ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ವಿರುದ್ಧ ಇಡೀ ಕರ್ನಾಟಕ ಸಿಡಿದೆದ್ದಿದೆ. ಆರೋಪಿ ಪ್ರಜ್ವಲ್, ಆತನ ತಂದೆ, ಮಾಜಿ ಸಚಿವ ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಇದೀಗ, ರಾಜ್ಯದ ಎಲ್ಲ ಭಾಗದ ಮಹಿಳೆಯರು ‘ನಾವೆದ್ದು ನಿಲ್ಲದಿದ್ದರೆ’ ಎಂಬ ಘೋಷಣೆಯ ಕರೆ ನೀಡಿದ್ದಾರೆ. ಈ ಘೋಷಣೆಯಡಿ ಮೇ 30 ರಂದು ಹಾಸನದಲ್ಲಿ ‘ಹಾಸನ ಚಲೋ’ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಿದ್ದಾರೆ.
ಹಾಸನದಲ್ಲಿ ನಡೆಯಲಿರುವ ಈ ಬೃಹತ್ ಸಾರ್ವಜನಿಕ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಮಹಿಳೆಯರು, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರು, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿ ಸಂಘಟನೆಗಳು ಭಾಗಿಯಾಗಲಿದ್ದಾರೆ. ಬೃಹತ್ ಹೋರಾಟ ನಡೆಸಿದ್ದಾರೆ.
ಹಾಸನ ಚಲೋ ಕರ್ನಾಟಕದಲ್ಲಿ ಮತ್ತೊಂದು ಬೃಹತ್ ಹೋರಾಟದ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. 80ರ ದಶಕದಿಂದಲೂ ನಾನಾ ಚಳವಳಿಗಳ ಮೂಲಕ ಬರೆಯಲಾದ ಇತಿಹಾಸದ ಪುಸ್ತಕದಲ್ಲಿ ಮತ್ತೊಂದು ಪುಟ ಸೇರಲಿದೆ. ಕಳೆದ 10 ವರ್ಷಗಳಲ್ಲಿ ನಡೆದಿರುವ ಉಡುಪಿ ಚಲೋ, ತುಮಕೂರು ಚಲೋ, ಮಡಿಕೇರಿ ಚಲೋ, ಗುಡಿಬಂಡೆ ಚಲೋ, ಬೆಂಗಳೂರು ಚಲೋ ಹಾಗೂ ಕಾರಗಟಿ ಚಲೋಗಳಂತಹ ಬೃಹತ್ ಹೋರಾಟಗಳು ಜನರ ಮನದಲ್ಲಿ ಛಾಪು ಮೂಡಿಸಿವೆ.
2016ರ ಅಕ್ಟೋಬರ್ 9ರಂದು ‘ನಮ್ಮ ಆಹಾರ – ನಮ್ಮ ಹಕ್ಕು; ನಮ್ಮ ಬಟ್ಟೆ – ನಮ್ಮ ಆಯ್ಕೆ’ ಘೋಷಣೆಯೊಂದಿಗೆ ಉಡುಪಿಯಲ್ಲಿ ನಡೆದ ಉಡುಪಿ ಚಲೋ ಸ್ವಾಭಿಮಾನಿ ಸಮಾವೇಶ ದಲಿತ, ದಮನಿತ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಐಕ್ಯತೆಯನ್ನು ಘೋಷಿಸಿತ್ತು. ಆರ್‌ಎಸ್‌ಎಸ್-ಬಿಜೆಪಿ ತಮ್ಮ ಕೋಮುವಾದದ ಪ್ರಯೋಗ ಶಾಲೆ ಮಾಡಿಕೊಂಡಿರುವ ಉಡುಪಿಯಲ್ಲಿ ನಿಂತು ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದಮನಗಳ ವಿರುದ್ಧ ಗಟ್ಟಿ ಘೋಷಣೆಗಳು ಮೊಳಗಿದ್ದವು. ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆಯನ್ನು ನೀಡಿತ್ತು. ಉಡುಪಿ ಪೇಜಾವರ ಮಠದಲ್ಲಿ ನಡೆಯುತ್ತಿದ್ದ ಪಂಕ್ತಿಭೇದವನ್ನು ಖಂಡಿಸಿತ್ತು. ಮಾತ್ರವಲ್ಲದೆ, ಉಡುಪಿ ಚಲೋ ದಲಿತ, ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ (ಡಿಡಿಎಚ್‌ಎಸ್) ಹುಟ್ಟಿಗೂ ಕಾರಣವಾಯಿತು.

