ದಲಿತ ಚಳುವಳಿ ಆರಂಭದಲ್ಲಿ ಲಿಂಗತ್ವದ ವಿಚಾರದಲ್ಲಿ ಅಸೂಕ್ಷ್ಮಿಯಾಗಿತ್ತು. ಕಾಲಾನಂತರ ದಲಿತ ಚಳುವಳಿಯೊಳಗೆ ಮಹಿಳೆಯರ ಪಾತ್ರಗಳ ಕುರಿತ ಚರ್ಚಗಳು ಮುನ್ನೆಲೆ ಬಂದವು. ಶಿಕ್ಷಣ ದೊರೆತಂತೆ ಹೆಣ್ಣುಮಕ್ಕಳು ಸಶಕ್ತರಾಗುತ್ತಾ ಸಾಗಿದಂತೆ, ಚಳುವಳಿಗಳಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಲಾರಂಭಿಸಿತು. ದಲಿತ ಚಳುವಳಿಗಳಲ್ಲಿ ಮಹಿಳೆಯರ ಪಾತ್ರ, ಲಿಂಗ ಸೂಕ್ಷ್ಮತೆ ಕುರಿತಾದ ಸತ್ಯ ಕತೆಗಳನ್ನು ಪುಸ್ತಕ ರೂಪದಲ್ಲಿ ಶರ್ಮಿಳ ರೆಗೆ ಅವರು ಬಿಚ್ಚಿಟ್ಟಿದ್ದಾರೆ ಎಂದು ಡಾ. ದು ಸರಸ್ವತಿ ಹೇಳಿದ್ದಾರೆ.
ಶರ್ಮಿಳಾ ಅವರ ವಿರಚಿತ ‘ಜಾತಿ ಮತ್ತು ಲಿಂಗತ್ವ’ ಪುಸ್ತಕವನ್ನು ಡಾ. ದು ಸರಸ್ವತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕ ಕುರಿತು ಬೆಂಗಳೂರಿನಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯು ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ದು ಸರಸ್ವತಿ ಅವರು ಪುಸ್ತಕದ ಕುರಿತು ವಿವರಿಸಿದರು ಮತ್ತು ಚರ್ಚಿಸಿದರು.
“ದಲಿತ ಚಳುವಳಿ ಆರಂಭದಲ್ಲಿ ಲಿಂಗತ್ವ ಅಸೂಕ್ಷ್ಮಿಯಾಗಿತ್ತು. ಮಹಿಳೆಯ ಅಧ್ಯಯನದ ಭಾಗವಾಗಿ ಚಳುವಳಿಗಳಲ್ಲಿ ಲಿಂಗ ತಾರತಮ್ಯ ಮತ್ತು ಮಹಿಳೆಯರ ಭಾಗವಹಿಸುವಿಕೆಯಂತ ಚರ್ಚೆ ಕರ್ನಾಟಕದಲ್ಲಿ ಆರಂಭಿಸಬೇಕು ಎಂಬುದು ನಮ್ಮ ನಿಲುವಾಗಿತ್ತು. ಇದನ್ನ ಮಹಿಳಾ ಚಳುವಳಿ ತೆಗೆದುಕೊಳ್ಳಲೇಬೇಕು ಎಂದು ನಿರ್ಧರಿಸಲಾಗಿತ್ತು. ಅದರ ಭಾಗವಾಗಿ ಹಲವು ಅಧ್ಯಯನಗಳು ನಡೆದವು. ದಲಿತ ಮಹಿಳೆಯರ ಸತ್ಯ ಕಥಾನಕಗಳನ್ನು ‘ಜಾತಿ ಮತ್ತು ಲಿಂಗತ್ವ’ ಪುಸ್ತಕವು ವಿವರಿಸುತ್ತದೆ. ಎಲ್ಲರೂ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು” ಎಂದರು.
