ಭಾರತದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ ನಾಗರಿಕ ಶಕ್ತಿಯಾಗಿ ತಳಮಟ್ಟದಿಂದ ದೇಶಮಟ್ಟದಲ್ಲಿ ಕಟ್ಟಬೇಕಿದೆ. ಅದಕ್ಕಾಗಿ, ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ, ‘ಸಂವಿಧಾನ ಸಂರಕ್ಷಕ ಪಡೆ’ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯಮಟ್ಟದ ಚಾಲನೆ ನೀಡಲು ಇದೇ ತಿಂಗಳ 26ರಂದು ದಾವಣಗೆರೆಯಲ್ಲಿ ‘ಸಂವಿಧಾನ ಸಂರಕ್ಷಕರ ಸಮಾವೇಶ’ವನ್ನು ಆಯೋಜಿಸಲಾಗಿದೆ ಎಂದು ಎದ್ದೇಳು ಕರ್ನಾಟಕದ ಮುಖಂಡರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎದ್ದೇಳು ಕರ್ನಾಟಕ ಅಭಿಯಾನದ ಬಿ.ಟಿ. ಲಲಿತಾ ನಾಯ್ಕ್, ಜೆ.ಎಂ, ವೀರಸಂಗಯ್ಯ, ಯೂಸೂಫ್ ಕನ್ನಿ, ತಾರಾ ರಾವ್, ಫಾ.ರೆವರೆಂಡ್ ಚಂದ್ರಪ್ರಸಾದ್, ನೂರ್ ಶ್ರೀಧರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸಮಾವೇಶದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
“112 ಸಂಘಟನೆಗಳನ್ನು ಒಳಗೊಂಡ ‘ಎದ್ದೇಳು ಕರ್ನಾಟಕ’ ಅಭಿಯಾನವು 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ಇಳಿಸಲು ಬೂತ್ ಮಟ್ಟಕ್ಕಿಳಿದು ಪರಿಣಾಮಕಾರಿ ಕೆಲಸ ಮಾಡಿತ್ತು. ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರದಿಂದ ಕೆಳಗೆ ದಬ್ಬಲು ಸಾಧ್ಯವಾಯಿತು. ಆದಾಗ್ಯೂ, ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರ ಉಳಿಸಿಕೊಂಡಿದೆ. ಜನಸಾಮಾನ್ಯರ ಬದುಕಿನ ಮೇಲಿನ ಆಕ್ರಮಣವನ್ನು ಮತ್ತು ವಿಚ್ಛಿದ್ರಕಾರಿ ನೀತಿಗಳನ್ನು ಮುಂದುವರೆಸಿದ್ದಾರೆ. ಕೋಮುವಾದಿ, ಫ್ಯಾಸಿಸ್ಟ್ ಶಕ್ತಿಗಳಿಂದ ದೇಶ ಮತ್ತು ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಮಾತ್ರವಲ್ಲದೆ, ದೇಶದ ಎಲ್ಲ ವಿರೋಧ ಪಕ್ಷಗಳೂ ತಾವು ಅಧಿಕಾರಕ್ಕೆ ಬರುವ ಸಲುವಾಗಿ ಬಿಜೆಪಿಯನ್ನು ವಿರೋಧಿಸುತ್ತಿವೆಯೇ ಹೊರತು, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ನೀತಿಬದ್ಧ ಹೋರಾಟಕ್ಕೆ ಸಿದ್ಧರಿಲ್ಲ. ಮರು ನಿರ್ಮಾಣದ ಹಾದಿಯಲ್ಲಿ ಭಾರತವನ್ನು ಒಯ್ಯಲು ಇವರಿಂದ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಜನಹಿತವನ್ನು ಕಾಯಬೇಕಾದರೆ, ಈ ದೇಶವನ್ನು ಉಳಿಸಿಕೊಳ್ಳಬೇಕಾದರೆ, ಸಂವಿಧಾನ ಕೊಟ್ಟ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾದರೆ – ನಾಗರಿಕರಾದ ನಾವೆಲ್ಲರೂ ಪ್ರಬಲ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳಬೇಕಿದೆ” ಎಂದಿದ್ದಾರೆ.
“ಭಾರತದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ ನಾಗರಿಕ ಶಕ್ತಿಯಾಗಿ ತಳಮಟ್ಟದಿಂದ ದೇಶಮಟ್ಟದಲ್ಲಿ ಕಟ್ಟಬೇಕಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅದರ ಆರಂಭವಾಗಿ ದಾವಣಗೆರೆಯಲ್ಲಿ ‘ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಇದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ರಾಷ್ಟ್ರಪತಿಗೆ ಸುಪ್ರೀಂ ಗಡುವು: ಕಾರ್ಯಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣವೇ?
“ಸಮಾವೇಶದ ಮತ್ತೊಂದು ಮುಖ್ಯ ವಿಚಾರವೆಂದರೆ, ಯುವಜನರ ತಂಡವು ವಾಡಿಯಿಂದ ದಾವಣಗೆರೆವರೆಗೆ 20 ಜಿಲ್ಲೆಗಳ ಮೂಲಕ 2000 ಕಿ.ಮೀ ಉದ್ದದ ದಾರಿಯನ್ನು ಕ್ರಮಿಸುತ್ತಾ ಬೈಕುಗಳಲ್ಲಿ ಯುವಯಾನ ನಡೆಸುತ್ತಿದೆ. ಏಪ್ರಿಲ್ 25ರ ಸಂಜೆ ದಾವಣಗೆರೆ ತಲುಪಲಿದ್ದು ಅಲ್ಲಿಯೂ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ಸಮಾವೇಶದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರಸಿದ್ಧ ಚಿತ್ರ ನಟಪ್ರಕಾಶ್ ರಾಜ್, ಗುಜರಾತಿನ ಶಾಸಕ ಹಾಗೂ ಹೋರಾಟಗಾರ ಜಿಗ್ನೇಶ್ ಮೇವಾನಿ, ಪ್ರಖರ ಚಿಂತಕರಾದ ಪರಕಾಲ ಪ್ರಭಾಕರ್, ಮುಸ್ಲಿಂ ಸಮುದಾಯದ ರಾಷ್ಟ್ರೀಯ ನಾಯಕರಾದ ಮೊಹಮ್ಮದ್ ಸಲೀಂ, ಸಂಯುಕ್ತ ಕಿಸಾನ್ ಮೋರ್ಚಾದ ಡಾ.ಸುನೀಲಮ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ್, ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ, ರೈತ ಚಳವಳಿಯ ಮುಂದಾಳುಗಳಾದ ಹೆಚ್.ಆರ್.ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ದಲಿತ ಚಳವಳಿಯ ಹಿರಿಯ ಮುಂಡರಾದ ಗುರುಪ್ರಸಾದ್ ಕೆರಗೋಡು, ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಕ್ರೈಸ್ತ ಸಮುದಾಯದ ಮುಖಂಡರಾದ ಫಾ. ವೀರೇಶ್ ಮೋರೆಸ್, ಫಾ.ಜೆರಾಲ್ಡ್, ಮಾನವ ಬಂಧುತ್ವ ವೇದಿಕೆಯ ಎ.ಬಿ.ರಾಮಚಂದ್ರಪ್ಪ, ರವಿ ನಾಯ್ಕರ್, ಜನಪರ ಚಿಂತಕ-ಹೋರಾಟಗಾರ ಸಿದ್ದನಗೌಡ ಪಾಟೀಲ್ ಇನ್ನು ಮುಂತಾದ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ” ಎಂದು ವಿವರಿಸಿದ್ದಾರೆ.