“ಭಾರತದಲ್ಲಿ ಪ್ರಜಾಪ್ರಭುತ್ವ ಕ್ಷೀಣಿಸುತ್ತಾ ಬನಾನ ರಿಪಬ್ಲಿಕ್ ಆಗುತ್ತಿದೆ ಎಂದು ಅನೇಕರು ಹೇಳುತ್ತಾರೆ. ಆದರೆ ಇಲ್ಲಿ ವಾಸ್ತವದಲ್ಲಿ ಇರುವುದು ಬ್ರಾಹ್ಮಣ ಮತ್ತು ಬನಿಯಾ ರಿಪಬ್ಲಿಕ್” ಎಂದು ಬರಹಗಾರ, ಚಿಂತಕ ವಿ.ಎಲ್.ನರಸಿಂಹಮೂರ್ತಿ ಎಚ್ಚರಿಸಿದರು.
ರಾಜ್ಯ ಸರ್ಕಾರ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತಮಹೋತ್ಸವ ಸಮಾರಂಭದಲ್ಲಿ ʼಒಕ್ಕೂಟ ವ್ಯವಸ್ಥೆಯಲ್ಲಿನ ಅಂತರಗಳ ಸಮತೋಲನಾ ಆಯಾಮಗಳುʼ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಇಲ್ಲಿ ಬ್ರಾಹ್ಮಿನ್ ಮತ್ತು ಬನಿಯನ್ ರಿಪಬ್ಲಿಕ್ ಕಟ್ಟುತ್ತಿದ್ದಾರೆ. ಅವರು ಹೇಳುತ್ತಿರುವ ಸನಾತನ ಧರ್ಮವನ್ನು, ಬ್ರಾಹ್ಮಣಶಾಹಿತ್ವವನ್ನು ಬೇರೆಯವರ ಮೇಲೆ ವಿವಿಧ ರೂಪದಲ್ಲಿ ಹೇರಿಕೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಉತ್ತರ ಭಾರತವನ್ನು ನಾವು ಗಮನಿಸಬೇಕು. ಅಭಿವೃದ್ಧಿಯ ವಿಚಾರ ಬಂದಾಗ ಅವರು ರಾಷ್ಟ್ರೀಯತೆಯ ಪ್ರಶ್ನೆಯನ್ನು ಮುಂದಿಡುತ್ತಾರೆ. ಜಾತಿ ಸಮಾನತೆಯ ಕುರಿತು ಪ್ರಶ್ನಿಸಿದ ತಕ್ಷಣ ಯಾವುದೋ ಒಂದು ಸಾಂಸ್ಕೃತಿಕ ಪ್ರಶ್ನೆಯನ್ನು ತಂದು ಇಡುತ್ತಾರೆ. ಒಟ್ಟಾರೆಯಾಗಿ ವೈರುಧ್ಯಗಳನ್ನು ಅವರು ಸೃಷ್ಟಿ ಮಾಡುತ್ತಾರೆ. ಬ್ರಾಹ್ಮಣಶಾಹಿಗೆ ಯಾವತ್ತೂ ಬಹುಸಂಖ್ಯಾತರ ಅಭಿವೃದ್ಧಿ ಬೇಕಿಲ್ಲ. ಎಲ್ಲರೂ ತಮ್ಮ ಅಡಿಯಲ್ಲೇ ಇರಬೇಕು, ಹಿಂದುಳಿದಿರಬೇಕು ಎಂದು ಅವರು ಬಯಸುತ್ತಾರೆ. ಸಂವಿಧಾನವನ್ನೇ ಬಳಸಿಕೊಂಡು ಕಾಯ್ದೆ ಕಾನೂನುಗಳನ್ನು ತಮಗೆ ಬೇಕಾದಂತೆ ತರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬ್ರಾಹ್ಮಣ, ಬನಿಯಾ ರಿಪಬ್ಲಿಕ್ ಆಗಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ನೋಟು ರದ್ಧತಿ, ಸಿಎಎ, ಎನ್‌ಆರ್‌ಸಿ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಇಡಬ್ಲ್ಯುಎಸ್ ಜಾರಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವುದು, ಆದಿವಾಸಿಗಳ ಸ್ಥಳಗಳಲ್ಲಿ ತರುವ ಯೋಜನೆಗಳು- ಇವೆಲ್ಲವೂ ಬಹುಸಂಖ್ಯಾತ ಜನರನ್ನು ಶೋಷಣೆ ಮಾಡಿ ಶೇ. 15ಕ್ಕಿಂತ ಕಡಿಮೆ ಇರುವ ಬ್ರಾಹ್ಮಣ ಮತ್ತು ಬನಿಯಾಗಳ ಹಿತ ಕಾಯುವ ಉದ್ದೇಶಗಳನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟರು.
ತಳಸಮುದಾಯಗಳಿಂದ ಬಂದ ಚಿಂತಕರು ಮಾದರಿ ಸಮಾಜವನ್ನು ಮುಂದಿಟ್ಟರು. ಬ್ರಾಹ್ಮಣಶಾಹಿ ವಿರುದ್ಧ ಸಮಾಜವನ್ನು ಕಟ್ಟಲು ಪ್ರಯತ್ನಪಟ್ಟರು. ಆದರೆ ತಳಸಮುದಾಯಗಳನ್ನು ತುಳಿದು ತಮ್ಮ ಪ್ರಾಬಲ್ಯವನ್ನು ಬ್ರಾಹ್ಮಣಶಾಹಿಗಳು ಹೆಚ್ಚಿಸಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉತ್ತರ ಭಾರತದವರು ತರುತ್ತಿರುವ ಸನಾತನ ಸಂಸ್ಕೃತಿಗೆ ಪ್ರತಿರೋಧವಾಗಿ ಈ ನೆಲದಲ್ಲಿರುವ ಪ್ರಶ್ನೆಗಳನ್ನು ಮುಂದೆ ಇಡಬೇಕು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಆದ ವಚನ ಚಳವಳಿ, ವಸಾಹತುಶಾಹಿ ಕಾಲಘಟ್ಟದಲ್ಲಿ ಫುಲೆ, ಪೆರಿಯಾರ್, ಅಯೋತಿದಾಸ್, ಅಯ್ಯನ್ ಕಾಳಿ ಮತ್ತು ನಾರಾಯಣ ಗುರುಗಳು ಮಾಡಿರುವ ಕ್ರಾಂತಿಯನ್ನು ಮತ್ತು ಆ ಮೂಲಕ ಅವರು ಎತ್ತಿದ ಸಮಾನತೆಯ ಪ್ರಶ್ನೆಗಳನ್ನು ಮುಂದೆ ಇಡಬೇಕು. ಆಗ ಮಾತ್ರ ಭಾರತ ಒಕ್ಕೂಟ ರಾಷ್ಟ್ರವಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಬಿಕ್ಕಟ್ಟು ಬಂದಾಗಲೆಲ್ಲ, “ಒಂದು ಬಲಿಷ್ಠವಾದ ಕೇಂದ್ರ ಸರ್ಕಾರ ಇರಬೇಕು” ಎಂಬ ಆಶಯ ಸಂವಿಧಾನದಲ್ಲಿದೆ. ಆ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರ್ಕಾರದ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂಬ ಅಭಿಪ್ರಾಯ ಬರುತ್ತದೆ. ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಗಳಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದನ್ನು ನಾವು ಗಮನಿಸಬೇಕು. “ಸಾಂವಿಧಾನ ಒಳ್ಳೆಯದೋ ಕೆಟ್ಟದ್ದೋ ಎಂದು ನಿರ್ಧಾರವಾಗುವುದು ಜಾರಿಗೊಳಿಸುವವರ ನೈತಿಕತೆಯ ಆಧಾರದ ಮೇಲೆ. ಇದು ಸಂವಿಧಾನ ನೈತಿಕತೆ” ಎಂದಿದ್ದರು ಅಂಬೇಡ್ಕರ್ ಎಂದು ಸ್ಮರಿಸಿದರು.
ರಾಜ್ಯ ಸರ್ಕಾರಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಸಂವಿಧಾನದಲ್ಲಿ ಇರುವ ಪ್ರಾವಿಷನ್ ಇದಕ್ಕೆ ಕಾರಣವಲ್ಲ. ಒಕ್ಕೂಟ ವ್ಯವಸ್ಥೆ ಮುಖ್ಯ ಎಂಬುದನ್ನು ಬಾಬಾ ಸಾಹೇಬರು ಪ್ರತಿಪಾದಿಸಿದ್ದರು. ಇಲ್ಲಿನ ಸಮಾಜ ವೈರುಧ್ಯಗಳಿಂದ, ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಅದೆಲ್ಲವನ್ನೂ ಮೀರಿ ಈ ದೇಶ ಉಳಿಯಬೇಕಾದರೆ ಒಂದು ಪ್ರಬಲವಾದ ಕೇಂದ್ರ ಸರ್ಕಾರ ಇರಬೇಕು ಎಂದು ಬಾಬಾ ಸಾಹೇಬರು ಭಾವಿಸಿದರು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ರಾಜ್ಯ ಸರ್ಕಾರಗಳಿಗೆ ತಮ್ಮ ಪಾಲನ್ನು ನೀಡಲೇಬೇಕು ಎಂದು ವಿಶ್ಲೇಷಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಇದುವರೆಗೂ ಕೇಂದ್ರದಲ್ಲಿ ಹೆಚ್ಚು ಅಧಿಕಾರ ನಡೆಸಿರುವವರು ಹಿಂದಿ ಭಾಗದವರು. ವಸಾಹತು ಕಾಲದಿಂದಲೂ ಮತ್ತು ಈಗಲೂ ಯಾರು ಜನಸಂಖ್ಯೆಯಲ್ಲಿ ಕಡಿಮೆ ಇದ್ದಾರೋ, ಇನ್ನೊಬ್ಬರ ಪಾಲನ್ನು ಕಿತ್ತುಕೊಳ್ಳಲು ನೋಡುತ್ತಾರೋ ಅಂಥವರಿಗೆ ಹೆಚ್ಚು ಪಾಲು ಸಿಕ್ಕಿದೆ. ಹಲವು ಅಧ್ಯಯನಗಳ ಅಂಕಿ- ಅಂಶಗಳನ್ನು ನೋಡುತ್ತಿದ್ದರೆ ಕೇಂದ್ರ ಸರ್ಕಾರ ಯಾವಾಗಲೂ ಭಾರತದ ಮೇಲ್ಜಾತಿ ಮತ್ತು ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂಬುದು ತಿಳಿಯುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನತೆ ಅಳಿಸಿ, ಸಮನ್ವಯತೆಯನ್ನು ಸಾಧಿಸಬೇಕಾದರೆ ದಬ್ಬಾಳಿಕೆಯನ್ನು ಕಡಿಮೆ ಮಾಡಬೇಕು ಎಂದರು.
