ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಇಂದು ನಡೆದ ‘ದೇವನಹಳ್ಳಿ ಚಲೋ’ ವೇಳೆ ಕೊನೆಗೂ ರಾಜ್ಯ ಸರ್ಕಾರ ಪೊಲೀಸ್ ಪ್ರಯೋಗ ಮಾಡಿದೆ. ಬೆಳಿಗ್ಗೆಯಿಂದ ನಡೆಯುತ್ತಿದ್ದ ಶಾಂತಿಯುತ ಹೋರಾಟವು ಮುಂದುವರಿಯುವ ಸೂಚನೆ ಕಂಡುಬಂದ ಬೆನ್ನಲ್ಲೇ ಸ್ಥಳದಲ್ಲಿದ್ದ ಎಲ್ಲ ಹೋರಾಟಗಾರರನ್ನು ಸಿದ್ದರಾಮಯ್ಯ ಸರ್ಕಾರ ಬಂಧಿಸಿದೆ. ಚಳವಳಿಗಾರರನ್ನು ಪೊಲೀಸರು ಎಳೆದಾಡಿ, ವ್ಯಾನಿಗೆ ತುಂಬಿಸಿದ್ದಾರೆ.
ಬಂಧನದ ಸೂಚನೆ ಸಿಗುತ್ತಿದ್ದಂತೆ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲ ಮುಖಂಡರು ಸಂಜೆ ಒಂದೆಡೆ ಸೇರಿ ಮಾತುಕತೆ ನಡೆಸಿದರು. “ನಮ್ಮನ್ನು ಬಂಧಿಸಿದರೆ ಜೈಲಿಗೆ ಹಾಕಬೇಕೆ ಹೊರತು, ಯಾವುದೋ ಮೈದಾನದಲ್ಲಿ ಬಿಟ್ಟು ಹೋಗುವುದಕ್ಕೆ ಆಸ್ಪದ ನೀಡುವುದಿಲ್ಲ” ಎಂದು ನಿರ್ಧರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರು ತಮ್ಮ ಭೂಮಿ ಉಳಿಸಿಕೊಳ್ಳುವುದಕ್ಕಾಗಿ 1180 ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಸರ್ಕಾರ ಅಂತಿಮ ಆದೇಶ ಹೊರಡಿಸಿ, 1777 ಎಕರೆ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿತ್ತು. ಆದರೆ ವಿರೋಧ ಬಂದ ಬೆನ್ನಲ್ಲಿ 500 ಎಕರೆ ಜಮೀನಷ್ಟೇ ಬಿಟ್ಟುಕೊಡುವುದಾಗಿ ನಿರ್ಧರಿಸಿತ್ತು. ನೊಂದ ರೈತರ ಪರವಾಗಿ ನಿಲ್ಲುವ ನಿಟ್ಟಿನಲ್ಲಿ ರಾಜ್ಯದ ಮೂಲೆಮೂಲೆಯಿಂದ ವಿವಿಧ ಸಂಘಟನೆಗಳ ಮುಖಂಡರು ಇಂದು ದೇವನಹಳ್ಳಿ ಚಲೋ ಹಮ್ಮಿಕೊಂಡಿದ್ದರು.
ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಹೊಮ್ಮಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ವು ‘ದೇವನಹಳ್ಳಿ ಚಲೋ’ದ ನೇತೃತ್ವ ವಹಿಸಿದೆ. ಸುಮಾರು 15 ಸಂಘಟನೆಗಳು ಚನ್ನರಾಯಪಟ್ಟಣ ರೈತರಿಗೆ ಬೆಂಬಲ ಘೋಷಿಸಿವೆ.

ಪೊಲೀಸರೊಂದಿಗೆ ಮಾತಿನ ಚಕಮಕಿ
ಬಂಧನಕ್ಕೂ ಮುನ್ನ ಹೋರಾಟಗಾರರು ಮತ್ತು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. “ದೇವನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಫ್ರೀಡಂಪಾರ್ಕ್‌ಗೆ ಹೋಗಿರಿ” ಎಂದು ಡಿಸಿಪಿ ವಿ.ಜೆ. ಸಜಿತ್ ಸೂಚಿಸಿದರು.
ಮುಂದುವರಿದು, “ಸಂಜೆ ಐದು ಗಂಟೆಯವರೆಗೆ ಮಾತ್ರ ಪ್ರತಿಭಟನೆ ಮಾಡಲು ಅವಕಾಶವಿದೆ. ಆದರೆ ಆರೂವರೆಯಾದರೂ ಪ್ರತಿಭಟನೆ ನಡೆಯುತ್ತಿದೆ. ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳುವುದಾದರೆ ಫ್ರೀಡಂಪಾರ್ಕ್‌ಗೆ ಹೋಗಬೇಕು. ನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ” ಎಂದು ಮರು ಉಚ್ಚರಿಸಿದರು.
