ರಾಜ್ಯ ಸರ್ಕಾರ ನೂರು ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರು ಹಾಗೂ ವಸತಿ ರಹಿತ ಬಡವರಿಗೆ ಅನುಕೂಲವಾಗುವ ಹಲವು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. 3 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಉಳುಮೆ ಮಾಡಿಕೊಡುವ ‘ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ’, ರಾಜ್ಯದಲ್ಲಿ 15 ಲಕ್ಷ ನಿವೇಶನಗಳ ಹಂಚಿಕೆ, ಕೈಗಾರಿಕಾ ಕಾರ್ಮಿಕರಿಗಾಗಿ ‘ಶ್ರಮಿಕ್ ನಿವಾಸ’ ಯೋಜನೆ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಮೂರು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರ ಜಮೀನಿನಲ್ಲಿ ಸರ್ಕಾರವೇ ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ಪಡೆದು ಉಚಿತವಾಗಿ ಉಳುಮೆ ಮಾಡಿಕೊಡಲಿದೆ. ಈ ಯೋಜನೆಯಿಂದ ರಾಜ್ಯದ ಸುಮಾರು 59 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಮೊದಲ ಹಂತದಲ್ಲಿ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ₹152 ಕೋಟಿ ಅನುದಾನ ಮೀಸಲಿಡಲಾಗಿದೆ. ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಕೃಷಿ ಇಲಾಖೆಗೆ ವಹಿಸಲಾಗುತ್ತದೆ.
ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರು ತಮ್ಮ ಕ್ಷೇತ್ರದಲ್ಲಿ ಸ್ವಂತ ಟ್ರ್ಯಾಕ್ಟರ್ಗಳನ್ನು ಖರೀದಿಸಿ ಬಡ ರೈತರ ಜಮೀನುಗಳಲ್ಲಿ ಉಳುಮೆ ಮಾಡಿಸಿಕೊಡುವ ಕಾರ್ಯ ಕೈಗೊಂಡಿದ್ದರು. ಈ ಪ್ರಯೋಗ ಯಶಸ್ವಿಯಾಗಿರುವುದನ್ನು ಗಮನಿಸಿ ರಾಜ್ಯಾದ್ಯಂತ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.
ವಸತಿ ರಹಿತ ಬಡವರಿಗೆ ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಜಿಲ್ಲೆಗೆ ಸರಾಸರಿ 50 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ನಿವೇಶನಕ್ಕಾಗಿ ಭೂಮಿ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೇ ಸುಮಾರು 10 ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. ಅಗತ್ಯವಿರುವ ಕಡೆ ನಿವೇಶನ ಅಭಿವೃದ್ಧಿಪಡಿಸಲು ಸರ್ಕಾರವೇ ಹಣ ಒದಗಿಸಲಿದೆ. ಮೂರು ಹಂತಗಳಲ್ಲಿ ನಿವೇಶನ ಹಂಚಿಕೆ ನಡೆಯಲಿದ್ದು, ಮುಂದಿನ ಎರಡು ತಿಂಗಳೊಳಗೆ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು. ಇದರ ಜತೆಗೆ ಎಸ್ಸಿ-ಎಸ್ಟಿ ಕಾಲೋನಿಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ. ರಾಜ್ಯದ ವಿವಿಧ ನಿಗಮಗಳ ಮೂಲಕ 10 ಸಾವಿರ ಟ್ಯಾಕ್ಸಿ ಕಾರುಗಳನ್ನು ನೀಡುವ ಯೋಜನೆಯನ್ನೂ ಸರ್ಕಾರ ರೂಪಿಸಿದೆ.
ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ‘ಶ್ರಮಿಕ್ ನಿವಾಸ’ ಯೋಜನೆ ಜಾರಿಗೆ ತರಲು ತೀರ್ಮಾನಿಸಲಾಗಿದೆ. ದೊಡ್ಡ ಕೈಗಾರಿಕಾ ಸಂಸ್ಥೆಗಳ ಮೂಲಕ ಸುಮಾರು 10 ಸಾವಿರ ಮನೆಗಳನ್ನು ನಿರ್ಮಿಸಿ ಕಾರ್ಮಿಕರಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಮನೆ ನಿರ್ಮಾಣಕ್ಕೆ ಮುಂದಾಗುವ ಕಂಪನಿಗಳಿಗೆ ಸರ್ಕಾರ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ಕೈಗಾರಿಕೆಗಳಿಗೆ ಮನೆ ನಿರ್ಮಾಣಕ್ಕಾಗಿ KIADB ಜಾಗದ ಅಗತ್ಯವಿದ್ದರೆ, ಸಬ್ಸಿಡಿ ದರದಲ್ಲಿ ಭೂಮಿ ಮಂಜೂರು ಮಾಡುವ ಬಗ್ಗೆಯೂ ಸರ್ಕಾರ ನಿರ್ಧರಿಸಿದೆ.
