ಜುಲೈ 2 ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದೇವನಹಳ್ಳಿ ಭೂಸ್ವಾಧೀನದ ಸಮಸ್ಯೆ ವಿಶೇಷ ಅಜೆಂಡಾ ಆಗಬೇಕು. ಮತ್ತು ದೇವನಹಳ್ಳಿಯ ಮೂಲಕವೇ ಬೆಟ್ಟಕ್ಕೆ ಹೋದವರು ಭೂಸ್ವಾಧೀನಮಾಡುವುದಿಲ್ಲವೆಂಬ ನಿರ್ಣಯ ಮಾಡಿಯೇ ವಾಪಸ್ಸಾಗಬೇಕು ಎಂದು ಚನ್ನರಾಯಪಟ್ಟಣ ರೈತ ಹೋರಾಟ ಸಮಿತಿ ಆಗ್ರಹಿಸಿದೆ.
ಜುಲೈ 2 ರಂದು ನಡೆವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತಮ್ಮ ಪರವಾದ ನಿರ್ಣಯಕ್ಕೆ ಬರಲು ನೈತಿಕ ಬೆಂಬಲ ತುಂಬುವ ಸಲುವಾಗಿ ಚನ್ನರಾಯಪಟ್ಟಣದ 13 ಹಳ್ಳಿಗಳ ಸಂತ್ರಸ್ತರು “ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಬವಿಷ್ಯ ನಿಮ್ಮ ಕೈಯಲ್ಲಿದೆ” ಎಂದು ನಾಡ ಕಚೇರಿ ಮುಂಭಾಗದ ಧರಣಿ ಸ್ಥಳದಲ್ಲಿ ಉಪವಾಸ ಕೂರುತ್ತಿದ್ದೇವ ಎಂದು ರೈತ ಹೋರಾಟ ಸಮಿತಿ ತಿಳಿಸಿದೆ.
ಪ್ರತಿಭಟನೆಯಲ್ಲಿ ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ರೈತರಿಗೆ ಮಿಡಿವ ನಾಡಿನ ಜನರ ಪ್ರತಿನಿದಿಯಾಗಿ ನಮ್ಮ ಜೊತೆ ಉಪವಾಸ ಕೂರಲಿದ್ದಾರೆ ಎಂದು ರೈತ ಹೋರಾಟ ಸಮಿತಿ ಪ್ರಕಟಣೆಯಲ್ಲಿ ಹೇಳಿದೆ.
ದೇವನಹಳ್ಳಿ ಚಲೋದ ನಂತರ ನಡೆದ ಬೆಳವಣಿಗೆಯಲ್ಲಿ ಸರ್ಕಾರವು ರೈತರೊಂದಿಗೆ ಹಾಗೂ ಹೋರಾಟಗಾರರೊಂದಿಗೆ ಅತ್ಯಂತ ದಾರುಣವಾಗಿ ವರ್ತಿಸಿದ ಪರಿಣಾಮ ಇಡೀ ರಾಜ್ಯಕ್ಕೆ ರಾಜ್ಯವೇ “ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ಜೊತೆಗೆ ನಿಂತುಬಿಟ್ಟವು. ಪ್ರಗತಿಪರ ಚಿಂತಕರು,ನಟರೂ,ಸಾಹಿತಿಗಳು, ಕಲವಿದರೂ ಸೇರಿದಂತೆ ಎಲ್ಲರೂ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಜುಲೈ 4ರಂದು ಸರ್ಕಾರ ರೈತಮುಖಂಡರ, ಹೋರಾಟಗಾರರ ಸಭೆ ಕರೆದಿದೆ ಎಂದು ತಿಳಿಸಿದೆ.
ಜುಲೈ 4ರಂದು ನಡೆಯುವ ಸಭೆಯಲ್ಲಿ ರೈತ ನಿಯೋಗದ ಮತ್ತು ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರ ಸಭೆ ಕರೆದು, ಸಮಸ್ಯೆಯ ಕುರಿತು ಚರ್ಚಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ,ರೈತರನ್ನು ಬೆಂಬಲಿಸಿ ಫ್ರೀಡಂ ಪಾರ್ಕಿನಲ್ಲಿ ಬೃಹತ್ “ನಾಡ ಉಳಿಸಿ ಸಮಾವೇಶ”ವನ್ನು ಸಂಘಟಿಸಲಾಗುತ್ತಿದೆ. ಆದ್ದರಿಂದ ಬೆಂಗಳೂರು ಗ್ರಾಮಾಂತರಜಿಲ್ಲೆಯ ಎಲ್ಲ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸಿ ಎಂದು ಮನವಿ ಸಮಿತಿ ಮಾಡಿದೆ.