ಆಗ ಪ್ರತಿಕ್ರಿಯಿಸಿದ ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು, “ಐದು ಗಂಟೆಯವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೆವು. ಮುಖ್ಯಮಂತ್ರಿಯವರು ನಿರ್ಧಾರ ತಿಳಿಸಬೇಕು. ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರ 1777 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಕ್ಕೆ ಉತ್ತರ ಕೊಡಬೇಕು. ಇಲ್ಲವಾದರೆ ನಾವು ಹೋರಾಟ ಕೈಬಿಡುವುದಿಲ್ಲ. ಬೇಕಾದರೆ ಅರೆಸ್ಟ್ ಮಾಡಿಕೊಳ್ಳಿರಿ” ಎಂದರು.
ಅದಕ್ಕೆ ಡಿಸಿಪಿ ಸಜಿತ್, “ಇಂದು ನಡೆಯಬೇಕಿದ್ದ ಸಂತೆಯನ್ನು ಹೋರಾಟದ ಕಾರಣ ನಾಳೆಗೆ ಮುಂದೂಡಿದ್ದೇವೆ. ಆದರೆ ಹೋರಾಟ ನಡೆಯುತ್ತಲೇ ಇದೆ. ಜನರಿಗೆ ಸಮಸ್ಯೆಯಾಗುತ್ತಿದೆ” ಎಂದು ವಾದ ಮಾಡಿದರು. ಮುಖಂಡರಾದ ಗುರುಪ್ರಸಾದ್ ಕೆರಗೋಡು ಅವರು ಪ್ರತಿಕ್ರಿಯಿಸಿ, “ಸರ್ಕಾರ ಈಗಲೇ ಉತ್ತರ ಕೊಡಲಿ. ನಾಳೆಯವರೆಗೂ ಹೋರಾಟ ಇರುವುದಿಲ್ಲ. ಇಲ್ಲವಾದರೆ ಹೋರಾಟ ಮುಂದುವರಿಸುತ್ತೇವೆ” ಎಂದರು. ಅಂತಿಮವಾಗಿ ಹೋರಾಟಗಾರರನ್ನು ಬಂಧಿಸಲಾಯಿತು. ಅನೇಕ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಬಂಧನವಾಗಿದ್ದು, ಜೈಲಿಗೆ ಹೋಗಲು ಮುಂದಾಗಿದ್ದಾರೆ. ಅರೆಸ್ಟ್ ಆದ ಬಳಿಕ ಸ್ಥಳದಲ್ಲಿದ್ದ ಸ್ಟೇಜು, ಕುರ್ಚಿಯನ್ನು ಪೊಲೀಸರು ತೆರವು ಮಾಡಿದ್ದಾರೆ.
ಹೋರಾಟಗಾರರಾದ ಎಚ್.ಎಸ್.ಬಸವರಾಜಪ್ಪ, ಪ್ರಕಾಶ್ ಕಮ್ಮರಡಿ, ಪ್ರಕಾಶ್ ರಾಜ್, ಎಸ್.ವರಲಕ್ಷ್ಮಿ, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು, ‘ಮುಖ್ಯಮಂತ್ರಿ’ ಚಂದ್ರು, ಮಾವಳ್ಳಿ ಶಂಕರ್, ಅನುಸೂಯಮ್ಮ, ಮೀನಾಕ್ಷಿ ಸುಂದರಂ, ಇಂದಿರಾ ಕೃಷ್ಣಪ್ಪ, ಶಿವಪ್ರಸಾದ್, ನಾಗರಾಜ್, ಶಿವಪ್ಪ, ಅಪ್ಪಣ್ಣ, ತಾರಾ ರಾವ್, ಚಂದ್ರಪ್ಪ ಹೊಸಕೆರೆ, ವಸಂತಕುಮಾರ್, ಕೆ.ಎನ್.ಉಮೇಶ್, ಶಿವಾನಂದ, ಮಹೇಶ್ ಪ್ರಭು, ಮಲ್ಲಯ್ಯ, ಲಕ್ಷ್ಮಿನಾರಾಯಣ ರೆಡ್ಡಿ, ನಾಗರತ್ನ, ಪ್ರಭಾ ಬೆಳವಂಗಲ, ಅಪ್ಪಣ್ಣ, ನಿರ್ವಾಣಪ್ಪ, ಶ್ರೀನಿವಾಸ್, ಸಿದ್ದರಾಜು, ನಂಜಪ್ಪ, ರಾಮೇಗೌಡ, ಅಶ್ವತ್ಥ, ರಾಮಚಂದ್ರಪ್ಪ, ಗೋವಿಂದರಾಜು, ಶಿವಮೊಗ್ಗ ನಾರಾಯಣಸ್ವಾಮಿ, ಮಹಿಮಾ ಪಾಟೀಲ್, ಎಸ್.ಜಿ.ಸಿದ್ದರಾಮಯ್ಯ, ಕೆಂಪೂಗೌಡ, ಕೆ.ಎಸ್.ವಿಮಲಾ, ನಂದಿನಿ ಜಯರಾಮ್, ಕಾರಳ್ಳಿ ಶ್ರೀನಿವಾಸ್, ಟಿ.ಯಶವಂತ್ ಮೊದಲಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಂಜೆ ಬಂಧನವಾದ ಸಂದರ್ಭದಲ್ಲಿ ಹಲವು ಹೋರಾಟಗಾರರು ಸ್ಥಳದಲ್ಲೇ ಇದ್ದರು.

