ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರನ್ನು ಆ.28ರ ವರೆಗೆ ಜಾರಿ ನಿರ್ದೇಶನಾಲಯದ(ಇ.ಡಿ) ವಶಕ್ಕೆ ನೀಡಿ ಬೆಂಗಳೂರಿನ 35ನೇ ಸಿಸಿಎಚ್‍ನ ನ್ಯಾಯಾಧೀಶ ಸೈಯದ್ ಬಿ. ರೆಹಮಾನ್ ಇಂದು ಆದೇಶ ಹೊರಡಿಸಿದ್ದಾರೆ.
ಬೆಟ್ಟಿಂಗ್ ಪ್ರಕರಣದಲ್ಲಿ ತೊಡಗಿರುವ ಆರೋಪದ ಮೇಲೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರನ್ನು ಈಡಿ. ಅಧಿಕಾರಿಗಳು ಆ.22ರಂದು ಸಿಕ್ಕಿಂನ ಗ್ಯಾಂಗ್ಟಕ್‍ನಲ್ಲಿ ಬಂಧಿಸಿ, ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ, ಬೆಂಗಳೂರಿನ 35ನೇ ಸಿಸಿಎಚ್ ಕೋರ್ಟ್‍ನಲ್ಲಿ ವಿಚಾರಣೆಗೆ ಒಳಪಡಿಸಿದ್ದರು.
ಕೆ ಸಿ ವೀರೇಂದ್ರ ಪಪ್ಪಿ ಅವರ ಬಳಿ 25 ಕೋಟಿ ರೂಪಾಯಿಗಳಿಗೆ ಅಧಿಕ ಮೊತ್ತದ ನಗದು, ವಿದೇಶಿ ಕರೆನ್ಸಿ, ಕೆ.ಜಿ.ಗಟ್ಟಲೇ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ. ಅವರು ವಿದೇಶದಲ್ಲಿ ವ್ಯವಹಾರ ನಡೆಸುತ್ತಿರುವುದು ದೃಢವಾಗಿದೆ. ಕ್ಯಾಸಿನೋಗಳು, ಆನ್‍ಲೈನ್ ಬೆಟ್ಟಿಂಗ್ ಸೈಟ್‍ಗಳ ವ್ಯವಹಾರ ನಡೆಸಿದ್ದಾರೆ. ಕೋಟ್ಯಾಂತರ ರೂ.ಅಕ್ರಮ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ವಿಚಾರಣೆ ಅಗತ್ಯ ಇದ್ದು, ಅವರನ್ನು 14 ದಿನಗಳ ಕಾಲ ಈಡಿ ವಶಕ್ಕೆ ನೀಡಬೇಕು ಎಂದು ಇ.ಡಿ ಪರ ವಕೀಲರು ನ್ಯಾಯಾಲಯವನ್ನು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಆದರೆ, ಕೆ ಸಿ ವೀರೇಂದ್ರ ಪಪ್ಪಿ ಅವರನ್ನು ಇ.ಡಿ ವಶಕ್ಕೆ ನೀಡುವ ಅವಶ್ಯಕತೆ ಇಲ್ಲ ಎಂದು ಕೆ.ಸಿ.ವೀರೇಂದ್ರ ಪರ ವಕೀಲರು ಮನವಿ ಮಾಡಿದರು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶ ಸೈಯದ್ ಬಿ. ರೆಹಮಾನ್ ಅವರು, ಕೆ.ಸಿ. ವೀರೇಂದ್ರ ಅವರನ್ನು ಆ.28ರ ವರೆಗೆ ಇ.ಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಹೀಗಾಗಿ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಕರಣ: ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮತ್ತು ಅವರ ಸೋದರರು ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿರುವ ಆರೋಪದ ಮೇಲೆ ಅವರಿಗೆ ಸಂಬಂಧಿಸಿ ದೇಶದ 31 ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳ ತಂಡವು ಶೋಧ ನಡೆಸಿತ್ತು. ಸುಮಾರು 1ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ, ಅಂದಾಜು 6ಕೋಟಿ ರೂ.ಮೌಲ್ಯದ ಚಿನ್ನಾಭರಣಗಳು, ಸುಮಾರು 10 ಕೆ.ಜಿ. ಬೆಳ್ಳಿ ವಸ್ತುಗಳು ಮತ್ತು ನಾಲ್ಕು ವಾಹನಗಳು ಸೇರಿ 12ಕೋಟಿ ರೂ. ನಗದನ್ನು ಆರೋಪಿಗಳಿಂದ ವಶಪಡಿಸಿಕೊಂಡು, ವಿಚಾರಣೆ ನಡೆಸಲಾಗುತ್ತಿದೆ.