ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಜ.27) ಖ್ಯಾತ ನಟ ಶಿವರಾಜ್ ಕುಮಾರ್ ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆಯ ನಂತರ ಹಿಂತಿರುಗಿ ಬಂದ ನಂತರ ಅವರ ಆರೋಗ್ಯವನ್ನು ವಿಚಾರಿಸಲು ಇಂದು ಭೇಟಿ ಮಾಡಿದ್ದೇನೆ. ಅವರ ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆಯಾಡಿ ಆರೋಗ್ಯ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದರು” ಎಂದು ಹೇಳಿದರು.
“ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ತಿಳಿಸಿದ್ದಾರೆ” ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಿ ನಟ ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ಮಾಡಲಾಗಿದೆ. ಆರು ಗಂಟೆಗಳ ಕಾಲ ಆಪರೇಷನ್ ನಡೆದಿದೆ.
“ಮೂತ್ರಕೋಶದಲ್ಲಿದ್ದ ಕ್ಯಾನ್ಸರ್ ಕೋಶವನ್ನು ತೆಗೆದುಹಾಕಲಾಗಿದೆ. ಕರುಳನ್ನು ಬಳಸಿ ಕೃತಕ ಮೂತ್ರಕೋಶವನ್ನು ರಚಿಸಲಾಗಿದೆ” ಎಂದು ಡಾ.ಮುರುಗೇಶ್ ಮನೋಹರನ್ ವಿಡಿಯೋ ಮೂಲಕ ಹೇಳಿದ್ದರು.