ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಏಕಾಏಕಿ ಕದನ ವಿರಾಮ ಘೋಷಿಸಿ ನಿಲ್ಲಿಸಿರುವುದರ ಬಗ್ಗೆ ದೇಶದ ಜನತೆಗೆ ಸಂಶಯ ಮೂಡಿದ್ದು, ಇದು ದೇಶದ ಸೈನಿಕರ ಬಲ ಮತ್ತು ಉತ್ಸಾಹ ಕುಂದಿಸುವ ಕೆಲಸ ಎಂದು ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ಕರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸುತ್ತಿದ್ದ ಕಾರ್ಯಾಚರಣೆ ದೇಶದ ಆಂತರಿಕ ವಿಚಾರವಾಗಿದೆ. ಈ ವಿಚಾರದಲ್ಲಿ ಮೂರನೇ ರಾಷ್ಟ್ರ ಮಧ್ಯ ಪ್ರವೇಶಿಸಲು ಅವಕಾಶ ಇಲ್ಲ. ಆದರೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಿಸಿದ್ದಾರೆ. ಇದು ಗಂಭೀರ ವಿಚಾರವಾಗಿದ್ದು ಈ ಬಗ್ಗೆ ಚರ್ಚಿಸಲು ಕೂಡಲೇ ಅಧಿವೇಶನ ಕರೆಯಬೇಕು ಎಂದು ಅವರು ಹೇಳಿದರು.
1972ರಲ್ಲಿ ನಡೆದ ಶಿಮ್ಲಾ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಸಮಸ್ಯೆಗೆ ಮೂರನೇ ರಾಷ್ಟ್ರ ಅಥವಾ ಸಂಸ್ಥೆ ಮಧ್ಯ ಪ್ರವೇಶಿಸಬಾರದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕದನ ವಿರಾಮವನ್ನು ಒಪ್ಪುವ ಮೂಲಕ ಭಾರತ ಸರಕಾರ ಶಿಮ್ಲಾ ಒಪ್ಪಂದವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಭಾರತದ ಯುದ್ದವನ್ನು ಟ್ರಂಪ್ ತೀರ್ಮಾನ ಮಾಡಿರುವುದು ಈ ದೇಶದ ಎಲ್ಲಾ ಸ್ವಾತಂತ್ರ ಹೋರಾಟಗಾರರಿಗೆ ಮಾಡಿರುವ ಅಪಮಾನವಾಗಿದೆ. ಅಲ್ಲದೆ ನಮ್ಮ ದೇಶದ ಸೈನಿಕರ ಬಲ ಮತ್ತು ಉತ್ಸಾಹವನ್ನು ಕುಂದಿಸುವ ಕೆಲಸವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸುವ ಒಳ್ಳೆಯ ಅವಕಾಶ ನಮ್ಮಲ್ಲಿ ಇತ್ತು. ಈ ಅವಕಾಶವನ್ನು ಬಳಸಿ ಪಾಕಿಸ್ತಾನ ಇನ್ನೆಂದೂ ನಮ್ಮ ದೇಶದ ಕಡೆ ತಿರುಗಿ ನೋಡದಂತೆ ಮಾಡಬಹುದಿತ್ತು. ಪಾಕಿಸ್ತಾನ ವಿರುದ್ಧ ನಡೆಸುವ ಕಾರ್ಯಾಚರಣೆಗೆ ಕೇಂದ್ರ ಸರಕಾರ ತೆಗೆಯುವ ಎಲ್ಲಾ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತ್ತು. ಎಲ್ಲಾ ಸಕಲ ಸಿದ್ಧತೆಯೊಂದಿಗೆ ತುಂಬಾ ಚೆನ್ನಾಗಿ ನಮ್ಮ ಸೈನಿಕರು ನಡೆಸುತ್ತಿದ್ದ ಕಾರ್ಯಾಚರಣೆ ಯಾಕೆ ಅರ್ಧದಲ್ಲಿ ನಿಲ್ಲಿಸಲಾಗಿದೆ. ಇದರ ಹಿಂದಿನ ಉದ್ದೇಶ ಏನು? ನಮ್ಮ ಸೈನಿಕರು ನಡೆಸುವ ಕಾರ್ಯಾಚರಣೆ ನಿಲ್ಲಿಸಲು ಟ್ರಂಪ್ ಯಾರು? ಇದರಿಂದ ದೇಶದ ಜನರು ಸಂಶಯ ಮತ್ತು ಆಕ್ರೋಶಗೊಂಡಿದ್ದು ಈ ಬಗ್ಗೆ ಚರ್ಚಿಸಲು ಅಧಿವೇಶನ ಅತ್ಯಗತ್ಯವಾಗಿದೆ ಎಂದರು.
