ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಪ್ರಾಪ್ತ) ಬಾಲಕಿಯ ಜೊತೆಗಿನ ಲೈಂಗಿಕ ಕ್ರಿಯೆಯು ಆಕೆಯ ಸಮ್ಮತಿಯಿಂದ ನಡೆದಿದ್ದರೂ ಸಹ ಅದು ಕಾನೂನಿನ ದೃಷ್ಟಿಯಲ್ಲಿ ಗಂಭೀರ ಅಪರಾಧ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. 2025ರ ಜುಲೈ 7ರಂದು ಮಂಡ್ಯದ ತ್ವರಿತಗತಿ ಸೆಷನ್ಸ್ ನ್ಯಾಯಾಲಯವು (FTSC-II) ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು, ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.
ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಪೀಠ, ‘ಬಾಲಕಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದಾಗ ಲೈಂಗಿಕ ಕ್ರಿಯೆಗೆ ಆಕೆಯ ಸಮ್ಮತಿ ಇದೆಯೋ ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ’ ಎಂದು ಕಡ್ಡಿಮುರಿದಂತೆ ಹೇಳಿದೆ. ಬಾಲಕಿಯ ಸಮ್ಮತಿಯನ್ನು ರಕ್ಷಣೆಯಾಗಿ ಅಥವಾ ಗುರಾಣಿಯಾಗಿ ಪಡೆಯಲು ಆರೋಪಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಕಟ್ಟುನಿಟ್ಟಾಗಿ ವಿವರಿಸಿದೆ.
ಈ ಪ್ರಕರಣದಲ್ಲಿ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪಿಗೆ ಪೋಕ್ಸೊ ಕಾಯ್ದೆ ಕಲಂ 6 ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 376ರ ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲಾಗಿದೆ. ಇದರ ಜೊತೆಗೆ, ಅಪ್ರಾಪ್ತೆಯನ್ನು ಅಪಹರಣ ಮಾಡಿದ (ಐಪಿಸಿ 363) ಆರೋಪಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡವನ್ನು ಪ್ರತ್ಯೇಕವಾಗಿ ವಿಧಿಸಲಾಗಿದೆ.
ಆರೋಪಿಗೆ ವಿಧಿಸಲಾದ ದಂಡದ ಮೊತ್ತದ ವಿತರಣೆ ಕುರಿತಾಗಿಯೂ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಒಟ್ಟು ದಂಡದ ಮೊತ್ತದಲ್ಲಿ ₹90 ಸಾವಿರವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದೆ. ಇನ್ನುಳಿದ ₹15 ಸಾವಿರ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಸೂಚನೆ ನೀಡಲಾಗಿದೆ.
ಈ ಮಹತ್ವದ ಆದೇಶದ ಪ್ರತಿ ಲಭ್ಯವಾದ ಒಂದು ವಾರದ ಒಳಗಾಗಿ ಆರೋಪಿಯು ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿದೆ. ಒಂದು ವೇಳೆ ಆತ ಶರಣಾಗದೇ ಇದ್ದಲ್ಲಿ, ತಕ್ಷಣವೇ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ





