ವಿದೇಶಿ ಪ್ರವಾಸದಲ್ಲಿರುವ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ‘ಭಾರತವು ಬುದ್ಧನ ನಾಡು’ ಎಂದಿದ್ದಾರೆ. ಅವರ ಈ ಹೇಳಿಕೆಯನ್ನು ಆಧರಿಸಿ ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ, ಸಂಘ ಪರಿವಾರ ಮತ್ತು ಆರ್‌ಎಸ್‌ಎಸ್‌ನ ಸೈದ್ಧಾಂತಿಕ ವಿರೋಧಾಭಾಸಗಳನ್ನು ಬಯಲಿಗೆಳೆದಿದ್ದಾರೆ. ಆರ್‌ಎಸ್‌ಎಸ್‌ನ ಮೂಲ ಸೈದ್ಧಾಂತಿಕ ಮಾರ್ಗದರ್ಶಿ ಎನಿಸಿಕೊಂಡಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರು ಭಗವಾನ್ ಬುದ್ಧ, ಬೌದ್ಧ ಧರ್ಮ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಧರ್ಮಾಂತರದ ಕುರಿತು ಹೊಂದಿದ್ದ ಕಟು ನಿಲುವು ಮತ್ತು ಭಾಗವತ್ ಅವರ ಇಂದಿನ ಹೇಳಿಕೆಗಳನ್ನು ಒಂದಕ್ಕೊಂದು ಬೆಸೆದು ಆರ್‌ಎಸ್‌ಎಸ್ ಎದುರು ಹಲವು ಪ್ರಶ್ನೆಗಳನ್ನಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಸ್ತೃತ ಪೋಸ್ಟ್ ಬರೆದಿರುವ ಪ್ರಿಯಾಂಕ್ ಖರ್ಗೆ, ’ಸಾವರ್ಕರ್ ಸಮಗ್ರ’ದ ಏಳನೇ ಸಂಪುಟದಲ್ಲಿದ್ದರುವ ಸಾವರ್ಕರ್ ಬರೆದಿದ್ದ ‘ಬೌದ್ಧಧರ್ಮವನ್ನು ಸ್ವೀಕರಿಸುವ ಮೂಲಕ ನೀವು ಅಸಹಾಯಕರಾಗುತ್ತೀರಿ’ ಎಂಬ ಶೀರ್ಷಿಕೆಯ ಲೇಖನವನ್ನು ಉಲ್ಲೇಖಿಸಿದ್ದಾರೆ. “1956ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದಾಗ, ಸಾವರ್ಕರ್ ಅವರು ‘ಕೇಸರಿ’ ಪತ್ರಿಕೆಯಲ್ಲಿ (ಅಕ್ಟೋಬರ್ 30, 1956) ಲೇಖನ ಬರೆದಿದ್ದರು. ಅದರಲ್ಲಿ, ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ನಿರ್ಧಾರವನ್ನು ಸಾವರ್ಕರ್ ಕಟುವಾಗಿ ಟೀಕಿಸಿದ್ದರು. ‘ಅಂಬೇಡ್ಕರ್ ಅವರು ಬೌದ್ಧ ಧರ್ಮದ ಮೇಲಿನ ಆಳವಾದ ನಂಬಿಕೆಯಿಂದ ಮತಾಂತರಗೊಂಡಿಲ್ಲ, ಬದಲಿಗೆ ಹಿಂದು ರಾಷ್ಟ್ರವನ್ನು ನಾಶಮಾಡುವ ಮಹತ್ವಾಕಾಂಕ್ಷೆ’ ಅವರ ಧರ್ಮಾಂತರದ ಹಿಂದಿತ್ತು’ ಎಂದಿದ್ದರು” ಎಂದು ವಿವರಿಸಿದ್ದಾರೆ.