ಕಾಶ್ಮೀರದಲ್ಲಿ ನಡೆದ ದಾಳಿಯ ಮರುದಿನ ಪ್ರಧಾನಿ ನರೇಂದ್ರ ಮೋದಿ ಬಿಹಾರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆ ಬಳಿಕ ಬಾಲಿವುಡ್ ಮತ್ತು ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೆ ಅವರು ಸರ್ವ ಪಕ್ಷದ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಅಧಿವೇಶನ ಕರೆಯಲು ಕೂಡಾ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಗಮನಿಸುವಾಗ ನರೇಂದ್ರ ಮೋದಿ ಈ ಉಗ್ರರ ದಾಳಿಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿದೆ ಎಂದು ಹರಿಪ್ರಸಾದ್ ಟೀಕಿಸಿದರು.
ಪಾಕಿಸ್ತಾನದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಏನಾಗಿದೆ ಎಂಬ ಮಾಹಿತಿ ದೇಶದ ಜನರಿಗೆ ಇಲ್ಲ. ದಾಳಿ ನಡೆಸಿದ ಭಯೋತ್ಪಾದಕರು ಎಲ್ಲಿ ಹೋಗಿದ್ದಾರೆ ಎಂಬುದೂ ಗೊತ್ತಿಲ್ಲ. ನಮ್ಮ ದೇಶದ ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿಗಳು ಇವೆ. ಪರಿಸ್ಥಿತಿ ಹೀಗಿರುವಾಗ ಕದನ ವಿರಾಮ ಘೋಷಿಸುವುದಾದರೆ ಸರ್ವ ಪಕ್ಷದ ಸಭೆ ನಡೆಸಿ ತೀರ್ಮಾನ ಮಾಡಬೇಕಿತ್ತು. ಅದನ್ನು ಮಾಡದೆ ಟ್ರಂಪ್ ಮಾತು ಕೇಳಿ ಏಕಾಏಕಿ ಕದನ ವಿರಾಮ ಘೋಷಣೆ ಮಾಡಿದ್ದು ಅವಮಾನವಾಗಿದೆ. ಅಷ್ಟು ದುರ್ಬಲ ದೇಶ ನಮ್ಮದಲ್ಲ ಎಂದು ಅವರು ಹೇಳಿದರು.
ಇದು ಸ್ಟ್ರಾಟಜಿಕ್ ಬ್ಲಂಡರ್. ಯುದ್ಧ ಘೋಷಣೆ ಮಾಡಬೇಕಿದ್ರೆ ಎಲ್ಲವನ್ನೂ ತಿಳಿದು ಮಾಡಬೇಕಿರುವುದು ನಾಯಕತ್ವ. ದೇಶದ ಜನರು ಮಾತ್ರವಲ್ಲ, ಬೇರೆ ದೇಶದ ಜನರೂ ಇದರಿಂದ ಅಸಮಾಧಾನಗೊಂಡಿದ್ದಾರೆ. ಈ ಬಾರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಬಯಸಿ ಭಾರತದ ಕಡೆ ನೋಡುತ್ತಿದ್ದರು. ಈಗ ಎಲ್ಲರಿಗೂ ಪ್ರಶ್ನೆ ಮೂಡಿದೆ. ಅದಕ್ಕೆ ಪ್ರಧಾನಿ ಮೋದಿಯವರೇ ಉತ್ತರಿಸಬೇಕಿದೆ. ಇವರನ್ನು ತಡೆದವರು ಯಾರು ಎಂದು ಲೋಕಸಭೆ ಮತ್ತು ರಾಜ್ಯಸಭೆಯ ತುರ್ತು ಅಧಿವೇಶನ ಕರೆದು ಸ್ಪಷ್ಟಪಡಿಸಬೇಕಿದೆ. ಇದು ಮೂರನೇ ದೇಶ ತೀರ್ಮಾನ ಮಾಡುವ ವಿಚಾರ ಅಲ್ಲ. ಆದರೆ, ನನ್ನ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಟ್ವೀಟ್ ಮಾಡಿ ಈ ವಿಷಯ ಬಹಿರಂಗಪಡಿಸಿದ್ದು ಅಚ್ಚರಿ ಮೂಡಿಸಿದೆ ಎಂದರು.