ಸಿ ಟಿ ರವಿ ಪ್ರಕರಣ | ಸಿಐಡಿಗೆ ಸಿಕ್ಕಿದೆ ಪುರಾವೆ; ಮಹಿಳೆಯರು ಏನಂತಾರೆ?

Date:

Advertisements

ಸಿ ಟಿ ರವಿ ಪರಿಷತ್ತಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾನಹಾನಿಕರ ಪದ ಬಳಸಿದ್ದಕ್ಕೆ ಸಿಐಡಿ ಅಧಿಕಾರಿಗಳಿಗೆ ಪುರಾವೆ ಸಿಕ್ಕಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸರ್ಕಾರದ ಟಿವಿಯಲ್ಲೇ ಸಾಕ್ಷಿ ಸಿಕ್ಕಿದೆ. ಈ ಬಗ್ಗೆ ಹಲವರ ಅಭಿಪ್ರಾಯ ಇಲ್ಲಿದೆ

ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಅವರು ಬೆಳಗಾವಿ ಅಧಿವೇಶನದ ಕೊನೆಯ ದಿನ ವಿಧಾನಪರಿಷತ್ತು ಕಲಾಪ ಮುಗಿಯುತ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಮಾನಹಾನಿಕರ ಪದ ಬಳಕೆ ಮಾಡಿದ್ದು ಸರ್ಕಾರದ ಟಿವಿಯಲ್ಲಿಯೇ ರೆಕಾರ್ಡ್‌ ಆಗಿದೆ. ಸಿಐಡಿ ತನಿಖೆಯಲ್ಲಿ ನಾಲ್ಕು ಗಂಟೆಗಳ ವಿಡಿಯೋ ಪರಿಶೀಲನೆಗೆ ಒಳಪಡಿಸಲಾಗಿದೆ. ಸಿಟಿ ರವಿ ಅವರು ಆ ಪದವನ್ನು ಏಳು ಬಾರಿ ಬಳಸಿದ್ದಕ್ಕೆ ತಾಜಾ ಪುರಾವೆ ಸಿಕ್ಕಿದೆ ಎಂದು ವರದಿಯಾಗಿದೆ. ʼನಾನು ಫ್ರಸ್ಟ್ರೇಷನ್‌ ಅಂದಿದ್ದುʼ ಎಂದು ರವಿ ಸುಳ್ಳು ಹೇಳಿಕೊಂಡು ಓಡಾಡಿದ್ದರು. ಈಗ ಸಿ ಟಿ ರವಿ ಮತ್ತು ಆತನನ್ನು ಬಚಾವ್‌ ಮಾಡುವ ಸಲುವಾಗಿ ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸದೇ ರೂಲಿಂಗ್‌ ಕೊಟ್ಟ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಪೇಚಿಗೆ ಸಿಲುಕುವಂತಾಗಿದೆ. ತಕ್ಷಣ ಪರಿಷತ್ತಿನ ಕ್ಯಾಮೆರಾ ದಾಖಲೆ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಿದ್ದರೆ ಅವರು ಭೇಷ್‌ ಎನಿಸಿಕೊಳ್ಳುತ್ತಿದ್ದರು. ಈಗ ಹೊರಟ್ಟಿ ಅವರ ಪ್ರತಿಕ್ರಿಯೆ ಏನಿರುತ್ತದೆ? ಸಿಐಡಿ ತನಿಖೆಗೆ ಸಹಕರಿಸುವರೇ ಅಥವಾ ಮತ್ತೆ ರವಿಯ ರಕ್ಷಣೆಗಿಳಿಯುವರೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನ ಕೇಳುತ್ತಿದ್ದಾರೆ.

ಈ ಬಗ್ಗೆ ಮಹಿಳಾ ಬರಹಗಾರರು, ಹೋರಾಟಗಾರರು ಈ ದಿನ.ಕಾಮ್‌ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Advertisements

