ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಾರಿಯೂ 5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಬೋರ್ಡ್ ಪರೀಕ್ಷೆಗಳು ಶಿಕ್ಷಣ ಹಕ್ಕು ಕಾಯ್ದೆಗೆ ವಿರುದ್ಧವಾಗಿವೆ ಎಂದು ಹೇಳಿತ್ತು. ಅದಕ್ಕೂ ಮುನ್ನವೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ನಡೆಸಲು ಉದ್ದೇಶಿಸಿದ್ದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆಗಳ ಸುತ್ತೋಲೆಯನ್ನು ರದ್ದು ಮಾಡಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಈ ಬಗ್ಗೆ ಶುಕ್ರವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, “ಈ ಬಾರಿಯೂ 5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮೌಲ್ಯಮಾಪನ-2 ನಡೆಸಲಾಗುತ್ತದೆ. ಆದರೆ 11ನೇ ತರಗತಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳನ್ನು ಎದುರಿಸಬೇಕು” ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಶಾಲೆಗಳಲ್ಲಿ ಕಲಿಕಾ ಫಲಿತಾಂಶ ಸುಧಾರಣೆಗೆ ‘ಶಿಕ್ಷ ಕೋಪೈಲಟ್’ ಯೋಜನೆ ಜಾರಿ: ಸಚಿವ ಮಧು ಬಂಗಾರಪ್ಪ
“ಹಿಂದೆ ನಾವು ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ವೆಬ್ ಸ್ಟ್ರೀಮಿಂಗ್ ಸೇರಿದಂತೆ ಹಲವು ಪರೀಕ್ಷಾ ಸುಧಾರಣೆಗಳನ್ನು ಪರಿಚಯಿಸಿದ್ದೇವೆ. ಬೋರ್ಡ್ ಪರೀಕ್ಷೆಗಳ ಸುತ್ತಲಿನ ಭಯ ಮತ್ತು ಆತಂಕವನ್ನು ಕಡಿಮೆ ಮಾಡಲು, ನಾವು 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಪರಿಚಯಿಸಿದೆವು. ಪ್ರಸ್ತುತ ಈ ಪ್ರಕರಣವು ಸುಪ್ರಿಂ ಕೋರ್ಟ್ನಲ್ಲಿದೆ. ಕೋರ್ಟ್ನ ಯಾವುದೇ ಅಂತಿಮ ತೀರ್ಪನ್ನು ನಾವು ಅನುಸರಿಸುತ್ತೇವೆ” ಎಂದು ತಿಳಿಸಿದರು.
2023-24 ಶೈಕ್ಷಣಿಕ ವರ್ಷದಲ್ಲಿ ಮೌಲ್ಯಮಾಪನ-2 ಪರೀಕ್ಷೆ ಬದಲಾಗಿ ಬೋರ್ಡ್ ಪರೀಕ್ಷೆ ಪರಿಚಯಿಸಲಾಗಿತ್ತು. ಖಾಸಗಿ ಶಾಲಾ ಸಂಘಗಳ ವಿರೋಧದ ನಡುವೆಯೂ ಈ ತರಗತಿಗಳಿಗೆ ಈ ವರ್ಷದ ಮಾರ್ಚ್ನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಅಷ್ಟರಲ್ಲಿ 5, 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆ ಆದೇಶದ ವಿರುದ್ದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ 5, 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆ ಆದೇಶವನ್ನು ರದ್ದು ಮಾಡಿತ್ತು. ಈ ವಿವಾದಗಳ ಬಳಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ. ಹಾಗೆಯೇ ರಾಜ್ಯವು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
