“ಯಾವುದೋ ಒಬ್ಬ ವ್ಯಕ್ತಿ ಹೊಸ ತಲೆಮಾರಿನವರನ್ನು ಜಿರಳೆಗಳು ಎಂದು ಹೇಳಿ, ಅದರ ಮೂಲಕ ಜಿರಳೆಗಳ ಪಾರ್ಟಿಯೇ ಹುಟ್ಟುವಂತೆ ಮಾಡಿದರು. ಅದೇ ಜಿರಳೆಗಳ ಪಾರ್ಟಿ ಇಂದು ಧರ್ಮೇಂದ್ರ ಪ್ರಧಾನ್ ಅವರನ್ನು ಮಾತ್ರವಲ್ಲ ಎಲ್ಲ ರೀತಿಯ ಸರ್ವಾಧಿಕಾರವನ್ನು ಕೆಳಗಿಳಿಸುವ ಶಕ್ತಿಯನ್ನು ಹೊಂದಿದೆ ಅನ್ನುವುದನ್ನು ನಾವು ಮರೆಯಬಾರದು” ಎಂದು ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ, ನಟ ಬಿ ಸುರೇಶ್ ಹೇಳಿದರು.
ನೀಟ್ ಪರೀಕ್ಷೆ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ಸಂಭ್ರಮಾಚರಣೆ ನಡೆಯಿತು. ಜತೆಗೆ ದೆಹಲಿಯಲ್ಲಿ ವಿದ್ಯಾರ್ಥಿ-ಯುವಜನರ ಮೇಲೆ ಅಮಾನುಷ ದೌರ್ಜನ್ಯ ಮಾಡಿರುವ ಸರ್ಕಾರದ ಕ್ರೌರ್ಯವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ), ಕೆಐಟಿಯು, ಸಿಐಟಿಯು, ಡಿಎಚ್‌ಎಸ್, ಎಐಎಲ್‌ಯು, ಮೊದಲಾದ ಸಂಘಟನೆಗಳು, ವಿದ್ಯಾರ್ಥಿ ಯುವಜನ ಪೋಷಕರು ಸೇರಿ ಪ್ರತಿರೋಧ ಸಮಾವೇಶವನ್ನೂ ನಡೆಸಿದರು.
ಇದನ್ನೂ ಓದಿ: ಸಂಪೂರ್ಣವಾಗಿ ಗೆದ್ದ ಸಿಜೆಪಿ; ಕಾಕ್ರೋಚ್‌ಗಳ ಎಲ್ಲ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಒಪ್ಪಿಗೆ
ಆರಂಭದಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು. ಈ ಸಮಾವೇಶದಲ್ಲಿ ಎನ್‌ಟಿಎ ರದ್ದು ಪಡಿಸಲು ಒತ್ತಾಯಿಸಿ ಎಸ್‌ಎಫ್‌ಐ ವತಿಯಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಬಿ ಸುರೇಶ್, ಮಹಿಳಾಪರ ಹೋರಾಟಗಾರ್ತಿ ಕೆ ಎಸ್ ವಿಮಲಾ ಸೇರಿದಂತೆ ಹಲವರು ಚಾಲನೆ ನೀಡಿದರು.

ಅದಾದ ಬಳಿಕ ಮಾತನಾಡಿದ ಬಿ ಸುರೇಶ್, “ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿರುವುದು ಒಂದು ಸಣ್ಣ ಗೆಲುವು. ಕಳೆದ ಕೆಲವು ವರ್ಷಗಳಿಂದ ನಿರಾಶಾದಾಯಕವಾಗಿದ್ದ ಹೋರಾಟದ ಮನಸ್ಸುಗಳಿಗೆ ಇದು ಒಂದು ಹೊಸ ಚೈತನ್ಯವನ್ನು ಖಂಡಿತವಾಗಿಯೂ ನೀಡುತ್ತದೆ. ಮಾತನಾಡಿದರೂ ಶಿಕ್ಷೆಯಾಗುತ್ತದೋ ಏನೋ ಎಂದು ಹೆದರಿಕೊಳ್ಳುತ್ತಿದ್ದ ಜನರಿಗೆ ಹೊಸ ತಲೆಮಾರಿನ ಜೆನ್ ಝೀ ಹುಡುಗರು ದೊಡ್ಡ ತಿಳುವಳಿಕೆಯನ್ನು ಕೊಟ್ಟಿದ್ದಾರೆ. ಅದು ನಮಗೆ ಈಗಾಗಲೇ ಗೊತ್ತಿರುವಂತದ್ದು. ಹೋರಾಟದಿಂದ ಮಾತ್ರ ಗೆಲುವು ಸಾಧ್ಯ” ಎಂದರು.
ಇವೆಲ್ಲವನ್ನೂ ಮೀರಿ ಕಳೆದ ಕೆಲವು ವರ್ಷಗಳಿಂದ ಈ ಕೆಂಪು ಭಾವುಟ ಎಂಬುದು ನಿಶಬ್ದವಾದಂತೆ ಕಾಣಿಸುತ್ತಿತ್ತು. ದಿಢೀರನ್ನೇ ಹೊಸ ಶಕ್ತಿಯ ಜತೆಗೆ ಹೋರಾಟದ ಶಕ್ತಿಗಳು ಒಂದಾಗುತ್ತಿರುವುದು ನನಗೆ ವೈಯಕ್ತಿಕವಾಗಿ ಸಂತೋಷ ಮೂಡಿಸಿದೆ. ಹೀಗೆ ಹೋರಾಟ ಮಾಡುವ ಮನಸ್ಸುಗಳು ಈ ದೇಶ ಕಳೆದ 12 ವರ್ಷಗಳಲ್ಲಿ ಏನೆಲ್ಲ ಕಳೆದುಕೊಂಡಿದೆಯೋ ಅದನ್ನು ಮತ್ತೆ ಮರಳಿ ದೊರಕುವ ಹಾಗೆ ಮಾಡಲಿ ಎಂದು ಹಾರೈಸುತ್ತೇನೆ. ಜೆನ್‌ಝೀ ಗಳ ಈ ಹೋರಾಟ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಬದಲಾಗುವವರೆಗೆ ನಿಲ್ಲದೆ ಮುಂದುವರೆಯಲಿ” ಎಂದು ತಿಳಿಸಿದರು.

ಎಸ್‌ಎಫ್‌ಐನ ಉಪಾಧ್ಯಕ್ಷರು ಗಣೇಶ್ ರಾಥೋಡ್ ಮಾತನಾಡಿ, “ಕೋಚಿಂಗ್ ಮಾಫಿಯಾಗಳ ರಕ್ಷಣೆಗಾಗಿ ನೀಟ್ ಪರೀಕ್ಷೆಯನ್ನು ತರಲಾಗಿದೆ. ಎನ್‌ಟಿಎ ನಡೆಸುತ್ತಿರುವುದೆಲ್ಲವೂ ಹಗರಣ. ಎನ್‌ಟಿಎ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಕೋಚಿಂಗ್ ಸೆಂಟರ್‌ಗಳ ಮಾಫಿಯಾಗಳ ಬಗ್ಗೆ ಯಾವುದೇ ಶಾಸಕರು, ಸಂಸದರು ಮಾತನಾಡುವುದಿಲ್ಲ ಯಾಕೆ? ಯಾಕೆಂದರೆ ಕೋಚಿಂಗ್ ಸೆಂಟರ್‌ಗಳು ಅವರೇ ನಡೆಸುವುದು. ಅಷ್ಟಕ್ಕೂ ಇದು ಬರೀ ಒಂದು ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲ, ಇದು ಇಡೀ ಶಿಕ್ಷಣ ವ್ಯವಸ್ಥೆಯ ಬದಲಾವಣೆಗಾಗಿ ನಡೆಯುತ್ತಿರುವ ಹೋರಾಟ” ಎಂದು ಹೇಳಿದರು.
ಈ ಸಂದರ್ಭದಲ್ಲೇ ಮಾತನಾಡಿದ ಡಿವೈಎಫ್‌ಐ ಮುಖಂಡ ದಿಲೀಪ್, “ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಒಂದು ಹಂತದ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಆದರೆ ಹೋರಾಟದ ಅಂತ್ಯವಲ್ಲ. ಯುವಜನ ಸಮುದಾಯ ಮುನ್ನಡೆಸಿದ ಹೋರಾಟವಿದು. ಯುವಜನರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಾರೆ ಎಂದು ದೂಷಿಸಲಾಗುತ್ತಿತ್ತು. ಇಂದು ಅದೇ ಯುವಜನರು ಭಂಡ ಸರ್ಕಾರವನ್ನು ಅಲುಗಾಡಿಸಿದರು. ಮೋದಿ ಸರ್ಕಾರಕ್ಕೆ ಮತ ಹಾಕಿ ವಾಟ್ಸಾಪ್ ಜನರೇಷನ್ ಮಾಡಿದ ತಪ್ಪನ್ನು, ಈಗ ಇನ್‌ಸ್ಟಾ ಜನರೇಷನ್ ಸರಿಪಡಿಸುತ್ತಿದೆ. ಆ ಗ್ಯಾರಂಟಿ ನಮಗಿದೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಮ್ಮ ಹೋರಾಟ ನಿಲ್ಲದು” ಎಂದರು.
ಹೋರಾಟದಲ್ಲಿ ಕವಯಿತ್ರಿ, ಪ್ರಾಧ್ಯಾಪಕಿ ಡಾ. ಸುಕನ್ಯಾ ಮಾರುತಿ ಕವನವಾಚನ ಮಾಡಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಶ್ರೀಪಾದ್ ಭಟ್, ವಕೀಲರು ವೆಂಕಟೇಶ್ ಗೌಡ, ಕಾರ್ಮಿಕ ಮುಖಂಡರಾದ ಬಿ ಎನ್ ಮಂಜುನಾಥ್, ವರಲಕ್ಷ್ಮಿ, ಗೌರಮ್ಮ, ಕೆಐಟಿಯು ನಾಯಕ ಸುರಾಜ್ ಮೊದಲಾದವರು ಭಾಗವಹಿಸಿದ್ದರು.