ಉಡುಪಿ ಚಲೋ ಬಳಿಕ ಡಿಡಿಎಚ್‌ಎಸ್ ಹಲವಾರು ಚಲೋಗಳನ್ನು ನಡೆಸಿ, ಕೋಮುವಾದಿ-ಜಾತಿವಾದಿ ಶಕ್ತಿಗಳ ವಿರುದ್ಧ ಬೃಹತ್ ಹೋರಾಟಗಳನ್ನು ನಡೆಸಿತ್ತು. 2016ರ ಡಿಸೆಂಬರ್‌ನಲ್ಲಿ ವಿರಾಜಪೇಟೆ ಬಳಿಯ ದಿಡ್ಡಳ್ಳಿಯಲ್ಲಿ ವಾಸಿಸುತ್ತಿದ್ದ ಆದಿವಾಸಿಗಳ ಗುಡಿಸಲುಗಳನ್ನು ಕೊಡಗು ಜಿಲ್ಲಾಡಳಿತ ಧ್ವಂಸಗೊಳಿಸಿ, ಒಕ್ಕಲೆಬ್ಬಿಸುವ ಹುನ್ನಾರ ನಡೆಸಿತ್ತು. ಆ ವೇಳೆ, ದಿಡ್ಡಳ್ಳಿ ಆದಿವಾಸಿಗಳ ಪರವಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಿರಂತರವಾಗಿ ದಿಡ್ಡಳ್ಳಿಯಲ್ಲಿ ಹೋರಾಟ ನಡೆಸಿತು. ಹೋರಾಟಕ್ಕೆ ಬಗ್ಗದ ಸರ್ಕಾರದ ವಿರುದ್ಧ 2016ರ ಡಿಸೆಂಬರ್ 23ರಂದು ‘ಮಡಿಕೇರಿ ಚಲೋ’ ನಡೆಸಿತು. ಮಡಿಕೇರಿ ಚಲೋ ಬೃಹತ್ ಹೋರಾಟದ ಬಳಿಕ, ಸರ್ಕಾರವು ರಾಜ್ಯಾದ್ಯಂತ ಭೂವಂಚಿತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಹೋರಾಟಗಾರರು, ಅಧಿಕಾರಿಗಳು ಮತ್ತು ಸಚಿವರನ್ನೊಳಗೊಂಡ ‘ಹೈಪವರ್ ಕಮಿಟಿ’ ರಚಿಸಿತ್ತು. ಅಲ್ಲದೆ, ದಿಡ್ಡಳ್ಳಿಯ ಭೂಮಿ-ವಸತಿ ವಂಚಿತ ಆದಿವಾಸಿಗಳಿಗೆ ಪುನರ್‌ವಸತಿ ಒದಗಿಸಿತು.

