ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಹೊಸ ಕಾನೂನು ತರಲು ಹೊರಟಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜನಸಂದಣಿ ನಿಯಂತ್ರಣ ಮಸೂದೆ ಮಂಡಿಸಿದ್ದು ಮುಂದಿನ ಸಂಪುಟದಲ್ಲಿ ವಿಸ್ತಾರವಾಗಿ ಚರ್ಚೆ ನಡೆಸಲಿದೆ.
ಕ್ರೀಡೆ, ಸರ್ಕಸ್ ಇತರೆ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಸರ್ಕಾರ ಬಿಗಿ ನಿಯಮ ಜಾರಿಗೆ ಮುಂದಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಅಥವಾ ಕಾರ್ಯಕ್ರಮ ನಡೆಯುವಾಗ ಜನರನ್ನು ನಿಯಂತ್ರಿಸಲಾಗದಿದ್ದರೆ ಆಯೋಜಕರಿಗೆ 3 ವರ್ಷದ ತನಕ ಜೈಲು, 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.
ಕಾರ್ಯಕ್ರಮದ ಆಯೋಜಕರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಗೆ ಅರ್ಜಿ ಹಾಕಬೇಕು. ಅಲ್ಲಿಯೇ ಸ್ಥಳ, ಸಮಯ ಎಲ್ಲವೂ ನಿರ್ಧಾರ ಮಾಡಬೇಕಾಗುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೌಢ್ಯ ಬಿತ್ತುವ ಕಾವೇರಿ ಆರತಿ ಯಾವ ಪುರುಷಾರ್ಥಕ್ಕೆ?
ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಅಥವಾ ಯಾವುದೇ ಧರ್ಮ, ಜಾತಿ ಅಥವಾ ಪಂಥಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಕಾನೂನು ಅನ್ವಯ ಆಗುವುದಿಲ್ಲ.
ಕ್ರೀಡೆ, ಸರ್ಕಸ್, ಪ್ರಾಯೋಜಿತ ಕಾರ್ಯಕ್ರಮಗಳು, ರಾಜಕೀಯ ರ್‍ಯಾಲಿ ಸೇರಿದಂತೆ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳು ಈ ಮಸೂದೆ ವ್ಯಾಪ್ತಿಯಲ್ಲಿ ಬರುತ್ತದೆ. ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ, ಸಾವು ನೋವಿಗೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರಿಯಾಗುತ್ತಾರೆ.
ಗಾಯಾಳುಗಳಿಗೆ, ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಕಾರ್ಯಕ್ರಮ ಆಯೋಜಕರ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲಿ ಮಾಡಲಾಗುತ್ತದೆ.
ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ, ಗಲಾಟೆ, ಅಹಿತಕರ ಘಟನೆ ನಡೆದರೆ ಅನುಮತಿ ಇದ್ದರೂ ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರವನ್ನು ನೀಡಲಾಗಿದೆ.