ಕಾಂಗ್ರೆಸ್ ಪಕ್ಷವು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಈ ನೀತಿ ಅವರನ್ನೇ ನುಂಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್ಸಿನವರು ತಮ್ಮ ವಕ್ರಬುದ್ಧಿಯನ್ನು ಪ್ರದರ್ಶನ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಪ್ರಿಯಾಂಕ ಖರ್ಗೆ, ದಿನೇಶ್ ಗುಂಡುರಾವ್, ಸಂತೋಷ್ ಲಾಡ್ ರವರು ಇನ್ನೂ ಅನೇಕರು ನಮಗೆ ಯುದ್ಧ ಬೇಕಾಗಿಲ್ಲ, ನಾವು ಯುದ್ಧದ ಪರ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದರು” ಎಂದರು.
“ಈಗ ಎಐಸಿಸಿ ಒಂದು ತೀರ್ಮಾನಕ್ಕೆ ಬಂದು, ನಾವು ಕೇಂದ್ರ ಸರ್ಕಾರದ ಜೊತೆ ನಿಲ್ಲದಿದ್ದರೆ ನಮಗೆ ಈ ದೇಶದಲ್ಲಿ ಉಳಿಗಾಲವಿಲ್ಲ ಜನ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಗಮನಿಸಿತು. ಬಳಿಕ ಮೋದಿ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದಾಗ ಇಲ್ಲಿನ ನಾಯಕರು ಬಾಯಿ ಮುಚ್ಚಿಕೊಂಡರು” ಎಂದು ಟೀಕಿಸಿದರು.
“ಭಾರತ ಸರ್ಕಾರ ಭಯೋತ್ಪಾದಕರು ಅಡಗಿ ಕುಳಿತಿರುವ 9 ಸ್ಥಳಗಳನ್ನು ಗುರುತಿಸಿ 100 ಭಯೋತ್ಪಾದಕರನ್ನು ಕೊಂದಿರುವ ವಿಷಯ ಹಳೆಯದಲ್ಲ. ನಾವು ಪಾಕಿಸ್ತಾನದ ವಿರುದ್ಧವಾಗಿ ಯುದ್ಧ ಸಾರಲಿಲ್ಲ ಹಾಗೂ ಮಾಡಲಿಲ್ಲ. ಆಗಿದ್ದು ಏನು ಎಂದರೆ ಕಳೆದ ತಿಂಗಳು 22ನೇ ತಾರೀಖು ನಮ್ಮ ನೆಲಕ್ಕೆ ಭಯೋತ್ಪಾದಕರು ಬಂದು 26 ಜನರನ್ನು ಧರ್ಮ ಕೇಳಿ ಅವರ ತಲೆಗೆ ಹೊಡೆದು ಹತ್ಯೆ ಮಾಡಿರುವುದು ದೇಶಕ್ಕೆ ತಿಳಿದಿರುವ ವಿಚಾರ. ಆ ಕಾರಣಕ್ಕಾಗಿ ನಾವು ಭಯೋತ್ಪಾದಕಕರನ್ನು ಗುರಿ ಮಾಡಿದ್ದು, ನಮ್ಮ ಸೈನಿಕರು 100 ಜನರನ್ನು ಬಲಿತೆಗೆದುಕೊಂಡಿದ್ದಾರೆ” ಎಂದು ವಿವರಿಸಿದರು.
“ಪುಲ್ವಾಮ ದಾಳಿಯ ವಿಚಾರದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದ ತರುವಾಯ ಕಾಂಗ್ರೆಸ್ಸಿನ ಒಬ್ಬ ವಕ್ತಾರ ಗಿಡಕ್ಕೆ ಗುಂಡು ಹೊಡೆದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಹೇಳಿದ್ದರು. ನಂತರ ಸಾಕ್ಷಿ ಕೇಳಿದ್ದರು. ಪ್ರಸ್ತುತ ಪಾಕಿಸ್ತಾನದ ಮಂತ್ರಿಗಳು ಪುಲ್ವಾಮ ದಾಳಿಗೆ ನಾವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಅವತ್ತು ಸಾಕ್ಷಿ ಕೇಳಿದ ನಾಯಕರು ಈಗ ನಿಮ್ಮ ಮುಖ ಮತ್ತು ತಲೆಯನ್ನು ಎಲ್ಲಿ ಇಟ್ಟುಕೊಳ್ಳುತ್ತೀರಿ” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಪಕ್ಷವು ಅವರ ನಾಯಕರು ಏನೇ ಮಾತನಾಡಿದರೂ ಖಂಡಿಸುವುದಿಲ್ಲ. ಅಂದರೆ ಕಾಂಗ್ರೆಸ್ ಇನ್ನೂ ವಕ್ರಬುದ್ಧಿಯನ್ನು ಬಿಟ್ಟಿಲ್ಲ. ಪಾಕಿಸ್ತಾನ ಯಾವ ಪ್ರಶ್ನೆಗಳನ್ನು ಕೇಳಬೇಕಿತ್ತೋ ಆ ಪಾಕಿಸ್ತಾನದ ಪ್ರಶ್ನೆಗಳನ್ನು ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಕೊತ್ತೂರು ಮಂಜುನಾಥ್ ಅವರು ಕೇಳುತ್ತಿದ್ದಾರೆ ಎಂದರೆ ಪಾಕಿಸ್ತಾನದ ಕೆಲವು ನಾಯಕರು ಜೊತೆ ಇವರು ಸಂಪರ್ಕದಲ್ಲಿ ಇರಬಹುದು ಎಂಬ ಸಂಶಯ ಉದ್ಭವಿಸುತ್ತಿದೆ” ಎಂದು ತಿಳಿಸಿದರು.