ಉತ್ತರ ಕರ್ನಾಟಕ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆ ತೀವ್ರವಾಗಿ ಕೊರತೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಬೀದರ್ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುಮಾರು 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಬಿತ್ತನೆಯಾದ ಪ್ರದೇಶಗಳಲ್ಲಿಯೂ ಮಳೆಯ ಕೊರತೆಯಿಂದ ಬೆಳೆ ಮೊಳಕೆಯೊಡೆಯದೆ ರೈತರು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಚುನಾವಣಾ ಆಯೋಗ ಉತ್ತಮ ಉದ್ದೇಶದಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸುತ್ತಿದೆ. ಆದರೆ, ಕಾಂಗ್ರೆಸ್ ಅದನ್ನು ಬೇರೆ ರೀತಿಯಲ್ಲಿ ಮಾಡುತ್ತಿದೆ. ಅಕ್ರಮ ವಲಸಿಗರ ಹೆಸರನ್ನುಹಾಗೇ ಇರಬೇಕೆಂಬ ಭಾವನೆಯಿಂದ ಮತದಾರರ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಎಸ್ಐಆರ್ ನಡೆಸಿದ ಕಡೆ ಕಾಂಗ್ರೆಸ್ ವಿರೋಧಿಸಿತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ರಮ ವಲಸಿಗರ ಹೆಸರು ಮತಪಟ್ಟಿಗೆ ಸೇರಿಸಲು ಮುಂದಾಗಿದೆ” ಎಂದು ಆರೋಪಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಈಚೆಗೆ ಬಸವಕಲ್ಯಾಣದ ನಿರ್ಮಾಣ ಹಂತದ ಅನುಭವ ಮಂಟಪ ಕಾಮಗಾರಿ ವೀಕ್ಷಣೆಗೆ ಭೇಟಿ ನೀಡಿದ ಕುರಿತು ವ್ಯಂಗ್ಯವಾಡಿದ ವಿಜಯೇಂದ್ರ ಅವರು “ಕೈಯಲ್ಲಿ ಶಿವಲಿಂಗ ಹಿಡಿದು ಫೋಟೋ ಶೂಟ್ ಮಾಡುವುದು ಮಾತ್ರ ಸಾಲದು. ಮಾರ್ಕೆಟಿಂಗ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅವರೇ ಸಾಟಿ’ ಎಂದು ಟೀಕಿಸಿದ ಅವರು, ರೈತರ ಹಿತವೇ ಮುಖ್ಯವಾಗಬೇಕು, ರಿಯಲ್ ಎಸ್ಟೇಟ್ ಅಭಿವೃದ್ಧಿ ಅಲ್ಲ. ಮೂರು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಬೆಂಗಳೂರಿನ ಅಭಿವೃದ್ಧಿಯ ಜೊತೆಗೆ ರಾಜ್ಯದ ಉಳಿದ ಭಾಗಗಳ ಅಭಿವೃದ್ಧಿಗೂ ಸಮಾನ ಮಹತ್ವ ನೀಡಬೇಕು” ಎಂದರು.
ಬಿಜೆಪಿ ಪಕ್ಷದಲ್ಲಿ ಕೆಲ ಸಂಘಟನಾತ್ಮಕ ಸಮಸ್ಯೆಗಳಿವೆ. ಈ ಬಗ್ಗೆ ಈಗಾಗಲೇ ಕೆಲ ಶಾಸಕರು, ಮುಖಂಡರಿಗೆ ಎಚ್ಚರಿಕೆ ಕೊಡಲಾಗಿದ್ದು, ಬಿಜೆಪಿಯ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಬಸವಕಲ್ಯಾಣದ ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ₹500 ಕೋಟಿ ಮೀಸಲಿಟ್ಟು, ಮೊದಲ ಹಂತವಾಗಿ ₹200 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಈಗಿನ ಸರ್ಕಾರ ಉಳಿದ ಅನುದಾನವನ್ನು ಬಿಡುಗಡೆ ಮಾಡಿ ಅನುಭವ ಮಂಟಪದ ಅಭಿವೃದ್ಧಿಗೆ ಸರ್ಕಾರ ಸ್ಪಷ್ಟ ಬದ್ಧತೆ ತೋರಬೇಕು” ಎಂದರು.
ಇದನ್ನೂ ಓದಿ : ಬೀದರ್ | ತಪ್ಪು ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಿ : ಎಸ್ಪಿ ಪ್ರದೀಪ ಗುಂಟಿ
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಬಸವರಾಜ ಮತ್ತಿಮಡು, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ಈಶ್ವರ್ ಸಿಂಗ್ ಠಾಕೂರ್, ಬಸವರಾಜ ಆರ್ಯ, ಶರಣಪ್ಪಾ ತಳವಾರ ಮತ್ತಿತರರಿದ್ದರು.




