ಎಪ್ಪತ್ತರ ದಶಕದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ರಂಗದಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ವಿಭಿನ್ನ ಪ್ರಯೋಗಗಳನ್ನು ನಡೆಸಿ ಸಂಚಲನ ಮೂಡಿಸಿದ ‘ಸಮುದಾಯ’ ಈಗ 50ರ ಹೊಸ್ತಿಲಲ್ಲಿದೆ. ‘ಕಟ್ಟುವೆವು ನಾವು ಹೊಸ ನಾಡೊಂದನುʼ ಎನ್ನುವ ಆಶಯದೊಂದಿಗೆ ಆರೋಗ್ಯಕರ ಸಮಾಜವೊಂದನ್ನು ನಿರ್ಮಾಣ ಮಾಡಲು ಸಾಂಸ್ಕೃತಿಕ ಜಾಥಾಗಳನ್ನು ಹಮ್ಮಿಕೊಂಡು ರಾಜ್ಯದ ಹಳ್ಳಿ ಹಳ್ಳಿಗೆ ಯುವಪಡೆಯನ್ನು ಕೊಂಡೊಯ್ದ ಹೆಗ್ಗಳಿಕೆ ‘ಸಮುದಾಯ’ದ್ದು.
ನೂರತರ ನೂರುಮರ ಭಾರತವೆಂಬುದು ಜೀವಸ್ವರ, “ಮನುಷ್ಯತ್ವದೆಡೆಗೆ ಸಮುದಾಯ 50 ಜಾಥಾ” ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ದೊಡ್ಡ ರೀತಿಯಲ್ಲಿ ಸಮುದಾಯ ತನ್ನ ಯಶಸ್ವಿ 50 ವರ್ಷಗಳ ಪಯಣವನ್ನು ಆಚರಿಸಲು ಸಿದ್ಧತೆ ನಡೆಸಿದೆ.
ಸಮುದಾಯದ ಇತಿಹಾಸ:
‘ಕಲೆಗಾಗಿ ಕಲೆ ಅಲ್ಲ; ಬದುಕಿಗಾಗಿ ಕಲೆ’. ಸಮೂಹದ ಕನಸುಗಳನ್ನು ಸಾಂಸ್ಕೃತಿಕ ಅಭಿವ್ಯಕ್ತಿಯ ಮೂಲಕ ಪಸರಿಸುವ, ಪ್ರಜಾಪ್ರಭುತ್ವದ ಆಶಯಗಳನ್ನು ಜನಮಾನಸದಲ್ಲಿ ಕಲಾಭಿವ್ಯಕ್ತಿಯ ಮೂಲಕ ಬಿತ್ತುವ ಕನಸಾಗಿ ಹುಟ್ಟಿದ್ದು ಸಮುದಾಯ. 1975ರ ಆಂತರಿಕ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಸೆಟೆದ ಮನಸ್ಸುಗಳು ಒಂದೆಡೆ ಸೇರಿ ಪ್ರತಿರೋಧದ ಮಾರ್ಗಗಳನ್ನು ಹುಡುಕುವಾಗ ಜನಸಮುದಾಯದ ಸಾಕ್ಷಿಪ್ರಜ್ಞೆಯಾಗಿ, ಸಾಂಸ್ಕೃತಿಕ ನೆಲೆಯಲ್ಲಿ ಕೆಲಸ ಮಾಡುವ ಸಂಘಟನೆಯಾಗಿ ಮೂಡಿಬಂದ ಹೆಸರು ‘ಸಮುದಾಯ’.