ಬೆಳಿಗ್ಗೆಯಿಂದ ನಡೆದ ಹೋರಾಟದ ಸಂದರ್ಭದಲ್ಲಿ ಹಲವು ಜನರು ಮಾತನಾಡಿದ್ದಾರೆ. “ನಾವು ಊರಲ್ಲಿ ಇರುತ್ತೇವೆ, ಇಲ್ಲ ಜೈಲಲ್ಲಿ ಇರುತ್ತೇವೆ. ಸರ್ಕಾರ ಅದೇನು ಮಾಡುತ್ತದೆಯೋ ನೋಡಿಯೇ ಬಿಡೋಣ” ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟದ ಮುಂಚೂಣಿಯ ಮುಖಂಡ ಕಾರಳ್ಳಿ ಶ್ರೀನಿವಾಸ್ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿರುವ ಖ್ಯಾತ ನಟ ಪ್ರಕಾಶ್ ರಾಜ್, “ನಾನು ರೈತರೊಂದಿಗೆ ಇರುತ್ತೇನೆ. ಅವರ ಹೋರಾಟದ ಸ್ಥಳದಲ್ಲಿ ಮಲಗುತ್ತೇನೆ. ಬೇಕಿದ್ದರೆ ಜೈಲಿಗೆ ಹಾಕಿರಿ. ನಾನು ಜಾಮೀನು ಕೂಡ ಪಡೆಯುವುದಿಲ್ಲ” ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ವೇದಿಕೆಯಲ್ಲಿ ಮಾತನಾಡಿ, “ನಿಮ್ಮ ಹೋರಾಟಕ್ಕೆ ಅವಕಾಶವಿಲ್ಲ. ಕಾನೂನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಪೊಲೀಸರು ಹೇಳಿದರು. ಜನ ವಿರೋಧಿ ಕಾನೂನನ್ನು ಉಲ್ಲಂಘಿಸುವುದಕ್ಕೆ ನಾವು ಬಂದಿದ್ದೇವೆ. ಕಾನೂನು ಮತ್ತು ನ್ಯಾಯ ಎರಡರಲ್ಲಿ ನ್ಯಾಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದರು ಗಾಂಧೀಜಿ” ಎಂಬ ಮಾತನ್ನು ನೆನೆದಿದ್ದಾರೆ.
ಕಾರ್ಮಿಕ ಮುಖಂಡರಾದ ಮೀನಾಕ್ಷಿ ಸುಂದರಂ ಮಾತನಾಡಿ, “ನೀವು ಕರೆದುಕೊಂಡು ಹೋದರೆ ನಾವು ಖಂಡಿತ ಬರುತ್ತೇವೆ. ಆದರೆ ನಿಮ್ಮ ಭೂಮಿ ನಿಮ್ಮದಷ್ಟೇ ಎಂದ ಬಳಿಕವಷ್ಟೇ ನಾವು ಜೈಲಿನಿಂದ ಹೊರಬರುತ್ತೇವೆ. ನಮ್ಮ ಮನೆಯಲ್ಲಿ ನಾವು ವಾಸ ಮಾಡಲು ಬಿಡಿ, ನಮ್ಮ ಭೂಮಿಯಲ್ಲಿ ನಾವು ದುಡಿಯಲು ಬಿಡಿ ಎಂದು ಕೇಳುತ್ತಿದ್ದೇವೆ. ಇದು ಅಪರಾಧವಾ?” ಎಂದು ಪ್ರಶ್ನಿಸಿದ್ದಾರೆ.
