“ನೆಹರೂ ಬಳಿಕ ಬಿಜೆಪಿ ಮತ್ತು ಆರೆಸ್ಸೆಸ್ ಗೆ ದ್ವೇಷ ಇರುವುದು ರಾಹುಲ್ ಗಾಂಧಿ ಮೇಲೆ. ರಾಹುಲ್ ಗಾಂಧಿಯವರ ನಿಜವಾದ ಶಕ್ತಿ ಏನು, ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಸಿದ್ಧಾಂತ ಏನು ಎಂಬುದು ಬಿಜೆಪಿಯವರಿಗೆ ಅರ್ಥವಾಗಿದೆ. ಆದರೆ ಕಾಂಗ್ರೆಸ್‌ನವರಿಗೆ ಇನ್ನೂ ರಾಹುಲ್ ಗಾಂಧಿ ಅರ್ಥವಾಗಿಲ್ಲ. ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಸಿದ್ಧಾಂತ ಅರ್ಥವಾಗದೇ ಹೋದರೆ ಕೋಮುವಾದಿ ರಾಜಕಾರಣನ್ನು ಎದುರಿಸಲು ನಮ್ಮಿಂದ ಸಾಧ್ಯವಾಗದು” ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೋಮುವಾದಿಗಳು ಎಂದಿಗೂ ಬದುಕಿನ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಅವರು ಕೇವಲ ಭಾವನೆಯ ರಾಜಕಾರಣವನ್ನು ಮಾತ್ರ ಮಾತನಾಡುತ್ತಾರೆ. ಕೋಮುವಾದದ ವಿರುದ್ಧ ಆಧ್ಯಾತ್ಮಿಕತೆಯ ಪ್ರತಿಷ್ಠಾಪನೆ ಮಾಡಬೇಕಾದ ಅವಶ್ಯಕತೆ ಬೇರೆಲ್ಲಾ ಪಕ್ಷಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ಇದೆ. ಜಾತ್ಯತೀತ ಎಂದರೆ ಅದು ಮುಸ್ಲಿಮರ ತುಷ್ಠೀಕರಣ ಅಲ್ಲ ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು. ಸರ್ವ ಜನಾಂಗವನ್ನು ಸಮಭಾವ, ಸಮ ಪ್ರೀತಿಯಿಂದ ನೋಡುವುದು ಜಾತ್ಯತೀತವಾಗಿದೆ. ಜಾತ್ಯತೀತವಾದ ಎಂದರೆ ಆಧ್ಯಾತ್ಮಿಕ ವಾದ. ಕೋಮುವಾದ ಅನ್ನುವುದು ಧಾರ್ಮಿಕ ವಾದವಾಗಿದೆ. ಆಧ್ಯಾತ್ಮಿಕತೆಗೂ, ಧಾರ್ಮಿಕತೆಗೂ ಇರುವ ವ್ಯತ್ಯಾಸ ನಾವು ಅರಿಯದೇ ಹೋಗಿರುವುದು ನಮ್ಮ ವಿಫಲತೆಗೆ ಕಾರಣವಾಗಿದೆ ಎಂದರು.
ಕೋಮು ಧ್ರುವೀಕರಣ ಮತ್ತು ಕೋಮು ರಾಜಕಾರಣವನ್ನು ಎದುರಿಸುವ ಸಂದರ್ಭದಲ್ಲಿ ನಾವು ಬಳಸುವ ಮೃದು ಹಿಂದುತ್ವವೇ ನಮ್ಮನ್ನು ಅಪಾಯಕ್ಕೆ ಒಡ್ಡುತ್ತಿವೆ. ಬಿಜೆಪಿ ಮತ್ತು ಸಂಘ ಪರಿವಾರದ ಹಿಂದುತ್ವಕ್ಕೆ ನಾವು ಹಿಂದು ಧರ್ಮವನ್ನು ಪ್ರತಿಪಾದನೆ ಮಾಡಬೇಕು. ಅವರು ಹಿಂದುತ್ವಕ್ಕೆ ಮತ್ತು ಕೋಮು ರಾಜಕಾರಣಕ್ಕೆ ಸಾವರ್ಕರ್, ಹೆಡ್ಗೆವಾರ್ ಮೊದಲಾದವರನ್ನು ಅನುಸರಿಸುತ್ತಿದ್ದರೆ, ನಾವು ನಾರಾಯಣಗುರು, ಮಹಾತ್ಮ ಗಾಂಧಿ, ಕನಕದಾಸ, ಬಸವಣ್ಣ ಮೊದಲಾದವರ ಸಂದೇಶವನ್ನು ಅನುಸರಿಸುವ ಮತ್ತು ಪಸರಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ತಾಲಿಬಾನ್ ಮತ್ತೆ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗ ಅಫ್ಘಾನಿಸ್ತಾನದ ಸಾವಿರಾರು ಮುಸ್ಲಿಮ್ ಕುಟುಂಬಗಳು ದೇಶಬಿಟ್ಟು ಹೊರ ನಡೆಯಿತು. ಮುಸ್ಲಿಮರಾದ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಮುಸ್ಲಿಮರೇ ಅಲ್ಲಿಂದ ಯಾಕೆ ದೇಶಬಿಟ್ಟರು ಎಂದರೆ, ತಾಲಿಬಾನ್ ಭಾವನೆಯ ಮೇಲೆ ರಾಜಕಾರಣ ಮಾಡುತ್ತದೆ ಹೊರತು ಬದುಕಿನ ಮೇಲೆ ರಾಜಕಾರಣ ಮಾಡುವುದಿಲ್ಲ ಎಂಬುದು ಅಫ್ಘಾನಿಸ್ತಾನದ ಜನತೆಗೆ ಅರ್ಥವಾಗಿದೆ. ನಮ್ಮ ದೇಶದಲ್ಲೂ ಭಾವನೆಯ ಮೇಲೆ ರಾಜಕಾರಣ ಮಾಡುವವರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಕೋಮುವಾದದ ಬಹು ದೊಡ್ಡ ಸ್ವರೂಪ ಎಂದರೆ ಅವರಿಗೆ ಋಣದ ಭಾವನೆ ಇರುವುದಿಲ್ಲ. ಶಾಸಕ ಹರೀಶ್ ಪೂಂಜಾ ಮುಸ್ಲಿಮರ ವಿರುದ್ಧ ಮಾತನಾಡಿದ ವೇದಿಕೆ ಇದ್ದ ಸ್ಥಳವೇ ಮುಸ್ಲಿಮರದ್ದಾಗಿತ್ತು. ಕೋಮುವಾದದ ಪರ ಮಾತನಾಡುವ ರಾಜಕಾರಣಿ, ಸ್ವಾಮೀಜಿ, ಮೌಲವಿ, ಫಾದರ್‌ಗಳನ್ನು ಎದುರು ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು. ಈ ಧೈರ್ಯವನ್ನು ತೋರಿಸಿದರೆ ಮಾತ್ರ ಕಾಂಗ್ರೆಸ್ ಅನ್ನು ಉಳಿಸಲು ಸಾಧ್ಯ ಎಂದು ಅವರು ನುಡಿದರು.
ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿ ಮಾಡುವ ಕೆಲಸವನ್ನು ಬಿಜೆಪಿ ಮತ್ತು ಸಂಘಪರಿವಾರ ಮಾಡುತ್ತಿದೆ. ದೇಶದಲ್ಲಿ ಅಂಬೇಡ್ಕರ್ ಅವರಿಗೆ ಅಪಾರ ಸಂಖ್ಯೆಯಲ್ಲಿ ಅನುಯಾಯಿಗಳು ಇದ್ದಾರೆ. ಅವರಲ್ಲಿ ಅಂಬೇಡ್ಕರ್ ನಮ್ಮವರು ಎಂಬ ಭಾವನೆ ಇದೆ. ಆ ಜನ ಸಮುದಾಯದಲ್ಲಿ ಕಾಂಗ್ರೆಸ್ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸಲು ಕಾಂಗ್ರೆಸ್ ಅಂಬೇಡ್ಕರ್‌ಗೆ ದ್ರೋಹ ಮಾಡಿದೆ ಎಂಬ ಗುಮ್ಮವನ್ನು ಎಬ್ಬಿಸಿವೆ. ಬಸವಣ್ಣನ ಚಿಂತನೆಗಳನ್ನು ಅನುಸರಿಸದ ಸಂಘಪರಿವಾರ ಮತ್ತು ಬಿಜೆಪಿ ಬಸವಣ್ಣನ ಭಜನೆ ಮಾಡಲು ಆರಂಭಿಸಿವೆ. ಇತಿಹಾಸ ಪುರುಷರನ್ನು ಬಿಜೆಪಿ ಹೈಜಾಕ್ ಮಾಡುತ್ತಿರುವಾಗ, ಇತಿಹಾಸ ಪುರುಷರ ವಿಚಾರಧಾರೆಯನ್ನು ನಾವೇಕೆ ಪ್ರಸಾರ ಮಾಡಬಾರದು ಎಂದು ಪ್ರಶ್ನಿಸಿದರು.