ಕೇವಲ 25-30ರಿಂದ ಮನೆಗಳಿದ್ದು, 150 ಮಂದಿ ವಾಸಿಸುತ್ತಿರುವ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಯ ಜನರೇ ವಾಸ ಮಾಡುವ ಈ ಊರು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳೂ ಕೂಡ ಈ ಊರಿನ ಸಮಸ್ಯೆಗಳನ್ನು ಬಂದು ನೋಡುತ್ತಿಲ್ಲ, ಜನರ ಕಷ್ಟ ಕೇಳಿಸಿಕೊಳ್ಳುತ್ತಿಲ್ಲ. ಕೇವಲ ಎರಡೇ ಬೀದಿಗಳು ಇರುವ ಈ ಊರಿನಲ್ಲಿ ರಸ್ತೆಯ ಒಂದು ಬದಿ ಚರಂಡಿ ಇದೆ. ಅದೂ ಕೂಡ ಹೂಳು ತುಂಬಿದ್ದು, ರಸ್ತೆಯ ಮೇಲೆಲ್ಲ ನೀರು ಹರಿಯುವ ಪರಿಸ್ಥಿತಿ ಇದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದೇನಹಟ್ಟಿ ಗ್ರಾಮದ ನಿವಾಸಿಗಳು ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ಊರಿನಲ್ಲಿ ಸುಮಾರು 25ರಿಂದ 30 ಹಿಂದುಳಿದ ವರ್ಗದ ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳು ವಾಸ ಮಾಡುತ್ತಿದ್ದು, ಇದು ತಾಲೂಕಿನ ಅಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಪಂಚಾಯಿತಿ ಕೇಂದ್ರ ಈ ಊರಿನಿಂದ ಕೇವಲ ಒಂದುವರೆ ಕಿಲೋಮೀಟರ್ ದೂರ ಇದ್ದರೂ ಕೂಡ ಅಲ್ಲಿನ ಅಧಿಕಾರಿಗಳು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಮನಸ್ಸು ಮಾಡಿಲ್ಲ ಎಂಬುದು ಇಲ್ಲಿನ ಸಮಸ್ಯೆಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಊರಿನಲ್ಲಿ ಇರುವುದು ಕೇವಲ ಎರಡೇ ರಸ್ತೆಗಳಾದರೂ ಆ ರಸ್ತೆಗಳು ಕೂಡ ಸರಿಯಾದ ಡಾಂಬರು ಅಥವಾ ಸಿಮೆಂಟ್ ಇಲ್ಲದೆ ಅಲ್ಲಲ್ಲಿ ಅಗೆದು ಗುಂಡಿಗಳಾಗಿದ್ದು, ಚರಂಡಿಯ ನೀರು ರಸ್ತೆಯ ತುಂಬೆಲ್ಲ ಹರಿಯುತ್ತಿದೆ. ಮಕ್ಕಳು, ವೃದ್ದರು ಸೇರಿದಂತೆ ಸ್ಥಳೀಯರೆಲ್ಲರೂ ಕೊಳಚೆ ತುಳಿದು ಓಡಾಡುವಂತಾಗಿದೆ. ಕುಡಿಯುವ ನೀರು ಪೂರೈಕೆ ಯೋಜನೆ ಅಡಿ ನಲ್ಲಿಗಳಿಗೆ ಪೈಪ್ ಸಂಪರ್ಕ ಕಲ್ಪಿಸಲು ಇತ್ತೀಚೆಗೆ ರಸ್ತೆಯನ್ನು ಅಗೆದಿದ್ದು ಸಂಪೂರ್ಣ ಹಾಳಾಗಿ ಹೋಗಿದೆ. ಅಲ್ಲಿಯೇ ಚರಂಡಿಯ ನೀರು ಹರಿದು ರಸ್ತೆಯ ಮೇಲೆಲ್ಲಾ ನಿಂತಿದ್ದು ಹಾಗೂ ಚರಂಡಿಯ ಕೊಳಚೆ ನೀರು ಊರಿನಿಂದ ಹೊರಗೆ ಹೋಗಲು ಸರಿಯಾದ ಮಾರ್ಗವಿಲ್ಲದೆ ಚರಂಡಿ ಮೇಲೆ ಹರಿದು ಸೊಳ್ಳೆಗಳು ಹರಡುವಂತಿದೆ.

ಗ್ರಾಮದಲ್ಲಿ ಇತ್ತೀಚೆಗೆ ಸುಸಜ್ಜಿತವಾದ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದ್ದು, ಕೇಂದ್ರದ ಸುತ್ತಮುತ್ತಲೂ ಗಿಡಗಂಟೆಗಳು ಬೆಳೆದಿವೆ. ಅದರ ಹಿಂದೆ ಒಂದು ದೊಡ್ಡ ಗುಂಡಿ ಇದ್ದು, ಗ್ರಾಮದ ಮಳೆ ನೀರು ಇತರ ಚರಂಡಿ ನೀರು ಕೂಡ ತುಂಬಿಕೊಂಡಿದೆ. ಅದರಿಂದ ಹೊರಸೂಸುವ ದುರ್ವಾಸನೆಯಲ್ಲಿ ಮಕ್ಕಳು ಕಲಿಯುವಂತಾಗಿದೆ. ಜೊತೆಗೆ ಅಂಗನವಾಡಿ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳಲ್ಲಿ ಕ್ರಿಮಿಕೀಟ ಮತ್ತು ಹಾವು ಚೇಳುಗಳಂತಹ ವಿಷ ಜಂತುಗಳಿದ್ದು, ಮಕ್ಕಳ ಸುರಕ್ಷತೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಭಯಭೀತಿಯಿಂದ ಕಾಲ ಕಳೆಯುವಂತಾಗಿದೆ.
