ಸರ್ಕಾರಿ ಸಂಸ್ಥೆಗಳಿಂದ ಮಾತ್ರ ಪ್ರಮಾಣೀಕೃತ ಹಾಗೂ ನ್ಯಾಯಯುತ ಲೇಬಲ್ ಇರುವ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಮೆಸರ್ಸ್ ಕರ್ನಾಟಕ ರಾಜ್ಯ ಪ್ರಮಾಣೀಕೃತ ಬೀಜ ಉತ್ಪಾದಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ. ಹಾಗಾಗಿ, ಆ ಆದೇಶ ಸರಿಯಾಗಿಯೇ ಇದೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಈ ಆದೇಶ ಹೊರಡಿಸಲು ಸರ್ಕಾರಿ ತನ್ನ ಉದ್ದೇಶ ಮತ್ತು ಕಾರಣವನ್ನು ನೀಡಿದ್ದು, ಅದರಲ್ಲಿ ಗುಣಾತ್ಮಕ ಮತ್ತು ಪ್ರಮಾಣೀಕೃತ ಬೀಜಗಳು ಸಕಾಲದಲ್ಲಿ ರೈತರಿಗೆ ಪೂರೈಕೆಯಾಗಬೇಕೆಂಬುದನ್ನು ವಿವರಿಸಲಾಗಿದೆ. ಹಾಗಾಗಿ ಸರ್ಕಾರಿ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಸಾರ್ವಜನಿಕ ಖರೀದಿಯಲ್ಲಿ ಕರ್ನಾಟಕ ಪಾರದರ್ಶಕ ಕಾಯಿದೆ 1999 ಸೆಕ್ಷನ್ 4 (ಜಿ) ಅಡಿ ಆದೇಶ ಹೊರಡಿಸಲಾಗಿದೆ. ಇದು ಏಕಪಕ್ಷೀಯವೆಂದು ಹೇಳಲಾಗದು. ಅರ್ಜಿದಾರರಿಗೆ ವ್ಯಾಪಾರ ಮಾಡಲು ಹಕ್ಕಿದೆ. ಅವರ ಹಕ್ಕಿಗೆ ಯಾವುದೇ ತೊಂದರೆ ಆಗಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ರಾಜ್ಯದಲ್ಲಿ ಒಟ್ಟು 15.73 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದೆ. ಸರ್ಕಾರಿ ಸಂಸ್ಥೆಗಳು 6.93 ಲಕ್ಷ ಕ್ವಿಂಟಾಲ್ ಬೀಜವನ್ನು ಪೂರೈಸುತ್ತಿವೆ. ಉಳಿದ 8.08 ಲಕ್ಷ ಕ್ವಿಂಟಾಲ್ ಅನ್ನು ಖಾಸಗಿ ಸಂಸ್ಥೆಗಳು ಪೂರೈಸಲು ಮುಕ್ತ ಅವಕಾಶವಿದೆ. ಅವು ಸಂಬಂಧಿಸಿದ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದೆ ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ”ಪ್ರಮಾಣೀಕೃತ ಬಿತ್ತನೆ ಬೀಜಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಹಲವು ಹಂತಗಳಲ್ಲಿ ಭಾರಿ ಪ್ರಮಾಣದ ಹೂಡಿಕೆ ಬೇಕಾಗುತ್ತದೆ. ಹಾಗಾಗಿ ಸರ್ಕಾರಿ ಸಂಸ್ಥೆಗಳಿಂದ ಮಾತ್ರವೇ ಬಿತ್ತನೆ ಬೀಜ ಖರೀದಿಸಬೇಕೆಂಬ ಸರ್ಕಾರಿ ಅದೇಶ ಏಕಪಕ್ಷೀಯವಾಗಿದೆ. ಅರ್ಜಿದಾರರಿಗೆ ವ್ಯಾಪಾರ ಮಾಡುವ ಅವಕಾಶಗಳು ಇಲ್ಲದಂತಾಗುತ್ತದೆ. ಕೃಷಿ ಬಿತ್ತನೆಗೆ ಪ್ರಮಾಣೀಕೃತ ಹಾಗೂ ನ್ಯಾಯಯುತ ಲೇಬಲ್ ಇರುವ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುವಷ್ಟು ದಕ್ಷತೆ ಸರ್ಕಾರಿ ಸಂಸ್ಥೆಗಳಿಗಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಬಿತ್ತನೆ ಬೀಜಗಳಿಗೆ ಭಾರಿ ಕೊರತೆ ಉಂಟಾಗಿದೆ. ಇದರಿಂದ ಕೃಷಿ ಚಟುವಟಿಕೆ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ಸರ್ಕಾರದ ಅದೇಶವನ್ನು ರದ್ದುಗೊಳಿಸಬೇಕು,” ಎಂದು ನ್ಯಾಯಾಲಯವನ್ನು ಕೋರಿದ್ದರು.
ಆದರೆ ಈ ವಾದವನ್ನು ತಳ್ಳಿ ಹಾಕಿದ್ದ ಸರ್ಕಾರಿ ವಕೀಲರು, ”ಸಕಾಲದಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಬಿತ್ತನೆ ಬೀಜವನ್ನು ಪೂರೈಕೆ ಮಾಡಬೇಕೆನ್ನುವ ಉದ್ದೇಶದಿಂದ ಸರ್ಕಾರಿ ಆದೇಶ ಹೊರಡಿಸಿದೆ. ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಸಾಕಷ್ಟು ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳುತ್ತದೆ. ಅದನ್ನು ಸರ್ಕಾರಿ ಸಂಸ್ಥೆಗಳ ಮೂಲಕವೇ ರೈತರಿಗೆ ತಲುಪುವಂತೆ ಮಾಡುತ್ತಿದೆ. ಇದರಲ್ಲಿ ರೈತರ ಹಿತಾಸಕ್ತಿಯಷ್ಟೇ ಮುಖ್ಯವಾಗಿದ್ದು, ಸರ್ಕಾರಿಕ್ಕೆ ಯಾವುದೇ ವಾಣಿಜ್ಯ ಹಿತಾಸಕ್ತಿ ಇರುವುದಿಲ್ಲ,” ಎಂದು ಹೇಳಿದ್ದರು.
”ಸರ್ಕಾರ ಮೊದಲಿಗೆ 2017 ರಲ್ಲಿ ಮೂರು ವರ್ಷದ ಅವಧಿಗೆ ಆದೇಶವನ್ನು ಹೊರಡಿಸಿತ್ತು. ನಂತರ ಕಾಲ ಕಾಲಕ್ಕೆ ಹೊಸ ಆದೇಶವನ್ನು ಹೊರಡಿಸುತ್ತಾ ಬಂದಿದೆ. ಬಿತ್ತನೆ ಬೀಜದ ಬೆಲೆ ನಿಯಂತ್ರಣ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಸರ್ಕಾರದ ಬಳಿ ಬಿತ್ತನೆ ಬೀಜ ಸಾಕಷ್ಟು ದಾಸ್ತಾನಿದೆ. ಯಾವುದೇ ಕೊರತೆ ಇಲ್ಲ,” ಎಂದು ನ್ಯಾಯಲಯಕ್ಕೆ ವಿವರಿಸಿದರು.