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಅಭಿಷೇಕ್ ಎಂಬ ದಲಿತ ಯುವಕನನ್ನು ಬೆತ್ತಲೆಗೊಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಮನಬಂದಂತೆ ಥಳಿಸಿ, ಸಾಯುವ ಸ್ಥಿತಿಯಲ್ಲಿ ಸ್ಮಶಾನವೊಂದರ ಬಳಿ ಅತನನ್ನು ಎಸೆದು ಹೋಗಲಾಗಿತ್ತು. ಹಲ್ಲೆ ನಡೆಸಿದವರನ್ನು ಬಂಧಿಸಲಾಗಿತ್ತಾದರೂ, ಅಪಹರಣ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಿಸಿರಲಿಲ್ಲ. ಬದಲಾಗಿ, ಅಭಿಷೇಕ್ ವಿರುದ್ಧವೇ ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಾಗಿತ್ತು. ಅಭಿಷೇಕ್ ಮೇಲಿನ ಹಲ್ಲೆ ಮತ್ತು ಪ್ರಕರಣದಲ್ಲಿ ಆಡಳಿತದ ಇಬ್ಬಂದಿತನವನ್ನು ಖಂಡಿಸಿ, 2017ರ ಫೆಬ್ರವರಿ 16ರಂದು ತುಮಕೂರು ಚಲೋ ಹೋರಾಟ ನಡೆಸಲಾಗಿತ್ತು. ಪರಿಣಾಮ, ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ, ಮೂವರು ಆರೋಪಿಗಳನ್ನು ತುಮಕೂರು ಜಿಲ್ಲೆಯಿಂದ ಗಡಿಪಾರು ಮಾಡಲಾಯಿತು. ಅಭಿಷೇಕ್ ವಿರುದ್ಧದ ಪೋಕ್ಸೋ ಪ್ರಕರಣ ಕೈಬಿಡಲಾಯಿತು. ಅಭಿಷೇಕ್‌ಗೆ ನ್ಯಾಯ ಸಿಗುವಂತೆ ಕಾನೂನು ಹೋರಾಟವನ್ನೂ ಮುಂದುವರೆಸಲಾಯಿತು.
ಅದೇ ವರ್ಷ ಮಾರ್ಚ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ತನ್ನ ಸಹಪಾಠಿ, ಪ್ರಬಲ ಜಾತಿಯ ಬಾಲಕಿಯನ್ನು ಮಾತನಾಡಿಸಿದನೆಂಬ ಏಕೈಕ ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿ ದಲಿತ ಮುರುಳಿಯನ್ನು ಹೊಡೆದು, ಕೊಲ್ಲಲಾಗಿತ್ತು. ಆತನ ಮೃತದೇಹವನ್ನು ಮರಕ್ಕೆ ನೇತು ಹಾಕಲಾಗಿತ್ತು. ಆ ಘಟನೆ ಇಡೀ ರಾಜ್ಯದ ಕಂಬನಿ, ಆಕ್ರೋಶಕ್ಕೆ ಕಾರಣವೂ ಆಗಿತ್ತು. ಆ ಸಂದರ್ಭದಲ್ಲಿ 2017ರ ಮಾರ್ಚ್ 6ರಂದು ಡಿಡಿಎಚ್‌ಎಸ್ ಗುಡಿಬಂಡೆ ಚಲೋಗೆ ಕರೆಕೊಟ್ಟಿತ್ತು. ತಪ್ಪಿತಸ್ಥ ಪ್ರಬಲ ಜಾತಿಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸುವಂತೆ ಒತ್ತಾಯಿಸಿತ್ತು. ಅಲ್ಲದೆ, ದಲಿತರ ಮೇಲೆ ದೌರ್ಜನ್ಯಗಳು ಮರುಕಳಿಸದಂತೆ ಎಚ್ಚರಿಕೆಯನ್ನೂ ನೀಡಿತ್ತು.
ಅಂಬೇಡ್ಕರ್ ಜಯಂತಿಯ ಅಂಗವಾಗಿ 2017ರ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ‘ಬೆಂಗಳೂರು ಚಲೋ’ ಬೃಹತ್ ಸಮಾವೇಶವನ್ನೂ ಡಿಡಿಎಚ್‌ಎಸ್ ನಡೆಸಿತು. ಶೋಷಿತ ಜನರಿಗೆ ದುಡಿಯಲು ಅಗತ್ಯವಿರುವಷ್ಟು ಭೂಮಿ, ರೈತರ ಸಾಲ ಮನ್ನಾ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ದಲಿತ-ಆದಿವಾಸಿ-ಅಲೆಮಾರಿ-ಅಲ್ಪಸಂಖ್ಯಾತ-ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ತಳ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ತೀವ್ರ ಕ್ರಮ, ಮದ್ಯಪಾನ ಮುಕ್ತ ಕರ್ನಾಟಕ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಒಳ ಮೀಸಲಾತಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಗಿತ್ತು.

