ಬಿಜೆಪಿಗರು ಮಾಡಬೇಕಾಗಿರುವ ಹೋರಾಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಗ ಬಿಸಿಸಿಐ ಮುಖ್ಯಸ್ಥರಾಗಿದ್ದ, ಐಸಿಸಿಯ ಅಧ್ಯಕ್ಷ ಜಯ್ ಶಾ ವಿರುದ್ಧವೇ ಹೊರತು ರಾಜ್ಯ ಸರ್ಕಾರದ ವಿರುದ್ಧವಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಬಿಜೆಪಿ ವಿರುದ್ಧ ಹಾರಿಹಾಯ್ದಿರುವ ಅವರು, ” ಐಪಿಎಲ್ ನಡೆಸಿ ಸಾವಿರಾರು ಕೋಟಿ ಲಾಭ ಪಡೆಯುವ ಬಿಸಿಸಿಐ ಮತ್ತು ಐಸಿಸಿ ಈಗ ಬಾಯ್ಮಿಚ್ಚಿಕೊಂಡಿರುವುದು ಯಾಕೆ” ಎಂದು ಪ್ರಶ್ನಿಸಿದ್ದಾರೆ.
“ಅಮಾಯಕ ಜನರನ್ನು ಪ್ರಚೋದಿಸುವುದು, ನಂತರ ಆಗುವ ಅನಾಹುತಗಳಿಂದ ಲಾಭ ಪಡೆಯುವ ಸಂಚು ರೂಪಿಸುವುದು ಬಿಜೆಪಿಯ ಚುನಾವಣಾ ರಾಜಕೀಯದ ಕಾರ್ಯಕ್ರಮ. ಅದರ ಭಾಗವೇ ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದ ಘಟನೆಗಳು ಸಾಕ್ಷಿ” ಎಂದಿದ್ದಾರೆ.
“ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನೇ ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿ ಜನರನ್ನು ಸರ್ಕಾರದ ವಿರುದ್ಧ ಪ್ರಚೋದಿಸಿತ್ತು. ಆದರೆ ಈಗ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಘೋಷಣೆ ಮಾಡಿರುವುದು ಹಾಸ್ಯಾಸ್ಪದ. ಬಿಜೆಪಿಗರು ಇಂತಹ ಕೀಳು ಮಟ್ಟದ ರಾಜಕೀಯವನ್ನು ನಿಲ್ಲಿಸಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.
“ಲಾಭ ಮಾತ್ರ ಬೇಕು ಪರಿಹಾರ ಬೇಡವೇ? ಬಿಜೆಪಿ ಮತ್ತು ಎನ್ಡಿಯ ಫಲಾನುಭವಿ ಜೆಡಿಎಸ್ ಪಕ್ಷ ಕೂಡಲೇ ಗೃಹ ಸಚಿವ ಅಮಿತ್ ವಿರುದ್ಧ ಹೋರಾಟ ನಡೆಸಿ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಬಳಿ ಮೃತರ ಕುಟುಂಬಗಳಿಗೆ ತಲಾ 5 ಕೋಟಿ ರೂಪಾಯಿಗಳ ಪರಿಹಾರವನ್ನು ಕೊಡಿಸಲು ಒತ್ತಾಯಿಸಲಿ” ಎಂದಿದ್ದಾರೆ.