ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸುವ ಕುರಿತು ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ರಾಜನಾಥಸಿಂಗ್ ಅವರ ಬಳಿ ಮೂರು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಮೊದಲನೆಯದ್ದು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸುವ ಕುರಿತು. ಎರಡನೆಯದ್ದು ಉತ್ತರ ಪ್ರದೇಶ ಮತ್ತು ತಮಿಳುನಾಡಿ ರೀತಿ ಡಿಫೆನ್ಸ್ ಕಾರಿಡಾಡರ್ ನಿರ್ಮಾಣ ಹಾಗೂ ಮೂರನೆಯದ್ದು ಡಿಫೆನ್ಸ್ ಲ್ಯಾಂಡ್ ನೀಡಲು ಮನವಿ ಮಾಡಿದ್ದೇನೆ” ಎಂದರು.
“ಟನಲ್ ನಿರ್ಮಾಣ, ಲಿಂಕ್ ರೋಡ್ ಅಭಿವೃದ್ಧಿ ಹಾಗೂ ಫ್ಲೈ ಓವರ್ ನಿರ್ಮಾಣಕ್ಕೆ ಡಿಫೆನ್ಸ್ ಲ್ಯಾಂಡ್ ಬೇಕಾಗುತ್ತದೆ. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಕುರಿತು ಸಮಾಲೋಚನೆ ನಡೆಸಿದ್ದೇನೆ. ವೈಮಾನಿಕ ಪ್ರದರ್ಶನಕ್ಕೆ ಒಪ್ಪಿಗೆ ನೀಡಿದ್ದಾರೆ. ಉಳಿದ ಎರಡು ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ತಿಳಿಸಿದರು.
“ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಕೇಳಲಾಗಿದೆ. ಗುರುವಾರ ಅವಕಾಶ ಕೊಟ್ಟರೆ ಭೇಟಿಯಾಗುತ್ತೇವೆ. ನಾನು, ಡಿ ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೆಟಿಯಾಗುತ್ತೇವೆ ಎಂದು ಸುದ್ದಿಯಾಗಿದೆ. ರಾಹುಲ್ ಗಾಂಧಿ ಅವರು ಅವಕಾಶ ಕೊಟ್ಟರೆ ಸಿಗುತ್ತೇವೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ನಾಳೆ ದೆಹಲಿಗೆ ಸುರ್ಜೇವಾಲಾ ಆಗಮಿಸಲಿದ್ದಾರೆ. ಭೇಟಿಯಾಗಿ ಪಕ್ಷದ ವಿಚಾರ ಚರ್ಚಿಸುತ್ತೇವೆ” ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ದೆಹಲಿ ಪ್ರತಿನಿಧಿ ಜಯಚಂದ್ರ ಹಾಜರಿದ್ದರು.