ತನ್ನ ಮೊದಲ ಹೆಜ್ಜೆಯಲ್ಲಿಯೇ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವ, ಅದಕ್ಕೆ ಅಗತ್ಯವಾದ ಸಾಂಸ್ಕೃತಿಕ ಪರಿಸರವನ್ನು ಕಟ್ಟಿ ಬೆಳೆಸಲು ಸಮುದಾಯ ಬದ್ಧವಾಗಿತ್ತು. ಸತತ ಸಾಂಸ್ಕೃತಿಕ ಮಧ್ಯಪ್ರವೇಶದ ಮೂಲಕ ವಿಮರ್ಶಾತ್ಮಕ ಪ್ರಜ್ಞೆಯನ್ನು ಮೂಡಿಸಿ ಬೆಳೆಸುವ ಆಶಯವನ್ನು ಕಟ್ಟಿಕೊಂಡಿತು. ‘ಕಲೆಗಾಗಿ ಕಲೆ ಅಲ್ಲ; ಬದುಕಿಗಾಗಿ ಕಲೆ’ ಎಂಬುದನ್ನು ತನ್ನ ಘೋಷ ವಾಕ್ಯವಾಗಿಟ್ಟುಕೊಂಡು ಜನಜಾಗೃತಿಯತ್ತ ಮುಂದಾಯಿತು.
ಸಮಾಜ ಸದೃಢಗೊಳ್ಳಬೇಕು, ಕ್ರಿಯಾಶೀಲವಾಗಬೇಕು, ಸದಾಕಾಲವೂ ತಂಟೆ ತಕರಾರುಗಳು, ಓರೆಕೋರೆಗಳು ಇದ್ದೇ ಇರುತ್ತಾವಾದರೂ ಆ ಕಾಲದ ಅಗತ್ಯಕ್ಕನುಗುಣವಾದ ಚಟುವಟಿಕೆ, ಚಲನಶೀಲತೆಯನ್ನು ಮೈಗೂಡಿಸಿಕೊಂಡು ಏರು ಪೇರುಗಳನ್ನು ರೂಕ್ಷಿಸಿ ಸರಿಪಡಿಸುವುದು ತನ್ನ ಕೆಲಸವಾಗಬೇಕೆಂಬ ಹೆಬ್ಬಯಕೆಯಿಂದ ಸಮುದಾಯ ಮುನ್ನಡಿಯಿಟ್ಟಿತು. ಜನರನ್ನು ತಲುಪಲು ಬಡಿದೆಬ್ಬಿಸಲು ಪ್ರಮುಖ ಮಾಧ್ಯಮವಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತಾದರೂ ಅದಷ್ಟಕ್ಕೇ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ತುರ್ತುಪರಿಸ್ಥಿತಿಯ ಕರಾಳತೆಗೆ ಸಾಂಸ್ಕೃತಿಕ ಪ್ರತಿರೋಧವಾಗಿ ಹುಟ್ಟಿದ ಅಭಿವ್ಯಕ್ತಿ, ತುರ್ತುಪರಿಸ್ಥಿತಿ ಕೊನೆಗೊಂಡ ಮಾತ್ರಕ್ಕೆ ನೇಪಥ್ಯಕ್ಕೇನೂ ಸರಿಯಲಿಲ್ಲ. ಬದಲಿಗೆ ರಂಗಭೂಮಿ ಮತ್ತು ಅದರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಸಾಹಿತ್ಯ, ಕಲೆ, ಸಂಗೀತ ಇವೆಲ್ಲವುಗಳ ಸಾರ ಸರ್ವಸ್ವವನ್ನು ಅಂತರ್ಗತಗೊಳಿಸಿಕೊಂಡು ಮುನ್ನಡೆಯುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಯನ್ನು ರೂಪಿಸಿಕೊಂಡಿತು.