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಸಾಂಸ್ಕೃತಿಕವಾದ ಭಿನ್ನತೆಗಳಿವೆ ಎಂಬುದು ಹಿಂದಿ ಭಾಷಿಕ ಭಾಗದ ಚುನಾವಣಾ ಫಲಿತಾಂಶಗಳನ್ನು ನೋಡುತ್ತಿದ್ದರೆ ಸ್ಪಷ್ಟವಾಗುತ್ತದೆ. ಉತ್ತರ ಭಾರತ ತುಂಬಾ ಸಾಂಪ್ರದಾಯಿಕವಾಗಿ ಯೋಚಿಸುತ್ತದೆ, ಶಿಕ್ಷಣದಲ್ಲಿ, ತಂತ್ರಜ್ಞಾನ ಬಳಸುವುದರಲ್ಲಿ, ಉದ್ಯೋಗ ಸೃಷ್ಟಿಸುವಲ್ಲಿ, ಜ್ಞಾನೋತ್ಪಾದನೆಯಲ್ಲಿ ಹಿಂದೆ ಬಿದ್ದಿದೆ. ಅದಕ್ಕೆ ತದ್ವಿರುದ್ಧವಾಗಿ ದಕ್ಷಿಣ ಭಾರತ ಪ್ರಗತಿಪರವಾಗಿ ಯೋಚನೆ ಮಾಡುತ್ತಿದೆ, ಶಿಕ್ಷಣದಲ್ಲಿ ಸಾಧನೆಗೈದಿದೆ, ಉದ್ಯೋಗ ಸೃಷ್ಟಿ ಮಾಡುತ್ತಿದೆ. ಸಂಪತ್ತಿನ ಉತ್ಪಾದನೆಯಲ್ಲೂ ಕೊಡುಗೆ ನೀಡುತ್ತಿದೆ. ಆದರೆ ನಮಗೆ ಕೊಡಬೇಕಾದ ಪಾಲು ಸಿಗುತ್ತಿಲ್ಲ ಎಂದು ವಿವರಿಸಿದರು.

ಈ ದೇಶದ ಮೂಲನಿವಾಸಿಗಳು ಬದುಕುಳಿಯಬೇಕೆಂದರೆ ಈ ರೀತಿಯ ವಿಚಾರ ಸಂಕೀರ್ಣಗಳು ವ್ಯಾಪಕವಾಗಿ ಆಯೋಜಿಸಬೇಕು,,, ಯುವಕರನ್ನು ದಾರಿತಪ್ಪಿಸುವ ಬಿಬಿಆರ್ ಪ್ರಯತ್ನವನ್ನು ವಿಫಲಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು
ಈ ಲದ್ದಿವಂತರು 21 ನೇ ಶತಮಾನದಲ್ಲು ಈ ರೀತಿ ಜಾತಿ ಜಾತಿ ಗಳ ಮಧ್ಯೆ ವಿಷ ಬೀಜ ಬಿತ್ತಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಉತ್ತರ ಮತ್ತು ದಕ್ಷಿಣ ಭಾರತವೆಂದು ಒಡೆಯಲು ಹೊರಟಿದ್ದಾರೆ.75 ವರ್ಷಗಳಿಂದ ಎಲ್ಲಾ ತರಹದ ಪಡೆದ್ದದ್ದರು ಇವರಿಗೆ ತೃಪ್ತಿ ಇಲ್ಲ.