ” ಎಂದರು.

ಟಾಟಾ ಕಂಪನಿಯ ಪ್ರತಿನಿಧಿ ರವಿತೇಜ ಅವರು ಪ್ರತಿಕ್ರಿಯೆ ನೀಡಿ, “ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ ಕೋರ್ಸ್ ಮುಗಿಸಿದವರನ್ನು ನಾವು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಬಾಗಲಕೋಟೆ, ಜಮಖಂಡಿ- ಹೀಗೆ ರಾಜ್ಯದ ಮೂಲೆಮೂಲೆಯಿಂದ ಯುವಜನರು ಬಂದಿದ್ದಾರೆ. ಬಹುತೇಕರು ಅತ್ಯುತ್ತಮ ಅರ್ಹತೆಯನ್ನು ಹೊಂದಿದ್ದಾರೆ. ಉದ್ಯೋಗ ಮೇಳ ನಿಜಕ್ಕೂ ಉಪಕಾರಿಯಾಗಿದೆ” ಎಂದು ಶ್ಲಾಘಿಸಿದರು.

‘ಪೀಪಲ್ ಎಡ್ಜ್’ ಸಂಸ್ಥೆಯ ಟ್ರೈನಿಗಳ ಹೆಡ್ ಅರುಣ್ ಬಾಪು ಮಾತನಾಡಿ, “ಇಂದಿನ ಕೆಲಸಗಳಿಗೆ ಬೇಕಾದ ಕೌಶಲಗಳನ್ನು ನಮ್ಮ ಸಂಸ್ಥೆ ರೂಪಿಸುತ್ತದೆ. ಕೆಎಸ್‌ಡಿಸಿಗೆ ಧನ್ಯವಾದವನ್ನು ಹೇಳಲೇಬೇಕು. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಕೆಲಸ ಬೇಕಾಗಿರುವ ತುಂಬಾ ಜನರು ನಮ್ಮನ್ನು ಭೇಟಿಯಾಗಿದ್ದಾರೆ. ಅನೇಕರಿಗೆ ಶಾರ್ಟ್ ಲೀಸ್ಟ್ ಲೆಟರ್ ಮತ್ತು ಆಫರ್ ಲೆಟರ್ ಕೊಟ್ಟಿದ್ದೇವೆ” ಎಂದು ತಿಳಿಸಿದರು.

