ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್ ಆಗಿದ್ದಾರೆ.
ಶಕುಂತಲಾ ನಟರಾಜ್ ವಿರುದ್ಧ ನವೆಂಬರ್ 24ರಂದು ಮೊ.ನಂ-191/2024 ಕಲಂ 299 ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಯನಗರ ಪೊಲೀಸರು ಶಕುಂತಲಾರನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಹಿನ್ನೆಲೆ ಪೊಲೀಸ್ ಕಾನ್ಸ್‌ಟೇಬಲ್ ಉಮಾಶಂಕರ್ ದೂರು ನೀಡಿದ್ದರು. ಅದರಂತೆ ಕಲಂ 299 ಬಿಎನ್‌ಎಸ್ ಅಡಿ ಎಫ್‌ಐಆರ್ ದಾಖಲಾಗಿತ್ತು. ಬುಧವಾರ ಸಂಜೆ ಪೊಲೀಸರು ಶಕುಂತಲಾರನ್ನು ಬಂಧಿಸಿದ್ದಾರೆ.
ಶಕುಂತಲಾ ಪೋಸ್ಟ್‌ನಲ್ಲಿ ಏನಿದೆ?
“ಯೋಗಿಜಿ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ‘ಅಲ್ಲಾ’ ಸಹಾಯಕ್ಕೆ ಬರಲಿಲ್ಲಾ. ಆದ್ದರಿಂದ ಜೀವ ಹೋಗಿದೆ ಅಷ್ಟೇ. ಮೇಲೆ ಹೋದಮೇಲೆ 72 ಜನ ಸುಂದರಿಯರು ಸಿಗುತ್ತಾರೆ” ಎಂದು ಬರೆದುಕೊಂಡಿದ್ದರು.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿರೋದನ್ನು ಖಂಡಿಸಿ ಶಕುಂತಲಾ ಮತ್ತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಯತ್ನಾಳ್, ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ರೌಡಿ ಶೀಟ್ ತೆರೆಯುವ ಬಗ್ಗೆ ನೋಟಿಸ್
ಶಕುಂತಲಾ ನಟರಾಜ್ ಅವರಿಗೆ ರೌಡಿ ಶೀಟ್ ತೆರೆಯುವ ಬಗ್ಗೆ ನೋಟಿಸ್ ಕೂಡ ಪೊಲೀಸರು ನೀಡಿದ್ದಾರೆ. ನೋಟಿಸ್‌ನಲ್ಲಿ ದಿನಾಂಕ:10-10-2023 ರಂದು ರಾತ್ರಿ 20-14 ಗಂಟೆಗೆ ನಿಮ್ಮ ಟ್ವಿಟರ್ ಖಾತೆ ಮೂಲಕ “ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿರಬಾರದು ಅನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ?@ DKShivakumar #BoucutlulumallBengaluru” ಎಂದು ಪೋಸ್ಟ್ ಮಾಡಿರುವ ವಿಚಾರದಲ್ಲಿ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ದರಿಂದ ನೀವು ನಿಮ್ಮ ಟ್ವಿಟರ್ ಖಾತೆಯ ಮೂಲಕ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣದಲಿ ಹಾಕಿ ಜನರ ಭಾವನೆಗಳನ್ನು ಕೆರಳಿಸುವಂತಹ ಚಟುವಟಿಕೆವುಳ್ಳವರಾಗಿರುವುದರಿಂದ ನಿಮ್ಮ ಮೇಲೆ ನಿಗಾ ವಹಿಸಲು ಏಕೆ ರೌಡಿ ಹಾಳೆಯನ್ನು ತೆರೆಯಬಾರದು ಎಂಬುದಕ್ಕೆ ಈ ನೋಟಿಸ್ ಜಾರಿಯಾದ ಏಳು ದಿನಗಳ ಒಳಗಾಗಿ ನಿಮ್ಮ ಉತ್ತರ ನೀಡಲು ಸೂಚಿಸಲಾಗಿದೆ.
ಶಕುಂತಲಾ ಅವರು ಈ ಹಿಂದೆ ಒಡಿಶಾ ರೈಲು ದುರಂತದ ಬಗ್ಗೆ ಮಸೀದಿಯ ತಿರುಚಿದ ಫೋಟೋ ಹಾಕಿ ವಿವಾದ ಸೃಷ್ಟಿದ್ದರು. ನಂತರ ಪೊಲೀಸರು ಈಕೆಯನ್ನು ಬಂಧಿಸಿದ್ದರು.