ಮುಂದುವರೆದು. “ಅದೇ ಲೇಖನದಲ್ಲಿ ‘ಅಂಬೇಡ್ಕರ್ ಅವರು ಭಿಕ್ಷು ಅಂಬೇಡ್ಕರ್ ಆದರೂ ಅದಕ್ಕೆ ಹಿಂದು ಸಮಾಜದಲ್ಲಿ ಯಾವುದೇ ವಿಶೇಷ ಪ್ರತಿಕ್ರಿಯೆ ಇರುವುದಿಲ್ಲ. ಜಹಾನ್ ಸ್ವಯಂ ಬುದ್ಧ ಹಾರ್ ಗಯೇ, ವಹಾನ್ ಅಂಬೇಡ್ಕರ್ ಕಿಸ್ ಝಾಡ್ ಕಿ ಪತ್ತಿ ಹೈ?” (ಸ್ವತಃ ಬುದ್ಧನೇ ಯಶಸ್ವಿಯಾಗದಿದ್ದಾಗ, ಅಂಬೇಡ್ಕರ್ ಯಾವ ಲೆಕ್ಕ?) ಎಂದು ಬುದ್ಧ ಮತ್ತು ಅಂಬೇಡ್ಕರ್ ಇಬ್ಬರನ್ನೂ ಸಾವರ್ಕರ್ ನಿಂದಿಸಿದ್ದರು” ಎಂದು ಖರ್ಗೆ ನೆನಪಿಸಿದ್ದಾರೆ.
Dr @DrMohanBhagwat recently said, “India is the land of Buddha.”
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 6, 2026
Interesting.
Because the ideological father figure of the @RSSorg, “Veer” Savarkar, was deeply critical of Buddha, Buddhism and of Babasaheb Ambedkar’s decision to embrace Buddhism.
In the 7th volume of “Savarkar… pic.twitter.com/xdw0894YQk
ಸಾವರ್ಕರ್ ಬರೆದಿದ್ದ ಈ ಲೇಖನವನ್ನು ಆಧರಿಸಿ ಮೋಹನ್ ಭಾಗವತ್‌ಗೆ ಪ್ರಶ್ನೆಗಳನ್ನು ಕೇಳಿರುವ ಪ್ರಿಯಾಂಕ್ ಖರ್ಗೆ, “ಇಂದು ಮೋಹನ್ ಭಾಗವತ್ ಅವರು ಭಾರತವನ್ನು ಬುದ್ಧನ ನಾಡು ಎಂದು ಕರೆಯುತ್ತಿದ್ದಾರೆ. ಆದರೆ, ಅದೇ ಸಂಘದ ಸೈದ್ಧಾಂತಿಕ ಪಿತಾಮಹ ಸಾವರ್ಕರ್ ಅವರು ಬುದ್ಧ, ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಅವರನ್ನು ಕಟುವಾಗಿ ಟೀಕಿಸಿದ್ದರು. ಹಾಗಾದರೆ, ಈ ವಿಷಯದಲ್ಲಿ ಆರ್‌ಎಸ್‌ಎಸ್‌ನ ಅಧಿಕೃತ ನಿಲುವು ಏನು? ಸಂಘ ಪರಿವಾರ ತನ್ನ ನೈಜ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದು ಖರ್ಗೆ ಆಗ್ರಹಿಸಿದ್ದಾರೆ.
“ಆರ್‌ಎಸ್‌ಎಸ್ ಈಗ ನಿಜಕ್ಕೂ ‘ಭಾರತ ಬುದ್ಧನ ನಾಡು’ ಎಂದು ಒಪ್ಪಿಕೊಳ್ಳುತ್ತಿದೆಯೇ? ಹಾಗಿದ್ದರೆ ಬೌದ್ಧ ಧರ್ಮ ಮತ್ತು ಡಾ. ಅಂಬೇಡ್ಕರ್ ಅವರ ಧರ್ಮಾಂತರವನ್ನು ಕೀಳಾಗಿ ಕಂಡಿದ್ದ ಸಾವರ್ಕರ್ ಅವರ ವಿವಾದಾತ್ಮಕ ನಿಲುವನ್ನು ಆರ್‌ಎಸ್‌ಎಸ್ ಇಂದಿಗೂ ಬೆಂಬಲಿಸುತ್ತದೆಯೇ ಅಥವಾ ಅದನ್ನು ಖಂಡಿಸುತ್ತದೆಯೇ” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.