2026ರಿಂದ 2031ರವರೆಗಿನ ಕರ್ನಾಟಕ ಏರೋಸ್ಪೇಸ್ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಏರೋಸ್ಪೇಸ್, ರಕ್ಷಣಾ, ವಿಮಾನಯಾನ ಉತ್ಪಾದನೆ ಹಾಗೂ ನಾವೀನ್ಯತೆ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು ನೀತಿಯ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕ್ಷೇತ್ರಗಳಲ್ಲಿ ₹60 ಸಾವಿರ ಕೋಟಿ ಹೂಡಿಕೆ ಆಕರ್ಷಿಸುವ ಹಾಗೂ ಸುಮಾರು 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ನೀತಿಯಲ್ಲಿ ಫೋಕಸ್ ಮತ್ತು ನಾನ್-ಫೋಕಸ್ ಏರಿಯಾ ವಲಯಗಳನ್ನು ಗುರುತಿಸಲಾಗಿದ್ದು, ವಲಯ-1ರಲ್ಲಿ ಶೇ.30, ವಲಯ-2ರಲ್ಲಿ ಶೇ.27.5 ಹಾಗೂ ವಲಯ-3ರಲ್ಲಿ ಶೇ.25ರಷ್ಟು ಬಂಡವಾಳ ಸಬ್ಸಿಡಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಲ್ಲಿ ಟಾಟಾ ಕಂಪನಿ 40 ವಿಮಾನಗಳನ್ನು ತಯಾರಿಸುವ ಯೋಜನೆಯಿದ್ದು, 97 ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ಗಳ (LCH) ಉತ್ಪಾದನೆಗೂ ಗುರಿ ನಿಗದಿಯಾಗಿದೆ. ಈ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ತಯಾರಿಕೆಗೆ ಅಗತ್ಯವಿರುವ ಬಿಡಿಭಾಗ ಹಾಗೂ ಉಪಕರಣಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಏರೋಸ್ಪೇಸ್, ರಕ್ಷಣಾ, ಬಾಹ್ಯಾಕಾಶ ತಂತ್ರಜ್ಞಾನ, ಆಟೋಮೊಬೈಲ್, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಔಷಧ ಹಾಗೂ ವೈದ್ಯಕೀಯ ಸಾಧನಗಳಂತಹ ಕೈಗಾರಿಕೆಗಳನ್ನು ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪಿಸಿದರೆ ಹೆಚ್ಚುವರಿ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. ಪ್ರೊ. ಗೋವಿಂದರಾವ್ ಸಮಿತಿ ವರದಿ ಆಧರಿಸಿ ಗುರುತಿಸಲಾಗಿರುವ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸಿದರೆ ಶೇ.10 ಹಾಗೂ ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪಿಸಿದರೆ ಶೇ.20ರಷ್ಟು ಸಹಾಯಧನ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಗರಿಷ್ಠ ಎರಡು ತಾಲೂಕುಗಳನ್ನು ಮಾತ್ರ ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿರಲಿದೆ.
ಉದ್ಯೋಗ ನಿಧಿ ಯೋಜನೆಯಡಿ ಯಾದಗಿರಿ, ಬೀದರ್, ಕಲಬುರಗಿ, ರಾಯಚೂರು, ಬೆಳಗಾವಿ, ಕೊಪ್ಪಳ, ವಿಜಯನಗರ, ಗದಗ, ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500ರಂತೆ ಎರಡು ವರ್ಷಗಳವರೆಗೆ ಕಂಪನಿ ಮಾಲೀಕರಿಗೆ ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (EPF) ಪಾವತಿಗೂ ನೆರವು ನೀಡಲಾಗುವುದು. ಇದಕ್ಕಾಗಿ ₹300 ಕೋಟಿ ಅನುದಾನ ಮೀಸಲಿಡಲಾಗಿದೆ.
2026-31ನೇ ಸಾಲಿನ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳು ಮತ್ತು ಪಟ್ಟಣಗಳಲ್ಲಿ GIS ಆಧಾರಿತ ರಸ್ತೆ ಜಾಲ ವ್ಯವಸ್ಥೆಯಂತೆ 172 ಸ್ಥಳೀಯ ಪ್ರದೇಶಗಳಲ್ಲಿ ಹೊರವರ್ತುಲ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಈ ರಿಂಗ್ ರಸ್ತೆಗಳ ಎರಡೂ ಬದಿಯಲ್ಲಿ ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಇಂಪ್ಯಾಕ್ಟ್ ಝೋನ್ ಎಂದು ಗುರುತಿಸಲಾಗುವುದು. ಈ ವಲಯದಲ್ಲಿ ಮನೆಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ.
ದೇಶದಲ್ಲೇ ಮೊದಲ ಬಾರಿಗೆ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರವನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ₹42.83 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ IIITನಲ್ಲಿ ಕೃತಕ ಬುದ್ಧಿಮತ್ತೆ (AI) ಹಬ್ ಸ್ಥಾಪನೆಗೆ ₹35 ಕೋಟಿ ಒದಗಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 24,831 ಎಂಜಿನಿಯರಿಂಗ್ ಸೀಟು ಖಾಲಿ; ಕೃಷಿ, ಪಶುವೈದ್ಯಕೀಯ ಕೋರ್ಸ್ಗಳಿಗೆ ಶೇ.100 ಅಡ್ಮಿಷನ್
ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಪರಿಚಯಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆ ಜಾರಿಗೊಳಿಸಲು ₹237 ಕೋಟಿ ವೆಚ್ಚವಾಗಲಿದೆ. ರಾಜ್ಯದ 185 ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಟೆಲಿ-ಐಸಿಯು ಯೋಜನೆ ಜಾರಿಗೆ ತರಲು ಅಗತ್ಯವಿರುವ ಐಟಿ ಹಾರ್ಡ್ವೇರ್ ಮೂಲಸೌಕರ್ಯ ಖರೀದಿ, ಪೂರೈಕೆ ಹಾಗೂ ನಿರ್ವಹಣೆಗೆ ₹10.78 ಕೋಟಿ ವೆಚ್ಚದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜತೆಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 300 mA ಮತ್ತು 500 mA ಸಾಮರ್ಥ್ಯದ ಎಕ್ಸ್ರೇ ಯಂತ್ರಗಳ ಪೈಕಿ ಗರಿಷ್ಠ 162 ಘಟಕಗಳನ್ನು ಡಿಜಿಟಲ್ ರೇಡಿಯೋಗ್ರಫಿ (DR) ವ್ಯವಸ್ಥೆಗೆ ಮೇಲ್ದರ್ಜೆಗೇರಿಸಲು ₹40.50 ಕೋಟಿ ವೆಚ್ಚದ ಕರ್ನಾಟಕ ಡಿಜಿಟಲ್ ರೇಡಿಯೋಗ್ರಫಿ ಮಿಷನ್ (KDRM) ಹಂತ-1ಕ್ಕೆ ಅನುಮೋದನೆ ನೀಡಲಾಗಿದೆ.
ತಾಲೂಕು ಆಸ್ಪತ್ರೆಗಳಲ್ಲಿ ಕಿವಿ ಮತ್ತು ಶ್ರವಣ ಆರೈಕೆ ಸೇವೆಗಳನ್ನು ಬಲಪಡಿಸಲು 50 ತಾಲೂಕು ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ₹20.39 ಕೋಟಿ ವೆಚ್ಚ ಮಾಡಲು ಅನುಮೋದಿಸಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಗೆ ಒಬ್ಬರಂತೆ ಒಟ್ಟು 50 ಆಡಿಯಾಲಜಿಸ್ಟ್ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕೂಡ ಸರ್ಕಾರ ನಿರ್ಧರಿಸಿದೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸಚಿವ ಸಂಪುಟ ಅನುಮತಿ ನೀಡಿದೆ. ರಾಜ್ಯ ಸರ್ಕಾರ ನೂರು ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ರೈತರು, ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಈ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ಸರ್ಕಾರ ತಿಳಿಸಿದೆ.