70 -80ರ ದಶಕದಲ್ಲಿ ಸಮುದಾಯ ರಂಗಭೂಮಿಗೆ ರಾಜಕೀಯ ಪರಿಭಾಷೆ ನೀಡಿತು. ಜನಸಮೂಹದ ಬದುಕಿನ ಅಗತ್ಯಗಳು, ಮೇಲ್ ಹಂತದ ಕೆಲವು ಜನರ ಅಗತ್ಯಗಳನ್ನು ಮೀರಿದ್ದಾಗಿರಬೇಕು. ಕಟ್ಟುವ ಜನರ ಅಗತ್ಯಗಳು ಮೆಟ್ಟುವ ಜನರ ಅಗತ್ಯಗಳಿಗಿಂತ ಹೆಚ್ಚು ಪ್ರಮುಖವಾಗಬೇಕು. ಅದರತ್ತ ಪ್ರಭುತ್ವದ ಗಮನ ಹರಿಯಬೇಕು ಎಂಬುದು ಸಮುದಾಯದ ಇಚ್ಛೆ. ವ್ಯವಸ್ಥೆಯನ್ನು ಪ್ರಶ್ನಿಸುವ, ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಇರಾದೆ ಹೊಂದಿರುವ ಸಮುದಾಯ ತನ್ನ ಪ್ರಾರಂಭದಿಂದಲೂ ಪಾಂಡಿತ್ಯ ಪ್ರದರ್ಶನಕ್ಕಿಂತ ಬದ್ಧತೆ, ಪ್ರಬುದ್ಧತೆಗೆ ಹೆಚ್ಚು ಗಮನ ನೀಡುತ್ತ ಬಂದಿದೆ.
ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಮತ್ತು ಅದಕ್ಕೆ ಅಗತ್ಯವಾದ ವಿವಿಧ ಮಾಧ್ಯಮಗಳನ್ನು ಸಶಕ್ತವಾಗಿ ಬಳಸಿಕೊಳ್ಳಲು ಎಲ್ಲ ವಿಭಾಗಗಳನ್ನೂ ತಲುಪಲು ಸಭೆ, ಸಮಾರಂಭ, ಚರ್ಚೆ, ವಿಚಾರ ಸಂಕಿರಣಗಳು, ಗೋಷ್ಠಿಗಳನ್ನು ನಡೆಸುತ್ತ ಬಂದಿದೆ. ಕಲೆ ಸಾಹಿತ್ಯ ಸಂಗೀತಗಳು ರಂಗಭೂಮಿಯ ಅವಿಭಾಜ್ಯ ಅಂಗಗಳಾಗಿದ್ದು, ರಂಗಪ್ರಯೋಗಗಳಲ್ಲಿ ಅವೆಲ್ಲವೂ ಒಳಗೊಂಡೇ ಇರುತ್ತವೆಯಾದರೂ, ಆ ಪ್ರತೀ ವಲಯವನ್ನೇ ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಕಾರ್ಯಕ್ರಮಗಳನ್ನೂ ನಿರಂತರವಾಗಿ ನಡೆಸಿಕೊಂಡು ತನ್ನ ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ದೊಡ್ಡ ರೀತಿಯಲ್ಲಿ ʼಸಮುದಾಯʼ ತನ್ನ ಯಶಸ್ವಿ 50 ವರ್ಷಗಳ ಪಯಣವನ್ನು ಆಚರಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಸಮುದಾಯ ಸಂಘಟನೆಯ ಹಿತೈಷಿಗಳು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದ್ದು, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್ ನಾಗಮೋಹನ್ ದಾಸ್ ಈ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿರುತ್ತಾರೆ. ಅಗ್ರಹಾರ ಕೃಷ್ಣಮೂರ್ತಿ ಅಧ್ಯಕ್ಷರಾಗಿ, ಡಾ. ಬಂಜಗೆರೆ ಜಯಪ್ರಕಾಶ್ ಕಾರ್ಯಧ್ಯಕ್ಷರಾಗಿರುತ್ತಾರೆ. ಈ ಸಮಿತಿಯ ಸದಸ್ಯರಾಗಿ ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ. ಎಸ್ ಜಿ ಸಿದ್ದರಾಮಯ, ಡಾ. ಎಲ್ ಹನುಮಂತಯ್ಯ, ಮಾವಳ್ಳಿ ಶಂಕರ್, ಮೋಹನ್ ಕೊಂಡಜ್ಜಿ, ಬೋಳುವಾರು ಮಹಮದ್ ಕುಯ್ಯಿ, ಶಶಿಧರ್ ಅಡಪ, ಸಿ ಬಸವಲಿಂಗಯ್ಯ, ಹೆಚ್. ಜನಾರ್ಧನ್ (ಜನ್ನಿ), ಡಾ. ಬಿ ಆರ್ ಮಂಜುನಾಥ್, ಜೆ ಸಿ ಶಶಿಧರ್ ಕುಮಾರ್ ಅವರುಗಳು ಇರಲಿದ್ದಾರೆ. ಈ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ಗುಂಡಣ್ಣ ಚಿಕ್ಕಮಗಳೂರು, ಖಜಾಂಚಿಯಾಗಿ ಎಸ್.ದೇವೇಂದ್ರ ಹೆಗ್ಗಡೆ, ಸಂಚಾಲಕರಾಗಿ ರವೀಂದ್ರನಾಥ ಸಿರಿವರ ಕಾರ್ಯ ನಿರ್ವಹಿಸಲಿದ್ದಾರೆ.