ಇವಲ್ಲದೆ, ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ, ಭೂಮಿ-ವಸತಿ ವಂಚಿತರಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ, ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ, ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ, ಮಹಿಳೆಯ ರಕ್ಷಣೆಗಾಗಿ ಹಲವಾರು ಚಲೋಗಳು ಕರ್ನಾಟಕದಲ್ಲಿ ನಡೆದಿವೆ. ಹಲವಾರು ಬೃಹತ್ ಚಲೋಗಳನ್ನು ಖಂಡಿರುವ ಕರ್ನಾಟಕ, ಇದೀಗ, ದೇವೇಗೌಡರ ಕುಟುಂಬದ ಪಾಳೇಗಾರಿಕೆ, ಲೈಂಗಿಕ ದೌರ್ಜನ್ಯ, ದೌರ್ಜನ್ಯಗಳಲ್ಲಿ ಹೆಣ್ಣನ್ನೇ ಅಪರಾಧಿಯನ್ನಾಗಿ ನೋಡುವ ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೊಡ್ಡುವ ‘ಹಾಸನ ಚಲೋ’ ಹೋರಾಟಕ್ಕೆ ಸಾಕ್ಷಿಯಾಗಿದೆ. ಹಾಸನದಲ್ಲಿ ಮೇ 30 ರಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ತನ್ನ ಬಲಾಢ್ಯ ಕುಟುಂಬದ ಕಾರಣಕ್ಕಾಗಿ ದೊರೆತಿರುವ ಜಾತಿಬಲ, ಹಣಬಲ, ಸಂಸದನ ಅಧಿಕಾರವನ್ನು ಅತ್ಯಂತ ದರ್ಪದಿಂದ ದುರ್ಬಳಕೆ ಮಾಡಿಕೊಂಡು ನೂರಾರು ಮಹಿಳೆಯರ ಮೇಲೆ ಲೈಂಗಿಕ ಹಿಂಸಾಚಾರ ನಡೆಸಿರುವ ಪ್ರಜ್ವಲ್‌ನನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿಯನ್ನು ಬಂಧಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಹಕರಿಸಬೇಕು.
ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ಹೆಚ್.ಡಿ ರೇವಣ್ಣನಿಂದ ಎಲ್ಲ ರೀತಿಯ ಲೈಂಗಿಕ ಶೋಷಣೆಗೆ ಒಳಗಾದ ಮತ್ತು ದೂರು ಸಲ್ಲಿಸಲು ಮುಂದೆ ಬಂದಿರುವ ಮಹಿಳೆಯರಿಗೆ ಅವರ ಗೌಪ್ಯತೆಯನ್ನು ಕಾಪಾಡಬೇಕು. ಅವರಿಗೆ ತಕ್ಷಣವೇ ರಕ್ಷಣೆ ನೀಡಬೇಕು, ಸಂತ್ರಸ್ತೆಯರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕು.
ಮಹಿಳೆಯರ ವೀಡಿಯೋಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿದ, ಅವರ ಗುರುತುಗಳನ್ನು ಮಸುಕುಗೊಳಿಸದೆ ಅವುಗಳನ್ನು ಪೆನ್-ಡ್ರೈವ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಗಾಧ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡ ಪ್ರತಿಯೊಬ್ಬನನ್ನೂ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು. ಇಂಟರ್ನೆಟ್‍ನಿಂದ ಆ ವೀಡಿಯೊಗಳು ಮತ್ತು ಫೋಟೋಗಳನ್ನು ತೆಗೆದುಹಾಕಬೇಕು ಎಂದು ಹಾಸನ ಚಲೋ ಹೋರಾಟವು ಒತ್ತಾಯಿಸುತ್ತಿದೆ.