ಮತ್ತೊಂದು ಭಾಗದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಇದ್ದು, ಎರಡು ವರ್ಷಗಳ ಹಿಂದೆ ಕೇವಲ ನಾಲ್ಕು ಮಕ್ಕಳು ಇದ್ದರೆನ್ನುವ ಕಾರಣಕ್ಕೆ ಶಾಲೆಯನ್ನು ಮುಚ್ಚಿ ಶಿಕ್ಷಕರನ್ನು ಬೇರೆಡೆ ವರ್ಗ ಮಾಡಿದ್ದು, ಶಾಲೆಯ ಕಟ್ಟಡ ಕೂಡ ಉಪಯೋಗಕ್ಕೆ ಬರದ ಕೊಂಪೆಯಾಗಿದೆ.
ಈ ಬಗ್ಗೆ ಇಲ್ಲಿನ ಸ್ಥಳೀಯ ನಿವಾಸಿ ತಿಪ್ಪೇಸ್ವಾಮಿ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮದಲ್ಲಿ ಕೇವಲ ಎರಡೇ ಬೀದಿಗಳಿದ್ದರೂ ಕೂಡ ಈ ಗ್ರಾಮಕ್ಕೆ ಯಾವುದೇ ಮೂಲಸೌಕರ್ಯವನ್ನು ಮಾಡಿಕೊಟ್ಟಿಲ್ಲ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರೆ ಗ್ರಾಮಗಳಲ್ಲಿ ಬಲಾಢ್ಯರು ವಾಸಿಸುತ್ತಿದ್ದು, ಅವರ ಗ್ರಾಮಗಳಲ್ಲಿ ನೀರಿನ ಸಂಪರ್ಕ ಒಳಚರಂಡಿ ವ್ಯವಸ್ಥೆ ಮತ್ತು ರಸ್ತೆಗಳು ಸುಸಜ್ಜಿತವಾಗಿವೆ. ಕೇವಲ 100ರಿಂದ 150 ಮಂದಿ ವಾಸಿಸುವ ಈ ಗ್ರಾಮಕ್ಕೆ ಯಾವುದೇ ಮೂಲಸೌಕರ್ಯವನ್ನು ಕಲ್ಪಿಸಿಲ್ಲ” ಎಂದು ಆರೋಪಿಸಿದರು.
“ಹತ್ತು ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆಯನ್ನು ಹಾಕಿಸಿದ್ದರು. ಹಿಂದಿನ ವರ್ಷ ಕುಡಿಯುವ ನೀರಿನ ಯೋಜನೆಗೆ ರಸ್ತೆಯಲ್ಲಿ ಪೈಪ್ ಲೈನ್ ಹಾಕಲು ರಸ್ತೆಯನ್ನು ಅಗೆದಿದ್ದು, ಈವರೆಗೂ ಸರಿಪಡಿಸಿಲ್ಲ. ಹಾಗಾಗಿ ರಸ್ತೆ ಹಾಳಾಗಿದೆ. ಚರಂಡಿಗೆ ಹೂಳು ತುಂಬಿಕೊಂಡು 2ರಿಂದ 3 ವರ್ಷಗಳಾದರೂ ಅದನ್ನು ತೆಗೆಸುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯವರು ಮಾಡಿಲ್ಲ. ನೀರು ಮುಂದಕ್ಕೆ ಸರಾಗವಾಗಿ ಹರಿಯಲಾರದೆ ರಸ್ತೆ ಮೇಲೆಲ್ಲಾ ಹರಿಯುತ್ತದೆ. ಕುಡಿಯುವ ನೀರಿಗೆ ಸೇರುತ್ತಿದೆ. ಇದನ್ನು ತಕ್ಷಣ ಅಧಿಕಾರಿಗಳು ಗಮನಿಸಿ ಸರಿಪಡಿಸಬೇಕು. ಚರಂಡಿ ಹೂಳು ತೆಗೆಸಿ ಜನರ ಆರೋಗ್ಯ ಕಾಪಾಡಬೇಕಿದೆ” ಎಂದು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ದಕ್ಷಿಣ ಕನ್ನಡ | ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಡಿವೈಎಫ್ಐ ಒತ್ತಾಯ
“ಚಿತ್ರದುರ್ಗ ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ಕೇವಲ ಎರಡ್ಮೂರು ತಿಂಗಳಲ್ಲಿ 5ರಿಂದ 6 ಕಾಲರಾ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಪ್ರಕರಣಗಳು ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಆಗ್ರಹಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು