ಸ್ವಯಂಘೋಷಿತ ದೇವಮಾನವ, ಅತ್ಯಾಚಾರ ಆರೋಪಿ, ಕೈಲಾಸ ರಾಷ್ಟ್ರ ಕಟ್ಟಿಕೊಂಡು ಅಲ್ಲಿಯೇ ಇರುವ ನಿತ್ಯಾನಂದ ಸ್ವಾಮಿ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ನಿತ್ಯಾನಂದ ಸಾವು ಕುರಿತು ‘ಕೈಲಾಸ’ವು ಸ್ಪಷ್ಟನೆ ನೀಡಿದ್ದು, ಆತ ಸತ್ತಿಲ್ಲವೆಂದು ಮಾಹಿತಿ ನೀಡಿದೆ.
ನಿತ್ಯಾನಂದ ಸ್ವಾಮಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಆತ, ಏಪ್ರಿಲ್ 1ರಂದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆತನ ಸಂಬಂಧಿಯಾದ ಸುಂದರೇಶ್ವರನ್ ಕೂಡ ವಿಡಿಯೋ ಬಿಡುಗಡೆ ಮಾಡಿ, ‘ನಿತ್ಯಾನಂದ ಸ್ವಾಮಿ ಹಿಂದು ಧರ್ಮದ ರಕ್ಷಣೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ’ ಎಂದು ಹೇಳಿದ್ದರು.
ಇದೀಗ, ಕೈಲಾಸ ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡಿದೆ. “ನಿತ್ಯಾನಂದ ಸ್ವಾಮಿ ಸತ್ತಿಲ್ಲ. ಅವರು ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಭಕ್ತರ ಮುಂದೆ ಬರಲಿದ್ದಾರೆ” ಎಂದು ಹೇಳಿದೆ.
2022ರಲ್ಲಿಯೂ ನಿತ್ಯಾನಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹರಿದಾಡಿದ್ದವು. ಆತ, ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಈ ವದಂತಿಗಳನ್ನು ತಳ್ಳಿಹಾಕಿದ್ದ ನಿತ್ಯಾನಂದ, ‘ತಾವು ಸತ್ತಿಲ್ಲ. ಸಮಾಧಿ ಸ್ಥಿತಿಯಲ್ಲಿದ್ದೆ ಆಳವಾದ ಧ್ಯಾನ ಮಾಡುತ್ತಿದ್ದೆನೆಷ್ಟೇ’ ಎಂದು ಹೇಳಿಕೊಂಡಿದ್ದರು.
ನಿತ್ಯಾನಂದ ಸ್ವಾಮಿ ವಿರುದ್ಧ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನಿತ್ಯಾನಂದನ ವಿರುದ್ಧ ಅತ್ಯಾಚಾರ, ಅಪಹರಣ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳೂ ಇವೆ. ವಿವಿಧ ಪ್ರಕರಣಗಳ ಆರೋಪಿಯಾಗಿರುವ ನಿತ್ಯಾನಂದ 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದರು. 2020ರಲ್ಲಿ ಹಿಂದು ಸಾರ್ವಭೌಮ ರಾಷ್ಟ್ರ ‘ಕೈಲಾಸ’ ಸ್ಥಾಪನೆ ಮಾಡಿದ್ದೇನೆ. ಭಾರತೀಯರಿಗೆ ಉಚಿತವಾಗಿ ವೀಸಾ ನೀಡುತ್ತೇನೆ ಎಂದು ಘೋಷಿಸಿಕೊಂಡಿದ್ದರು.