ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರೂ, ಉಳಿದ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಘೋಷಿಸಿತ್ತು. ಇದೀಗ, ವಿದ್ಯಾರ್ಥಿ ಯುವಜನರ ಉಳಿದ ಬೇಡಿಕೆಗಳ ಈಡೇರಿಕೆಗೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಎಲ್ಲ ಬೇಡಿಕೆಗಳನ್ನೂ ಸರ್ಕಾರ ಒಪ್ಪಿಕೊಂಡಿದ್ದು, ಪ್ರತಿಭಟನೆ ಪರಿಪೂರ್ಣವಾಗಿ ಯಶಸ್ಸು ಕಂಡಿದೆ. ಭಾನುವಾರದ ಮೇಣದ ಬತ್ತಿ ಮೆರವಣಿಗೆಯೊಂದಿಗೆ ಪ್ರತಿಭಟನೆ ಸಮಾರೋಪಗೊಳ್ಳಲಿದೆ.
ಶನಿವಾರ, ಸರ್ಕಾರವನ್ನು ಪ್ರತಿನಿಧಿಸಿದ್ದ ಕೇಂದ್ರ ಸಚಿವ ಜೆ.ಪಿ ನಡ್ಡಾ ಜೊತೆಗೆ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಮಾತುಕತೆ ನಡೆಸಿದ್ದಾರೆ. ಸುದೀರ್ಘ ಮಾತುಕತೆಯ ಬಳಿಕ, ಸರ್ಕಾರ ಮತ್ತು ಸಿಜೆಪಿ ನಾಯಕರು ಸಂವಿಧಾನ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌರವ್ ದಾಸ್, “ಪ್ರತಿಭಟನಾಕಾರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹೋರಾಟ ಗೆಲುವು ಸಾಧಿಸಿದೆ” ಎಂದು ಘೋಷಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಜೆ.ಪಿ ನಡ್ಡಾ, “ದೆಹಲಿ ಸೇರಿದಂತೆ ದೇಶಾದ್ಯಂತ ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್‌ಗಳ ಮೇಲೆ ಯಾವುದೇ ಕ್ರಮವಿಲ್ಲ. ಹೊಸ ಎಫ್‌ಐಆರ್‌ಗಳನ್ನು ದಾಖಲಿಸುವುದಿಲ್ಲ. ಪ್ರತಿಭಟನಾ ಸಂಘಟಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, “ನೀಟ್ ಅಕ್ರಮದಿಂದ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರದ ಮೊತ್ತವನ್ನು ಕೇಂದ್ರವು ಶೀಘ್ರದಲ್ಲೇ ನಿಗದಿ ಮಾಡಲಿದೆ. ಪರೀಕ್ಷಾ ಸುಧಾರಣೆಗಳ ಕುರಿತು ಐದು ಅಂಶಗಳ ಚಾರ್ಟರ್‌ಅನ್ನು ಸಿಜೆಪಿ ಜೊತೆ ಚರ್ಚಿಸಲಾಗುತ್ತದೆ. ಈ ಎಲ್ಲ ಭರವಸೆಗಳ ಕುರಿತು ಲಿಖಿತ ದಾಖಲೆಯನ್ನು ಮಂಗಳವಾರ ಸರ್ಕಾರ ಹಸ್ತಾಂತರಿಸಲಿದೆ” ಎಂದು ಭರವಸೆ ನೀಡಿದ್ದಾರೆ.
ನಾಳೆ ಮೇಣದಬತ್ತಿ ಮೆರವಣಿಗೆ
ದೆಹಲಿಯಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ದೌರ್ಜನ್ಯಗಳಲ್ಲಿ ನೋವು ಅನುಭವಿಸಿದ ವಿದ್ಯಾರ್ಥಿ-ಯುವಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಭಾನುವಾರ ಮೇಣದಬತ್ತಿ ಮೆರವಣಿಗೆ ನಡೆಸಲು ಸಿಜೆಪಿ ಕರೆ ನೀಡಿದೆ.