ʼಸಮುದಾಯ 50ʼ ಆಚರಣೆಯ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲು ಸಲಹಾ ಸಮಿತಿ ರಚಿಸಲಾಗಿದ್ದು, ಸಾಹಿತಿ ದೇವನೂರು ಮಹಾದೇವ, ಡಾ. ವಿಜಯಾ, ಡಾ. ಕೆ ಮರುಳಸಿದ್ದಪ್ಪ, ಡಾ. ಸಿ ವೀರಣ್ಣ, ಡಾ. ಕೆ ವಿ ನಾರಾಯಣ, ಡಾ. ಸಂಪಿಗೆ ತೋಂಟದಾರ್ಯ, ಲಕ್ಷ್ಮೀಪತಿ ಕೋಲಾರ, ಶಶಿಧರ್ ಬಾರೀಘಾಟ್ ಈ ಸಲಹಾ ಸಮಿತಿಯ ಸದಸ್ಯರಾಗಿ ಸಹಕಾರ ನೀಡಲಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಹೊಸ ಸ್ಥಳಗಳ ಗುರುತಿಸುವ ಕಾರ್ಯ ಆರಂಭಿಸಿದ ಎಸ್‌ಐಟಿ ಅಧಿಕಾರಿಗಳು
ವರ್ಷಪೂರ್ತಿ ನೆಡೆಯುವ ʼಸಮುದಾಯ 50ʼರ ಕಾರ್ಯಕ್ರಮಗಳು ಇದೇ ಆಗಸ್ಟ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಡಾ. ಬರಗೂರು ರಾಮಚಂದ್ರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ. ನಂತರ ರಾಜ್ಯದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
ರಾಷ್ಟ್ರೀಯ ನಾಟಕೋತ್ಸವಗಳು, ರಾಷ್ಟ್ರೀಯ ಬೀದಿ ನಾಟಕೋತ್ಸವಗಳು, ರಾಷ್ಟ್ರೀಯ ವಿಚಾರ ಸಂಕಿರಣಗಳು, ಕಿರುನಾಟಕ ಸ್ಪರ್ಧೆ, ಚಿತ್ರೋತ್ಸವ, ಕಿರುಚಿತ್ರೋತ್ಸವ /ಕಿರುಚಿತ್ರ ಸ್ಪರ್ಧೆ, ಚಿತ್ರಕಲಾ ಶಿಬಿರ ಮತ್ತು ಪ್ರದರ್ಶನ, ರಂಗಗೀತೆ ಕಾರ್ಯಾಗಾರ, ಬೀದಿನಾಟಕ ಜಾಥಾ, ಬೈಕ್ ರ್ಯಾಲಿ, ಸಂಗೀತ ನೃತ್ಯ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆ, ಸ್ಮರಣ ಸಂಚಿಕೆ ಪ್ರಕಟಣೆ, ಹಿರಿಯ ರಂಗಕರ್ಮಿಗಳಿಗೆ ರಂಗಗೌರವ… ಹೀಗೆ “ಸಮುದಾಯ 50 ಮನುಷ್ಯತ್ವದೆಡೆಗೆ ಸಮುದಾಯ ಜಾಥಾ”ವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ.