ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹಗಳು ಕರ್ನಾಟಕದಲ್ಲಿ ನಡೆದಿವೆ. ಅದರಲ್ಲೂ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ 2023ರ ಏಪ್ರಿಲ್ ಮತ್ತು ಆಗಸ್ಟ್ ನಡುವೆ (ಐದು ತಿಂಗಳು) 12 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5) ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಾಲ್ಯವಿವಾಹದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ಐದು ವರ್ಷಗಳಲ್ಲಿ (2018-2022) ದೇಶದಲ್ಲಿ 3,524 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ.
ಬಾಲ್ಯ ವಿವಾಹವನ್ನು ತಡೆಯಲು ಬಾಲ್ಯ ವಿವಾಹ ನಿಷೇಧ ಕಾಯಿದೆ-2006 ಜಾರಿಯಲ್ಲಿದೆ. 2030ರ ವೇಳೆಗೆ ಭಾರತವನ್ನು ಬಾಲ್ಯವಿವಾಹ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. ಆದರೂ, ಬಾಲ್ಯವಿವಾಹಗಳಿಗೆ ಕಡಿವಾಡ ಹಾಕುವುದು ಸವಾಲಾಗಿದ್ದು, ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಲೇ ಇವೆ.
ಬಾಲ್ಯ ವಿವಾಹದ ಅಂಕಿಅಂಶಗಳಲ್ಲಿ ಕರ್ನಾಟಕವು ಅಗ್ರ ಸ್ಥಾನ ಪಡೆದುಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 706 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ, ಅಸ್ಸಾಂನಲ್ಲಿ 554, ತಮಿಳುನಾಡಿನಲ್ಲಿ 414, ಪಶ್ಚಿಮ ಬಂಗಾಳದಲ್ಲಿ 390, ಮಹಾರಾಷ್ಟ್ರದಲ್ಲಿ 185 ಬಾಲ್ಯ ವಿವಾಹಗಳು ವರದಿಯಾಗಿವೆ.
ಕರ್ನಾಟಕದಲ್ಲಿ 2018 – 2022ರ ನಡುವೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಯಾವುದೇ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿ ಹೇಳಿದೆ. ಆದರೆ, 2023ರಲ್ಲಿ ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಒಂದು ಬಾಲ್ಯವಿವಾಹ ನಡೆದಿದೆ. ಜಿಲ್ಲೆಯಲ್ಲಿ ಪೊಲೀಸರು ನಾಲ್ಕು ಬಾಲ್ಯವಿವಾಹಗಳನ್ನು ತಡೆಯಲಾಗಿದೆ.
ಅರುಣಾಚಲ ಪ್ರದೇಶ, ಗೋವಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಲಡಾಖ್, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್‌ಗಳಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.
ಬಡತನ, ಶಿಕ್ಷಣದ ಕೊರತೆ, ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಬಾಲ್ಯ ವಿವಾಹಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಬೇಕು ಎಂದು ಅಭಿಪ್ರಾಯಗಳ ವ್ಯಕ್ತವಾಗಿವೆ.
ಬಾಲ್ಯ ವಿವಾಹದ ಮೇಲೆ ಗ್ರಾಮ ಪಂಚಾಯತಿಗಳು ನಿಗಾ ವಹಿಸಬೇಕು. ಬಾಲ್ಯ ವಿವಾಹ ನಡೆಸಲು ಮುಂದಾಗುವ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ನಿಲ್ಲಿಸಬೇಕು. ಬಾಲ್ಯ ವಿವಾಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.
2011ರ ಜನಗಣತಿಯ ಪ್ರಕಾರ ದೇಶದಲ್ಲಿ 1.53 ಕೋಟಿ ಬಾಲಕಿಯರು 18 ವರ್ಷ ತುಂಬುವ ಮುನ್ನವೇ ವಿವಾಹವಾಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ 40% ಮಹಿಳೆಯರು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾಗಿದ್ದಾರೆ. ಆದರೆ, 2006ರ ನಂತರ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಯಾಗಿದೆ.