- ರಾಜ್ಯ ಬಿಜೆಪಿಯವರು ಏನು ಅಧ್ಯಯನ ಮಾಡುತ್ತಾರೆ?
- ‘ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನೇ ಬಯ್ಯಲಿ’
ಕೇಂದ್ರ ಸರ್ಕಾರ ರಾಜ್ಯದ ಬರ ಅಧ್ಯಯನ ಮಾಡಿದೆ, ರಾಜ್ಯ ಬಿಜೆಪಿಯವರು ಏನು ಅಧ್ಯಯನ ಮಾಡುತ್ತಾರೆ? ನಾವು ಕೂಡ ಬರ ಅಧ್ಯಯನ ಮಾಡಿದ್ದೀವಲ್ಲ. ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕೇಂದ್ರ ತಂಡ ಅಧ್ಯಯನ ಮಾಡಿ ಹೋಗಿದೆ, ಆದರೆ ವರದಿ ನೀಡಿಲ್ಲ. ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಅನುದಾನ ಕೊಡಿಸಲಿ” ಎಂದು ಒತ್ತಾಯಿಸಿದರು.
“ಬರ ಅಧ್ಯಯನ ಮಾಡಬಾರದು ಅಂತಾ ನಾವು ಹೇಳಲು ಹೋಗಲ್ಲ. ಕೇಂದ್ರ ಸರ್ಕಾರದ ಬಳಿ 17,900 ಕೋಟಿ ರೂ. ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ, ಅದನ್ನು ಮೊದಲು ಕೊಡಿಸಲಿ. ಬಿಜೆಪಿಯ 25 ಸಂಸದರಿದ್ದಾರಲ್ಲ ಚರ್ಚಿಸಿ ಅನುದಾನ ಕೊಡಿಸಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಬರ ಪರಿಹಾರ | ರೈತರಿಗೆ ನೆರವು ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಚಲುವರಾಯಸ್ವಾಮಿ
“ನಮ್ಮ ಸಚಿವರ ಭೇಟಿಗೆ ಕೇಂದ್ರ ಸರ್ಕಾರ ಸಮಯವನ್ನೇ ಕೊಟ್ಟಿಲ್ಲ” ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.
ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂಬ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಬರ ಅಧ್ಯಯನ ನಡೆಸಿದ್ದು ಕೇಂದ್ರ ಸರ್ಕಾರದ ತಂಡ. ವೈಜ್ಞಾನಿಕವಾಗಿ ಮಾಡಿಲ್ಲವೆಂದು ಕೇಂದ್ರ ಸರ್ಕಾರವನ್ನೇ ಬಯ್ಯಲಿ” ಎಂದು ಹೇಳಿದರು.