ವಕೀಲೆ ಮತ್ತು ಜಾಗೃತ ಕರ್ನಾಟಕದ ಸದಸ್ಯೆ ಸುಚಿತ್ರಾ ಅವರು, “ಭೇಟಿ ಬಚಾವೋ, ಭೇಟಿ ಪಡಾವೋ ಅನ್ನುವ ಪಕ್ಷಕ್ಕೆ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎನ್ನುವ ಕಿಂಚಿತ್ ಪರಿಜ್ಞಾನ ಇಲ್ಲ. ನಮ್ಮ ದೇಶದಲ್ಲಿ ಮಹಿಳಾ ರಾಜಕಾರಣಿಗಳು ಇರುವುದೇ ಕಡಿಮೆ. ಅಂತಹುದರಲ್ಲಿ ಇರುವವರನ್ನು ಇಂತಹ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಬೇರೆ, ಆ ಬಳಿಕ ಅದನ್ನು ಅಲ್ಲಗಳೆಯುವುದು ಇನ್ನೊಂದು. ಅಮ್ನೆಸ್ಟಿ ಇಂಟರ್‌ನ್ಯಾಷನಲ್ (Amnesty International) ಇತ್ತೀಚಿಗೆ ತಂದಿರುವ ವರದಿ ಪ್ರಕಾರ, ಭಾರತದಲ್ಲಿನ ಮಹಿಳಾ ರಾಜಕಾರಣಿಗಳು ಅತೀ ಹೆಚ್ಚಿನ ಅವಾಚ್ಯ, ನಿಂದನೀಯ ಹೇಳಿಕೆಗಳನ್ನು ಎದುರಿಸುತ್ತಿದ್ದಾರೆ. ಸಿಟಿ ರವಿಯನ್ನು ರಕ್ಷಿಸುತ್ತಿರುವ ಮಾನ್ಯ ಸಭಾಪತಿಗಳು ಮತ್ತು ಬಿಜೆಪಿ ತಮ್ಮನ್ನು ತಾವೇ ಅವಲೋಕಿಸಿಕೊಳ್ಳಬೇಕು. ಮಹಿಳಾ ಮೀಸಲಾತಿ ತರುತ್ತೇವೆ ಅಂತ ಉದ್ದುದ್ದ ಭಾಷಣ ಬಿಗಿದರೆ ಸಾಲದು, ಇರುವ ಮಹಿಳೆಯರನ್ನು ಹೇಗೆ ಗೌರವಿಸಬೇಕು ಅಂತ ಮೊದಲು ಕಲಿತುಕೊಳ್ಳಲಿ. ಬರೇ ಗೋವನ್ನು ಮಾತೆ ಅಂತ ಹೇಳುತ್ತಾ, ಇರುವ ಮಾತೆಯರನ್ನು ನಿಂದಿಸುವುದು ಎಷ್ಟು ಸರಿ ಅಂತ ಸಿಟಿ ರವಿ ಉತ್ತರಿಸಬೇಕು. ಇಂತಹ ಕೀಳುಮಟ್ಟದ ರಾಜಕಾರಣಿಗಳನ್ನು ಯಾವ ಪಕ್ಷವೇ ಇರಲಿ ಛೀಮಾರಿ ಹಾಕಿ ಪಕ್ಷದಿಂದ ಒದ್ದು ಓಡಿಸಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್‌, “ಹೊರಟ್ಟಿಯವರು ತಮ್ಮ ಜನಪರ ನಿಲುವುಗಳಿಂದ ಮಾನ್ಯತೆ ಪಡೆದ ಒಬ್ಬ ರಾಜಕಾರಣಿಯಾಗಿ ಭಾಜಪದ ಸಖ್ಯ ಸಹವಾಸದಿಂದ ಅವರ ನಡೆ-ನುಡಿಯಷ್ಟೆಯಲ್ಲ ಆಲೋಚನಾ ಕ್ರಮವು ಬದಲಾಗಿರುವುದು ಆಶ್ಚರ್ಯಕರ ಸಂಗತಿ. ಸಿ.ಟಿ. ರವಿಯಂತಹ ಮಹಿಳಾ ವಿರೋಧಿ ರಾಜಕಾರಣಿಗಳು ಅವರು ನಂಬಿರುವ ಸಿದ್ಧಾಂತಕ್ಕನುಗುಣವಾಗಿ ಮಾತನಾಡುತ್ತಾರೆ. ಅಂತಹವರನ್ನು ಸಮರ್ಥಿಸಿಕೊಳ್ಳುವುದು ನಾಡಿನ ಉಜ್ವಲ ನಾಳೆಗಳನ್ನು ರೂಪಿಸುತ್ತಿರುವ ಶಿಕ್ಷಕರಿಂದ ಆಯ್ಕೆಯಾಗಿ ಬಂದ ಹೊರಟ್ಟಿರವರಿಗೆ ಶೋಭೆ ತರುವಂತಹದ್ದಲ್ಲ. ಚಿಂತಕರ ಚಾವಡಿ, ಜಾಣರ ಜಗುಲಿ ಎಂದೆಲ್ಲಾ ಕರೆಯಿಸಿಕೊಳ್ಳುವ ವಿಧಾನಪರಿಷತ್ತಿನಲ್ಲಿ ಸಿ ಟಿ ರವಿಯಂತಹ ನೀಚ ಮನಸ್ಥಿತಿಯವರು ಪ್ರವೇಶಿಸಲು ಅನರ್ಹರು ಎಂಬುದನ್ನು ಹಿರಿಯರಾದ ಹೊರಟ್ಟಿರವರಿಗೆ ಅರ್ಥ ಮಾಡಿಸುವ ಅಗತ್ಯವೇನಿಲ್ಲ. ಈಗಾಗಲೇ ಕನ್ನಡ ಪ್ರಭ ಮಾಡಿರುವ ವರದಿಯಂತೆ ಸಿ ಟಿ ರವಿ ನಿಂದನೆ ಮಾಡಿರುವುದು ಸಾಬೀತಾದರೆ ತಮ್ಮನ್ನು ತಾವು ಸಂಸ್ಕೃತಿ ರಕ್ಷಕರು ಎಂದು ಕರೆದುಕೊಳ್ಳುವ ಬಿಜೆಪಿ ಮತ್ತದರ ಸಂಘ ಸಂಸ್ಥೆಗಳು ಬೀದಿಗೆ ಇಳಿದು ಅಥವಾ ಅದೇ ವಿಧಾನಪರಿಷತ್ತಿನ ಬಾವಿಗಿಳಿದಾದರೂ ಸಿ ಟಿ ರವಿ ವಿರುದ್ಧ ಹೋರಾಟ ಮಾಡಿ ಮಹಿಳಾಪರ ನಿಲುವನ್ನು ಎತ್ತಿ ಹಿಡಿಯುತ್ತಾರೆಯೇ ಕಾದು ನೋಡಬೇಕು” ಎಂದಿದ್ದಾರೆ.

ಮಂಗಳೂರಿನ ನಿವೃತ್ತ ಉಪನ್ಯಾಸಕಿ ರಾಜಲಕ್ಷ್ಮಿ ಅವರು, “ಮಹಿಳೆಯರ ಬಗ್ಗೆ ಹಗುರವಾಗಿ, ಅಶ್ಲೀಲವಾಗಿ ಮಾತನಾಡುವುದು ಮತ್ತು ಅದರಿಂದ ನುಣುಚಿಕೊಳ್ಳುವುದು ಒಂದೆಡೆಯಾದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅದಕ್ಕೆ ಪೂರಕವಾಗಿ ವರ್ತಿಸುವುದು ಸಂವಿಧಾನದ ಹಕ್ಕು ಹಾಗೂ ಕರ್ತವ್ಯದ ಚ್ಯುತಿಯು ಕೂಡ. ಬಸವರಾಜ ಹೊರಟ್ಟಿಯವರು ಅಧ್ಯಾಪಕರಾಗಿದ್ದವರು, ಶಿಕ್ಷಕರನ್ನ ಪ್ರತಿನಿಧಿಸಿ ರಾಜಕೀಯ ಪ್ರವೇಶ ಮಾಡಿದವರು. ಆರೋಗ್ಯಕರ ಸಮಾಜ ರೂಪಿಸುವಲ್ಲಿ ಶ್ರಮವಹಿಸುವ ಶಿಕ್ಷಕ ಸಮುದಾಯದಲ್ಲಿದ್ದವರು. ಇವರು ರಾಜಕೀಯದ ರಾಡಿಯನ್ನು ಮೈಗೆ ಮೆತ್ತಿಕೊಂಡು ನಾಲಿಗೆ ಹೊರಳಿಸುವ ಬೇಜವಾಬ್ದಾರಿಗಿಳಿಯದೆ ಮೌನದ ಮೊರೆ ಹೋಗಿದ್ದರೆ ಅವರಿಗೊಂದು ಘನತೆ ಇರುತ್ತಿತ್ತು.

ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಜಾಗದಲ್ಲಿ ಮಹಿಳೆಗೆ ಅಗೌರವ ಸೂಚಿಸುವ ಪದ ಯಾವುದೇ ಒಬ್ಬ ಮಹಿಳೆಯನ್ನು ಉದ್ದೇಶಿಸಿ ಹೇಳದಿದ್ದರೂ, ಹೊರಟ್ಟಿಯವರಿಗೆ ಮುಜುಗರವಾದರೂ ಆಗಬೇಕಿತ್ತು. ಬದಲಾಗಿ ಹೇಳಿದ್ದಕ್ಕೆ ದಾಖಲೆಯಿಲ್ಲ ಎನ್ನುವ, ಕಾನೂನಾತ್ಮಕ ಮಾತಿಗಿಳಿಯುವ ಜಾಡು ಸೂಕ್ಷ್ಮತೆ ಕಳೆದುಕೊಂಡ ದಪ್ಪ ಚರ್ಮವಲ್ಲದೇ ಮತ್ತೇನು? ಈ ಹಿಂದೆಯೂ ಅತ್ಯಾಚಾರಕ್ಕೊಳಗಗಾದವರ ಬಗ್ಗೆ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ‘ದಾಖಲೆ ಪುರಾವೆ ಇಲ್ಲದ ಮೇಲೆ ಅಂತಹ ಘಟನೆ ನಡೆದೇ ಇಲ್ಲ’ ಎಂಬರ್ಥದಲ್ಲಿ ಮಾತಾಡಿದ್ದನ್ನು ಕೇಳಿದ್ದೇವೆ. ಈ ಧಾಟಿಯ ಮಾತುಗಳು ಮಹಿಳೆಯರ ಬಗ್ಗೆ ಸೂಕ್ಷ್ಮ ಸಂವೇದನೆಯನ್ನ, ಗೌರವವನ್ನ ಕಳೆದುಕೊಂಡಿರುವ ಒಂದು ಸಮುದಾಯದ ಇರುವಿನ ಬಗ್ಗೆ ಜಾಗೃತೆ ವಹಿಸಬೇಕಾದ ಅವಶ್ಯಕತೆಯನ್ನು ತಿಳಿಸುತ್ತದೆ” ಎಂದಿದ್ದಾರೆ.

ಕಾಂಗ್ರೆಸ್‌ ವಕ್ತಾರೆ ಯು ಟಿ ಫರ್ಝಾನಾ ಅವರು ಪ್ರತಿಕ್ರಿಯಿಸಿ, “ಮೊದಲಿನಿಂದಲೂ ಹೆಣ್ಣು ಎಂದರೆ ಸದರದಿಂದಲೇ ವರ್ತಿಸುವ ಬಿಜೆಪಿಯ ನಾಯಕರು ಸದನದಲ್ಲೂ ತಮ್ಮ ಚಾಳಿಯನ್ನು ಮುಂದುವರಿಸಿರುವುದನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದರು. ಸಿಟಿ ರವಿಯವರ ಎಲುಬಿಲ್ಲದ ನಾಲಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಅನಾಚಾರದ ಮಾತನಾಡಿದಾಗ, ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಗೆ ಹೀಗೆ ಆದಲ್ಲಿ ಕರ್ನಾಟಕದ ಒಬ್ಬ ಸಾಮಾನ್ಯ ಮಹಿಳೆಯ ಪಾಡೇನು ಎನ್ನುವುದು ಪ್ರತಿ ಸಂವೇದನಾಶೀಲ ನಾಗರಿಕರ ಪ್ರಶ್ನೆಯಾಗಿತ್ತು? ಅದರ ಮೇಲೆ ತಾನು ಹಾಗೆ ಅಂದೇ ಇಲ್ಲವೆಂದು ವಾದಿಸಿಕೊಂಡು ಬಂದಿದ್ದ ಸಿಟಿ ರವಿಗೆ ಪೂರಕವಾಗಿ ವಿಧಾನ ಪರಿಷತ್ ಸಭಾಪತಿಯರಾದ ಬಸವರಾಜ್ ಹೊರಟ್ಟಿ ಅವರು ಆ ವಿಡಿಯೋ ಲಭ್ಯವಿಲ್ಲ ಎಂದು ಹೇಳಿದ್ದು ಆಘಾತಕಾರಿ. ಸಂಸ್ಕಾರಿ ಪಕ್ಷವಾದ ಬಿಜೆಪಿಯ ಹಿರಿಯರು ಕೂಡಾ ಯಾರೊಬ್ಬರೂ ಈ ಬಗ್ಗೆ ಖಂಡಿಸಿದ್ದು ಕಾಣಲಿಲ್ಲ.

ಹೆಣ್ಣನ್ನು ಅಧಿಕಾರದ ಗದ್ದುಗೆಯಲ್ಲಿ ನೋಡಲಾಗದ ಸಿಟಿಯಂತಹವರು ಕೊನೆಯದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಮಾನಸಿಕ ಹಲ್ಲೆಗೆ ಮುಂದಾಗಿದ್ದರ ಹಿಂದಿನ ಮಾನಸಿಕ ಅನಾರೋಗ್ಯವನ್ನು ಅರ್ಥೈಸಿಕೊಳ್ಳಬಹುದು. ಆದರೆ ಹಿರಿಯ ನಾಯಕರಾದ ಮತ್ತು ಸಭಾಪತಿಯರಾದ ಹೊರಟ್ಟಿ ಅವರು ಕಡೇಪಕ್ಷ ಅವರ ಸ್ಥಾನದ ಘನತೆಗೆ ತಕ್ಕುದಾಗಿ ನಡೆದುಕೊಳ್ಳಬಹುದಾಗಿತ್ತು ಎಂಬುವುದು ನಮ್ಮಂತಹವರ ನಿರೀಕ್ಷೆ. ಅದೂ ಸುಳ್ಳಾಯಿತು. ಕಟ್ಟ ಕಡೆಗೆ ಉಳಿಯುವ ಪ್ರಶ್ನೆ ಇವರೆಲ್ಲರೂ ಸಂವೇದನಾಶೀಲತೆ ಕಳೆದುಕೊಂಡು ಬಿಜೆಪಿಗೆ ಸೇರುತ್ತಾರಾ ? ಅಥವಾ ಸೇರಿದ ಮೇಲೆ ಬುದ್ಧಿ ಸೋರಿಕೆ ಆಗುವುದಾ?” ಎಂದು ಪ್ರಶ್ನಿಸಿದ್ದಾರೆ.

ಮನುವ್ಯಾಧಿಗಳಿಗೆ ಮದ್ದಿನ ಅಗತ್ಯವಿದೆ- ರೇಣುಕಾ ನಿಡಗುಂಡಿ

ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಯಾರು ಎಷ್ಟೇ ಅಪರಾಧ ಮಾಡಲಿ, ಭ್ರಷ್ಟರಿರಲಿ, ಕೊಲೆಪಾತಕರಿರಲಿ, ಬಲಾತ್ಕಾರಿಗಳಾಗಿರಲಿ ಅವರು ಬಿಜೆಪಿಯ ಕೃಪಾಕಟಾಕ್ಷದಲ್ಲಿದ್ದರೆ ಸಾಕು ಎಲ್ಲ ಪಾಪಗಳೂ ತೊಳೆದುಹೋಗುತ್ತವೆ ವಾಶಿಂಗ್ ಮಷೀನ್ ನಲ್ಲಿ. ʼಲವ್ ಜಿಹಾದ್’ ಮರ್ಯಾದೆಯ ಹೆಸರಿನಲ್ಲಿ, ಗೋರಕ್ಷಣೆಯ ಹೆಸರಿನಲ್ಲಿ, ಹಿಂದುತ್ವದ ಅಮಲಿನಲ್ಲಿ ಜೀವವಿರೋಧಿ ಕೃತ್ಯಗಳು ಹೆಚ್ಚಾಗಿದ್ದದ್ದು ಈ ಕಾಲದ ದುರಂತ. ಸಮಾಜವಾದಕ್ಕಿಂತ ಮನುವಾದ ಇಂದಿನ ದಿನಗಳನ್ನು ದುರ್ಭರಗೊಳಿಸುತ್ತಿದೆ.

ಹಿಂದೆ ರಾಜ್ಯಸಭೆಯಲ್ಲಿ ಮೋದಿ ಭಾಷಣದ ವೇಳೆ ಜೋರಾಗಿ ನಕ್ಕಿದ್ದ ಕಾಂಗ್ರೆಸ್  ಸಂಸದೆ ರೇಣುಕಾ ಚೌಧರಿಯವರ ನಗು ಸಾಮಾಜಿಕ ತಾಣಗಳಲ್ಲಿ, ಸುದ್ದಿವಾಹಿನಿಗಳಲ್ಲಿ ವಿಧವಿಧವಾಗಿ ಹರಿದಾಡಿದ್ದುದು ನೆನಪಿರಬೇಕು. ವಿಪರ್ಯಾಸವೆಂದರೆ ಅನೇಕ ಮಹಿಳೆಯರೂ ರೇಣುಕಾರ ನಗುವನ್ನು ವಿರೋಧಿಸಿ ಬರೆದರು. ಕೆಲವೇ ಕೆಲವರು ಅವರ ಪರವಾಗಿ ದನಿಯೆತ್ತಿದರು. ಈ ದೇಶದ ಅತ್ಯಂತ ಗೌರವಾನ್ವಿತ ಪ್ರಧಾನಿಯೊಬ್ಬ, “ರಾಮಾಯಣ ಧಾರಾವಾಹಿಯ ನಂತರ ಇಂತಹ ನಗುವನ್ನು ನೋಡಿದ್ದು ಇದೇ ಮೊದಲು, ನಗಲು ಬಿಡಿ ಸಭಾಪತಿಗಳೇ” ಎಂದು ವ್ಯಂಗ್ಯವಾಡಿದ್ದನ್ನಾಗಲಿ, ರೇಣುಕಾರ ನಗುವನ್ನು ಶೂರ್ಪನಖಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಸಚಿವ ಕಿರಣ್ ರಿಜಿಜು ಅವರನ್ನಾಗಲಿ ಕ್ಷಮಾಪಣೆಗೆ ಒತ್ತಾಯಿಸಿ ಯಾರೂ ಮೆರವಣಿಗೆ ಮಾಡಲಿಲ್ಲ. ಧರಣಿ ಕೂರಲಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರೆತ  ಅಧಿಪತ್ಯವನ್ನು ಯಾರೂ ಪ್ರಶ್ನಿಸಲಿಲ್ಲ!  ಇದು ಬಿಜೆಪಿಗರ ಚರಿತ್ರೆ ಇದ್ದುದೇ ಹೀಗೆ.

ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ ರವಿಯ ಅಸಲಿ ವಿಡಿಯೋ ಸಿಐಡಿಗೆ ಸಿಕ್ಕಿದ್ದು ಬಹುಮುಖ್ಯವಾದ ತಿರುವು. ರವಿ ನಿಂದಿಸಿದ ಯಾವುದೇ ಆಡಿಯೋ ವಿಡಿಯೋ ಇಲ್ಲವೆಂದು ವಿಧಾನ ಪರಿಷತ್ತಿನ ಸಭಾಪತಿ ಹೊರಟ್ಟಿಯವರು ಯಾವ ಭರವಸೆಯಲ್ಲಿ ಹೇಳಿದ್ದರು? ಅಸಂಸದೀಯ ಭಾಷೆಯಲ್ಲಿ ಒಬ್ಬ ಗೌರವಾನ್ವಿತ ಸಚಿವೆಯನ್ನು ನಿಂದಿಸಿದ್ದು ಸದನದಲ್ಲಿರುವ ಸರ್ಕಾರಿ ಟಿವಿಯಲ್ಲಿ ದಾಖಲಾದಾಗ್ಯು ಸಭಾಪತಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಹೊರಟ್ಟಿಯವರು ಈ ವ್ಯಕ್ತಿಯ ಬೆಂಬಲಕ್ಕೆ ನಿಂತಿದ್ದಾರಲ್ಲ! ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ? ಮಹಿಳೆಯನ್ನು ಕೇವಲ ಉಪಭೋಗದ ವಸ್ತುವೆಂದೇ ಇವತ್ತಿಗೂ ಆಕೆಯನ್ನು ತುಚ್ಛವಾಗಿ, ಬಾಯಿಗೆ ಬಂದಂತೆ ಬೊಗಳಬಹುದು ಅನ್ನುವ ಧೈರ್ಯವಿದೆಯೆಂದಾದರೆ ಈ ಮನುವಾದಿ ರೋಗಿಗಳಿಗೆ ಮದ್ದೂ ನೀಡಬೇಕು. ಇಂತಹ ವಿಕೃತಿಗಳಿಗೂ ತಕ್ಕ ಶಿಕ್ಷೆಯೆಂಬುದು ಇರಲೇಬೇಕು ಎಂದು ಹಿರಿಯ ಸಾಹಿತಿ ರೇಣುಕಾ ನಿಡಗುಂದಿ ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X