ಭಾಷೆಯ ಹೆಸರಿನಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ, ಕೋಮುದ್ವೇಷ ಹಂಚಿಕೆ: ಸಿಎಂ ಸಿದ್ದರಾಮಯ್ಯ ಕಿಡಿ

Date:

ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ಸರಕಾರವು ಭಾಷಾವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ವಿವರಿಸುವ, ಮತ್ತು ಆಯ್ತು ತೆಗೆದ ಕೆಲವು ಅಂಕಿ ಅಂಶಗಳನ್ನು ಮಾತ್ರ ಪ್ರಸ್ತುತಪಡಿಸುವ, ಯಾರದೇ ವ್ಯಕ್ತಿಯ ಅಥವಾ ಸಂಸ್ಥೆಯ ಹೆಸರಿಲ್ಲದ ಪೋಸ್ಟರೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿ, ಪೋಸ್ಟರ್‌ ರೂವಾರಿ ಬಿಜೆಪಿ ಎಂದು ಆರೋಪ ಮಾಡಿದ್ದಾರೆ.

“ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಬೇಜವಾಬ್ದಾರಿತನದಿಂದ ಕಿಡಿಗೇಡಿ ಟ್ರೋಲರ್‌ಗಳ ರೀತಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವುದು ವಿಷಾದನೀಯ. 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಗೆ ₹34,438 ಕೋಟಿ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳಿಗೆ ಸೇರಿದ ಶಾಲೆಗಳಿಗೆ ₹4,150 ಕೋಟಿ ಹೀಗೆ ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂ.ಗಳನ್ನು ನೀಡಿದೆ. ಇದರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಒಟ್ಟು 999.30 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಈ ಒಟ್ಟು ಅನುದಾನ ಕನ್ನಡ ಭಾಷೆಯ ಅಭಿವೃದ್ದಿಗಾಗಿಯೇ ವ್ಯಯವಾಗಲಿದೆ. ಹೀಗಿರುವಾಗ ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಕೇವಲ 32 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂಬ ಮಾಹಿತಿಯ ಪ್ರಸಾರದ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ.

“ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಉರ್ದು ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಹಾಗೂ ಮೌಲಾನ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸುವ ಉದ್ದೇಶದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಇಲಾಖೆಯಡಿ ಒದಗಿಸಲಾಗಿದೆ. ಈ ಅನುದಾನವನ್ನು ಕೇವಲ ಭಾಷಾ ಕಲಿಕೆಗೆ ಮಾತ್ರವಲ್ಲ ಶಾಲಾ ಮೂಲಸೌಕರ್ಯ, ಶಿಕ್ಷಕರ ನೇಮಕಾತಿಗಾಗಿ, ಪಠ್ಯಪುಸ್ತಕಗಳು ಮತ್ತು ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೂ ಬಳಸಲಾಗುವುದು” ಎಂದು ಹೇಳಿದ್ದಾರೆ.

“ಕನ್ನಡ, ಉರ್ದು ಭಾಷೆಗಳು ಸೇರಿದಂತೆ ಯಾವುದೇ ಭಾಷೆಯನ್ನು ನಿರ್ದಿಷ್ಠ ಜಾತಿ, ಧರ್ಮದ ಜೊತೆ ಜೋಡಿಸುವುದು ಆ ಭಾಷೆಗಳಿಗೆ ತೋರುವ ಅಗೌರವವಾಗುತ್ತದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಬಳಕೆಯಲ್ಲಿರುವ ಎಲ್ಲ ಭಾಷೆಗಳ ಬಗ್ಗೆ ಸಮಾನ ಕಾಳಜಿಯನ್ನು ಹೊಂದಿದೆ. ಇದೇ ಸದುದ್ದೇಶದಿಂದ ರಾಜ್ಯದಲ್ಲಿ ಬಳಕೆಯಲ್ಲಿರುವ ತುಳು, ಕೊಂಕಣಿ, ಅರೆಬಾಸೆ, ಕೊಡವ ಭಾಷೆಗಳಿಗಾಗಿಯೇ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳಿಗೆ ವಾರ್ಷಿಕ 80 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತದೆ. ಇದರ ಜೊತೆಗೆ ವಿಶೇಷ ಕಾರ್ಯಕ್ರಮಗಳಿಗಾಗಿ ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

“ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿಯೇ ಪ್ರತ್ಯೇಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ. ಇದರಡಿಯಲ್ಲಿ 14 ಅಕಾಡೆಮಿಗಳು, 3 ಪ್ರಾಧಿಕಾರ ಮತ್ತು ಸಾಹಿತಿಗಳ ಹೆಸರಿನ 24 ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮೀಸಲಾಗಿವೆ. ಕನ್ನಡ ಭಾಷೆಗೆ ಕನ್ನಡಿಗರೆಲ್ಲರೂ ತಾಯಿಯ ಸ್ಥಾನವನ್ನು ನೀಡಿದ್ದು ಇದೇ ಗೌರವವನ್ನು ನಮ್ಮ ಸರ್ಕಾರ ಕೂಡಾ ಹೊಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎನ್ನುವುದನ್ನು ನಾನು ಪದೇ ಪದೇ ಹೇಳಿಕೊಂಡು ಬಂದಿದ್ದೇನೆ. ಇದೇ ರೀತಿ ನಾಡು-ನುಡಿಗೆ ಬಗೆವ ಅವಮಾನವನ್ನು ಕೂಡಾ ನಮ್ಮ ಸರ್ಕಾರ ಸಹಿಸುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

“ಕನ್ನಡ ಭಾಷೆಗಾಗಿ ಕೇವಲ 32 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯ ಬಿಜೆಪಿ ಹಂಚಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಕನ್ನಡ ನಾಡು ಮತ್ತು ನುಡಿಗೆ ಬಗೆವ ದ್ರೋಹವಾಗಿದೆ. ರಾಜ್ಯ ಬಿಜೆಪಿ ತಕ್ಷಣ ಸ್ಪಷ್ಟೀಕರಣದ ಮೂಲಕ ಸತ್ಯ ಸಂಗತಿಯನ್ನು ತಿಳಿಸುವ ಜೊತೆಯಲ್ಲಿ ತಮ್ಮಿಂದ ಆಗಿರುವ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?

ತಂದೆ-ತಾಯಿ ಇಲ್ಲದೆ ಬೀದಿಯಲ್ಲಿ ಹುಟ್ಟಿರುವ ಸುಳ್ಳು ಪೋಸ್ಟರ್: ದಿನೇಶ್‌ ಅಮೀನ್‌ ಮಟ್ಟು

“ತಂದೆ-ತಾಯಿ ಇಲ್ಲದೆ ಬೀದಿಯಲ್ಲಿ ಹುಟ್ಟಿರುವ ಈ ಸುಳ್ಳು ಪೋಸ್ಟರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಯದ್ವಾತದ್ವಾ ಚರ್ಚೆಯಾಗುತ್ತಿದೆ. ಯಾರಾದರೂ ತಮ್ಮ ತಲೆಯೊಳಗಿರುವ ಮೆದುಳನ್ನು ಬಳಸಿಕೊಂಡು ಇದನ್ನು ನೋಡಿದರೆ ಇದು ಫೇಕ್ ನ್ಯೂಸ್ ಎನ್ನುವುದು ಮೇಲ್ನೋಟದಲ್ಲಿಯೇ ಅರ್ಥವಾಗಬಹುದು” ಎಂದು ಹಿರಿಯ ಪತ್ರಕರ್ತ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಹೇಳಿದ್ದಾರೆ.

ಸರಳ ಲೆಕ್ಕಾಚಾರ ಹೀಗಿದೆ; ಪ್ರಾಥಮಿಕ ಶಿಕ್ಷಣ ಇಲಾಖೆಯ ಬಜೆಟ್ ಅನುದಾನ 26,೦೦೦ ಕೋಟಿ ರೂಪಾಯಿ. ಇತ್ತೀಚೆಗೆ ಪ್ರಾರಂಭಿಸಲಾಗಿರುವ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ನೀಡಲಾಗುವ 2೦೦೦ ಕೋಟಿ ರೂಪಾಯಿ ಅನುದಾನ ಹೊರತುಪಡಿಸಿದರೆ ಈ ಅನುದಾನ ಪೂರ್ಣ ವೆಚ್ಚವಾಗುವುದು ಕನ್ನಡ ಭಾಷೆಗಾಗಿ. ಉರ್ದು ಶಾಲೆಗಳಿಗೆ ನೀಡಿರುವುದು 1೦೦ ಕೋಟಿ ರೂಪಾಯಿ. (ಉರ್ದು‌‌ ಮುಸ್ಲಿಮರ ಭಾಷೆಯೇ ಅಲ್ಲ, ಇದನ್ನು ಅಲ್ಪಸಂಖ್ಯಾತ ಇಲಾಖೆಯಡಿ ಸೇರಿಸಿದ್ದೇ ಮೊದಲ ತಪ್ಪು)

