- ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಗಲಿಬಿಲಿ
- ಕಾರ್ಯಕ್ರಮ ನಡೆಯುವ ವೇಳೆ ಏಕಕಾಲದಲ್ಲಿ ಎಲ್ಲರ ಮೊಬೈಲ್‌ಗೂ ಬಂತು ಮೆಸೇಜ್
ಪ್ರಾಕೃತಿಕ ದುರಂತದ ಸಮಯದಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿ ತುರ್ತು ಮಾಹಿತಿ ನೀಡುವ ಸಲುವಾಗಿ ದೂರ ಸಂಪರ್ಕ ಇಲಾಖೆಯ ಜೊತೆಗೂಡಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕರ್ನಾಟಕದಲ್ಲಿ ನಡೆಸುತ್ತಿರುವ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಮೆಸೇಜ್ ಪರೀಕ್ಷೆ ಕಾಂಗ್ರೆಸ್ ನಾಯಕರನ್ನು ಕ್ಷಣಕಾಲ ಗಲಿಬಿಲಿಗೊಳಿಸಿತು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಏಕಕಾಲದಲ್ಲಿ ಪ್ರಕೃತಿ ವಿಕೋಪ ಅಲರ್ಟ್ ಟ್ರಯಲ್ ಮೆಸೇಜ್ ಬಂತು. ಏಕಕಾಲದಲ್ಲಿ ಎಲ್ಲರಿಗೂ ಮೆಸೇಜ್ ಬಂದ ಹಿನ್ನೆಲೆಯಲ್ಲಿ ವೇದಿಕೆಯಲ್ಲಿದ್ದ ನಾಯಕರು ಕೊಂಚ ಗಲಿಬಿಲಿಗೆ ಒಳಗಾದರು.
ಆಗ ಮಾಧ್ಯಮಪ್ರತಿನಿಧಿಗಳು, ಈ ಶಬ್ದ ವಿಕೋಪ ಮಾಹಿತಿ ಅಲಾರಾಮ್ ಎಂದು ತಿಳಿಸಿದ್ದು ಕಾಂಗ್ರೆಸ್ ನಾಯಕರು ನಿಟ್ಟುಸಿರುಬಿಟ್ಟರು. ಈ ವೇಳೆ ಭಾಷಣ ಮಾಡುತ್ತಿದ್ದ ಡಿಕೆ ಶಿವಕುಮಾರ್ ಅವರು, ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗೆಚಟಾಕಿ ಹಾರಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಇಂದು ಪ್ರಾಕೃತಿಕ ದುರಂತದ ಮಾಹಿತಿ ನೀಡುವ ‘ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್’ ಪರೀಕ್ಷೆ
ಈ ವೇಳೆ ವೇದಿಕೆಯಲ್ಲಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಇತರ ಕೆಲವರು ಅಲರ್ಟ್ ಮೆಸೇಜ್ ಬಗ್ಗೆ ಮಾಹಿತಿ ನೀಡಿದರು. ನೈಸರ್ಗಿಕ ವಿಕೋಪ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಅಲರ್ಟ್ ಆಗಿರಲು ದೂರಸಂಪರ್ಕ ಇಲಾಖೆ ಮೂಲಕ ಎಲ್ಲರ ಮೊಬೈಲ್ಗಳಿಗೆ ಈ ತುರ್ತು ಸಂದೇಶಗಳನ್ನು ಕಳುಹಿಸಲಾಗಿದೆ.
ಏನಿದು ಅಲರ್ಟ್ ಮೆಸೇಜ್?
ಪ್ರಾಕೃತಿಕ ವಿಪತ್ತುಗಳ ಸಮಯದಲ್ಲಿ ತುರ್ತು ಸಂವಹನವನ್ನು ಹೆಚ್ಚಿಸಲು ಮತ್ತು ನಮ್ಮ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಏಕಕಾಲದಲ್ಲಿ ಅಲರ್ಟ್ ಮೆಸೇಜ್ ಬರುತ್ತಿದೆ.