ಕಾನೂನು ಓದಿದ್ದಾಗಿ ಸಿದ್ದರಾಮಯ್ಯನವರು ಮಾತುಮಾತಿಗೂ ಹೇಳುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಎಂಬ ಕನಿಷ್ಠ ಜ್ಞಾನ ಮುಖ್ಯಮಂತ್ರಿಗಳಿಗೆ ಇರಬೇಕಿತ್ತು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು.
ಮದ್ದೂರಿನಲ್ಲಿ ಶಾಸಕ ಡಿ ಸಿ ತಮ್ಮಣ್ಣ ಮನೆಯ ಆವರಣದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, “ಯಡಿಯೂರಪ್ಪನವರ ಮೇಲೆ ಹಂಸರಾಜ್ ಭಾರದ್ವಾಜ್ ಅವರು ತನಿಖೆಗೆ ಅನುಮತಿ ನೀಡಿದಾಗ ಇದೇ ಸಿದ್ದರಾಮಯ್ಯನವರು ಯಾವ ಮಾತು ಹೇಳಿದ್ದರು? ಯಾವ ಪದಗಳನ್ನು ಬಳಸಿದ್ದರು? ಎಂಬುದನ್ನು ನೆನಪಿಸಿಕೊಳ್ಳಲಿ” ಎಂದರು.
ಕಿಕ್ ಬ್ಯಾಕ್ ಕೊಡಲು ಬ್ಲ್ಯಾಕ್ ಮೇಲ್
“ಸಿದ್ದರಾಮಯ್ಯನವರನ್ನು ಇಳಿಸುತ್ತೇವೆ; ಇಲ್ಲವಾದರೆ ಕಿಕ್‌ಬ್ಯಾಕ್ ಕೊಡಿ ಎಂಬ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಕಾಂಗ್ರೆಸ್ಸಿನ ಹೈಕಮಾಂಡ್ ಇಳಿದಿರುವುದು ರಾಜ್ಯದ ದುರದೃಷ್ಟ. ಕರ್ನಾಟಕವು ಕಾಂಗ್ರೆಸ್ಸಿನ ಎಟಿಎಂ ಆಗಲಿದೆ ಎಂಬ ಈ ಹಿಂದಿನಿಂದಲೇ ಆಡುತ್ತಿದ್ದ ನಮ್ಮ ಮಾತು ನಿಜವಾಗಿದೆ” ಎಂದು ಆರೋಪಿಸಿದರು.
“ರಾಜ್ಯ ಖಜಾನೆಯಿಂದ ರಾಜ್ಯ ಸರ್ಕಾರವು ಹಣ ಲೂಟಿ ಮಾಡಿ ಚುನಾವಣೆಗೆ ಬಳಸಿದ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಕಾಂಗ್ರೆಸ್ ಆಡಳಿತದಲ್ಲಿ ನಡೆದ ಇದು ಇಡೀ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ. ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಸಚಿವರು ಎಂದು ಚಂದ್ರಶೇಖರ್ ಅವರು ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರೂ ಕೂಡ ಸಿಐಡಿ ಚಾರ್ಜ್ ಶೀಟ್‌ನಲ್ಲಿ ಅವರ ಹೆಸರನ್ನು ಕೈಬಿಡುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರವನ್ನು ಯಾವ ರೀತಿ ರಕ್ಷಿಸಲು ಮುಂದಾಗುತ್ತದೆ ಎಂಬುದು ಗೊತ್ತಾಗುತ್ತದೆ” ಎಂದು ಟೀಕಿಸಿದರು.
ಹೆಗ್ಗಣ ಬಿದ್ದಿದೆ; ಅದನ್ನು ನೋಡಿಕೊಳ್ಳಿ
“ಸಿದ್ದರಾಮಯ್ಯ ಅವರು ನಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಎನ್ನುತ್ತಾರೆ. ಸಿದ್ದರಾಮಯ್ಯನವರಿಗೆ ತಟ್ಟೆಯ ಸೈಜ್ ಎಷ್ಟು, ಕತ್ತೆಯ ಸೈಜ್ ಎಷ್ಟೆಂದು ಗೊತ್ತಾಗುವುದಿಲ್ಲ. ಯಾರ ತಟ್ಟೆಯಲ್ಲೂ ಕತ್ತೆ ಬೀಳಲು ಸಾಧ್ಯವಿಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ನಾವು ಹೇಳುತ್ತೇವೆ. ಅದನ್ನು ನೀವು ನೋಡಿಕೊಳ್ಳಿ” ಎಂದು ಲೇವಡಿ ಮಾಡಿದರು.