- ಹೊಸದಾಗಿ 21 ತಾಲೂಕು ಬರಪೀಡಿತ ಎಂದು ಘೋಷಿಸಲು ಸಭೆ ಒಪ್ಪಿಗೆ
- ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಸಚಿವ ಎಚ್ ಕೆ ಪಾಟೀಲ
2008-09ರಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆ ಬಗ್ಗೆ ಕಾನೂನು ತರಲಾಗಿತ್ತು. ಅದರಂತೆ 100 ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ಮೂಲಕ ಅನುಮತಿ ನೀಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಭೆಯಲ್ಲಿ ಚರ್ಚೆಯಾದ ವಿಷಯಗಳು ಮತ್ತು ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
“ಒಟ್ಟು ಕೃಷಿ ತೋಟಗಾರಿಕೆ ನಷ್ಟ 33,770 ಕೋಟಿ ರೂಪಾಯಿ ಆಗಿದ್ದು, ನಾವು ಕೃಷಿ ತೋಟಗಾರಿಕೆ ನಷ್ಟಕ್ಕೆ 4,414 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. 5,326 ಕೋಟಿ ರೂಪಾಯಿ ಒಟ್ಟು ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ರಾಜ್ಯ ಮಂತ್ರಿಗಳು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡುವುದಕ್ಕೆ ಪದೇ ಪದೇ ಸಮಯ ಕೇಳುತ್ತಿದ್ದಾರೆ” ಎಂದು ಸಚಿವರು ತಿಳಿಸಿದರು.
ಅನ್ನಭಾಗ್ಯ ಮುಂದುವರಿಸಲು ನಿರ್ಧಾರ
ಅಹಾರ ಇಲಾಖೆಯಿಂದ ಅಕ್ಕಿ ಒದಗಿಸುವ ವ್ಯವಸ್ಥೆ ಬಗ್ಗೆ ಚರ್ಚೆಯಾಗಿದೆ. ಈಗ ಇರುವ ಪದ್ಧತಿಯನ್ನೇ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಐದು ಕೆಜಿ ಅಕ್ಕಿ ಕೊಡಬೇಕಾ ಅಥವಾ ನೀಡಲಾಗುತ್ತಿರುವ ಹಣ ಮುಂದುವರಿಸಬೇಕಾ ಎಂಬ ಚರ್ಚೆಯಾಗಿದೆ. ಸದ್ಯದ ಪದ್ದತಿಯನ್ನೇ ಮುಂದುವರಿಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ” ಎಂದು ಸಚಿವರು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಲದ ಗುಂಡಿಗೆ ಮನುಷ್ಯರನ್ನು ಇಳಿಸುವುದು ‘ವಿಶ್ವಗುರು’ವಿಗೆ ಶೋಭೆಯಲ್ಲ
ಹೊಸದಾಗಿ 21 ತಾಲೂಕು ಬರಪೀಡಿತ
ನೈರುತ್ಯ ಮುಂಗಾರಿನಲ್ಲಿ ಮಳೆ ಕೊರತೆಯಿಂದ ಬರಗಾಲ ಘೋಷಣೆ ಮಾಡಲಾಗಿದೆ. 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೆವು. ಇದರ ಜೊತೆಗೆ 21 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹೊಸದಾಗಿ 21 ತಾಲೂಕು ಬರಪೀಡಿತ ಎಂದು ಘೋಷಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಬರಲಿದೆ ರಾಜ್ಯ ಅನಿಲ ನೀತಿ
“ವಾಹನಗಳ ಸಿಎನ್ಜಿ, ಗೃಹ ಬಳಕೆಯ ಪಿಎನ್ಜಿ ಬಳಕೆಗೆ ರಾಜ್ಯ ಅನಿಲ ನೀತಿ ರೂಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಪಾಲಿಸಿಗೆ ಅನುಮೋದನೆ ನೀಡಲಾಗಿದೆ” ಎಂದು ಎಚ್ ಕೆ ಪಾಟೀಲ್ ಹೇಳಿದರು.
ಸಚಿವ ಸಂಪುಟದ ಇನ್ನಿತರ ನಿರ್ಧಾರಗಳು
- ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮೀ ಯೋಜನೆ ವಿಸ್ತರಣೆ
- ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆಗೆ ಅಗತ್ಯ ಸಾಮಗ್ರಿ ಒದಗಿಸಲು 20 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ
- ಬೆಳಗಾವಿಯ ಸುವರ್ಣಸೌಧದಲ್ಲೇ ಅಧಿವೇಶನ ನಡೆಸುವ ಬಗ್ಗೆ ಚರ್ಚೆ, ಅಧಿವೇಶನದ ದಿನಾಂಕ ನಿಗದಿ ಮಾಡುವ ಅಧಿಕಾರ ಸಿಎಂ ವಿವೇಚನೆಗೆ
- ಕೃಷಿ ಇಲಾಖೆಯಿಂದ ರಸಗೊಬ್ಬರ ದಾಸ್ತಾನಿಗೆ 200 ಕೋಟಿ ರೂ. ಬಂಡವಾಳ ಸಾಲ ತೆಗೆದುಕೊಳ್ಳಲು ಸರ್ಕಾರಿ ಖಾತರಿಗೆ ಅನುಮತಿ
- ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ 192 ಕೋಟಿ ರೂ. ಅನುದಾನದಲ್ಲಿ 450 ಆಸನಗಳ ಬೋಧನಾ ವ್ಯವಸ್ಥೆ ಕಲ್ಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ.
- ಸಾರಿಗೆ ಇಲಾಖೆಯಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನ ಹಾಗೂ ಧಾರವಾಡದ ಹಳೆಯ ಸಾರಿಗೆ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಆಡಳಿತಾತ್ಮಕ ಅನುಮೋದನೆ.