ಉರ್ದು ಮುಸ್ಲಿಮರ ಭಾಷೆ ಎಂದೇ ತಿಳಿದುಕೊಳ್ಳೋಣ. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟು ಮುಸ್ಲಿಮರಿದ್ದಾರೆ. ಇವರಿಗೆ ಬಜೆಟ್ ನಲ್ಲಿ ನೀಡಿರುವ ಅನುದಾನ 5,5೦೦ ಕೋಟಿ ರೂ. ಮಾತ್ರ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಿದರೆ‌ ಕನಿಷ್ಟ 20,000 ಕೋಟಿ ರೂಪಾಯಿ ನೀಡಬೇಕು. ಇನ್ನು ತುಳು ಭಾಷೆಗೆ ದುಡ್ಡೇ ಕೊಟ್ಟಿಲ್ಲ, ಕೊಂಕಣಿ, ಕೊಡವ, ಬ್ಯಾರಿ ಭಾಷೆಗಳಿಗೆ 45 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಪೋಸ್ಟರ್ ಹೇಳಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ಭಾಷಾ ಅಕಾಡೆಮಿಗಳಿಗೆ ತಲಾ 80 ಲಕ್ಷ ರೂಪಾಯಿ ಅನುದಾನ ನೀಡುತ್ತಿದೆ. (ತುಳುವರನ್ನು ಎತ್ತಿಕಟ್ಟಿರುವುದನ್ನು ನೋಡಿದರೆ ಈ ಪೋಸ್ಟರ್ ಸೃಷ್ಟಿಯಾಗಿರುವುದೇ ತುಳುನಾಡಿನಲ್ಲಿ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು)

ಹೀಗಿದ್ದಾಗ ರಾಜ್ಯ ಸರ್ಕಾರವೇ ಪತ್ರಿಕಾ ಹೇಳಿಕೆ ನೀಡಿ ಸತ್ಯ ಸಂಗತಿ ತಿಳಿಸಬಹುದಲ್ಲಾ ಎಂದು ಯಾರಾದರೂ ಹೇಳಬಹುದು. ಆ ಹೇಳಿಕೆಯೂ ಬರಬಹುದು. ಸಮಸ್ಯೆ ಏನೆಂದರೆ ಇಂತಹ ಸುಳ್ಳು ಸುದ್ದಿಗಳನ್ನು ವಿರೋಧ ಪಕ್ಷದ ಯಾವ ನಾಯಕನೂ ಅಧಿಕೃತವಾಗಿ ನೀಡುವುದಿಲ್ಲ. ಇವೆಲ್ಲ ಟು ರುಪೀಸ್ ಜೀತದಾಳುಗಳು ಮತ್ತು ಖಾಲಿ ತಲೆಯ ಭಕ್ತರ ಕಿತಾಪತಿಗಳು.
ಜನ ಜಾಗೃತರಾಗಬೇಕು ಅಷ್ಟೆ ಎಂದು ಅಮೀನ್‌ ಮಟ್ಟು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ರಹೀಂ ಅಂತಿಮ ಯಾತ್ರೆಯಲ್ಲಿ ಜನಸ್ತೋಮ; ಕೋಮು ಕೃತ್ಯದ ವಿರುದ್ಧ ಆಕ್ರೋಶ

ಮುಸ್ಲಿಂ ಯುವಕ ಅಬ್ದುಲ್ ರಹೀಂ ಅವರ ಬರ್ಬರವಾಗಿ ಹತ್ಯೆ ವಿರುದ್ಧ ದಕ್ಷಿಣ...

ಕಮಲ್ ಹಾಸನ್ ನೀಡಿದ ಕನ್ನಡ ಭಾಷೆ ಹೇಳಿಕೆ ಸಂಪೂರ್ಣ ಸುಳ್ಳು: ಕರವೇ ನಾರಾಯಣಗೌಡ

ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಕನ್ನಡ ಭಾಷೆಯು ತಮಿಳಿನಿಂದ...

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಜ್ಯಾದ್ಯಂತ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳಿಗೆ...

ಮಂಗಳೂರು | ದುಷ್ಕರ್ಮಿಗಳಿಗೆ ಜಾಮೀನು, ಅಮಾಯಕರ ಕೊಲೆ: ಉಳ್ಳಾಲ ಯುವ ಕಾಂಗ್ರೆಸ್ ಕಾರ್ಯದರ್ಶಿ ರಾಜೀನಾಮೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ...

Download Eedina App Android / iOS

X