“ಬಾಬಾ ಸಾಹೇಬರು ನೋಡಿರುವ ಅರ್ಥದಲ್ಲಿಯೇ ಜಾತಿ ವ್ಯವಸ್ಥೆಯಲ್ಲಿನ ಲಿಂಗ ತಾರತಮ್ಯವನ್ನು ಶರ್ನಿಳಾ ಅವರು ನೋಡಿದ್ದಾರೆ. ತಮ್ಮ ಪುಸ್ತಕದಲ್ಲಿ ಚರ್ಚೆ ಮಾಡಿದ್ದಾರೆ. ರಾಷ್ಟ್ರೀಯತಾವಾದದ ಸಂದರ್ಭದಲ್ಲಿ, ಬ್ರಿಟಿಷರನ್ನು ಓಡಿಸುವ ಸಂದರ್ಭದಲ್ಲಿ ಜಾತಿ ನಗಣ್ಯವಾಗಿ ಉಳಿದುಕೊಂಡಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ, ನಮ್ಮ ಕನಸಿನ ಭಾರತ ಸಿಗುವ ಸಮಯದಲ್ಲಿ ಅಂಬೇಡ್ಜರ್ ಅವರು ಜಾತಿ ವಿಚಾರ ಮುಂದಿಟ್ಟು ಸವರ್ಣಿಯರ ವಿರುದ್ದ ಹೋರಾಟ ನಡೆಸುತ್ತಿದ್ದರು. 1930ರಿಂದ 1947ರವರೆಗೆ ನಡೆದ ದಲಿತ ಹೋರಾಟಗಳಲ್ಲಿ ಮಹಿಳೆಯರ ಪ್ರಶ್ನೆಗಳನ್ನೂ ಅಂಬೇಡ್ಕರ್ ಎತ್ತಿದ್ದರು. ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಸ್ವಗೌರವ ಬೆಳೆಯಬೇಕು. ಅದರೊಂದಿಗೆ ಜಾತಿ ವಿನಾಶ ಆಗಬೇಕು. ಸಮಾನತೆ ಬರಬೇಕು ಎಂದಿದ್ದರು” ಎಂದು ತಿಳಿಸಿದರು.
“ಪಿತೃಪ್ರಧಾನತೆಯು ಎಲ್ಲ ಶ್ರೇಣಿಯಲ್ಲಿಯೂ ಇದೆ. ಎಲ್ಲ ವರ್ಗ/ಜಾತಿಯ ಹೆಣ್ಣುಮಕ್ಕಳು ಪಿತೃಪ್ರಧಾನ ವ್ಯವಸ್ಥೆಯೊಳಗೆ ಸಿಲುಕಿಕೊಂಡು, ದೌರ್ಜನ್ಯ ಎದುರಿಸುತ್ತಿದ್ದಾರೆ. ಮಹಿಳಾ ಅಧ್ಯನವನ್ನು ಅಕಾಡೆಮಿಕ್‌ಆಗಿ ಶಿಸ್ತಾಗಿ ಕಲಿಯಬೇಕು. ಶ್ರೇಣಿ ವ್ಯವಸ್ಥೆಯಲ್ಲಿ ಮೇಲಿರುವ ಬ್ರಾಹ್ಮಣ ಹೆಣ್ಣು ಮಕ್ಕಳು ಕೂಡ ಪಿತೃಪ್ರಧಾನತೆಯಿಂದ ಅತ್ಯಂತ ನೋವುಂಡಿರುವ ಕತೆಯನ್ನೂ ನಾನು ಕೇಳಿದ್ದೇನೆ” ಎಂದು ದು ಸರಸ್ವತಿ ಹೇಳಿದರು.
ಜನಶಕ್ತಿಯ ನಾಯಕಿ ಗೌರಿ ಮಾತನಾಡಿ, “ಭಾರತದಲ್ಲಿ ಜಾತಿ ಇರುವುದರಿಂದ, ಲಿಂಗ ಅಸಮಾನತೆಯ ವಿಚಾರದಲ್ಲಿ ನಗಣ್ಯವಾಗಿದೆ. ಸಮಾಜವು ಲಿಂಗ ಅಸೂಕ್ಷ್ಮವಾಗಿದೆ. ಅದೆಕ್ಕೆಲ್ಲ ‘ಜಾತಿ ಮತ್ತು ಲಿಂಗತ್ವ’ ಪುಸ್ತಕ ಉತ್ತರ ನೀಡುತ್ತದೆ. ಪ್ರತಿ ಬಾರಿಯೂ ಜಾತಿ ಪ್ರಶ್ನೆಯನ್ನು ದಲಿತರು ಮಾತ್ರವೇ ಎತ್ತಬೇಕಾ? ಸಮಾಜದಲ್ಲಿ ಇರುವ ಎಲ್ಲರೂ ಜಾತಿ ತಾರತಮ್ಯದ ವಿರುದ್ಧ ಪ್ರಶ್ನೆಗಳನ್ನು ಎತ್ತಬೇಕು. ಜಾತಿ, ವರ್ಗ, ಲಿಂಗ ತಾರತಮ್ಯದ ಬಗ್ಗೆ ಮಾತಾಡಬೇಕು” ಎಂದರು.