ಭಾಲ್ಕಿ ತಾಲ್ಲೂಕಿನ ಕಟ್ಟಿತುಗಾಂವ್ ಗ್ರಾಮದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿದಂತೆ ಇತರೆ ಆರು ಜನರಿಂದ ಬೆದರಿಕೆ ಇರುವುದಾಗಿ ಡೆತ್‌ನೋಟ್ ಬರೆದಿಟ್ಟು ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಿಪಕ್ಷ ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಪರಮೇಶ್ವರ್
ಈ ಬಗ್ಗೆ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್, “ಬಿಜೆಪಿಯವರು ಈ ಪ್ರಕರಣವನ್ನು ಸಿಬಿಐಗೆ ನೀಡಲು ಆಗ್ರಹಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಅನಾವಶ್ಯಕ ರಾಜಕೀಯ ಸರಿಯಲ್ಲ. ಅಷ್ಟಕ್ಕೂ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ನೀಡಲಾಗದು. ಈ ಪ್ರಕರಣವನ್ನು ಸಿಐಡಿಗೆ ನೀಡಲಾಗುವುದು” ಎಂದು ತಿಳಿಸಿದರು.
“ಈ ಪ್ರಕರಣದಲ್ಲಿ ಬಿಜೆಪಿ ಪ್ರಿಯಾಂಕ್ ಖರ್ಗೆಯವರ ಮೇಲೆ ಆರೋಪ ಮಾಡುತ್ತಿದೆ. ಅವರ ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಸಚಿವರ ಹೆಸರು ಡೆತ್‌ನೋಟ್‌ನಲ್ಲಿ ಎಲ್ಲೂ ನೇರವಾಗಿಲ್ಲ. ಇನ್ನು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ. ಎಲ್ಲಾ ತನಿಖೆ ನಡೆದ ಬಳಿಕವೇ ಸತ್ಯಾಸತ್ಯತೆ ತಿಳಿಯಲಿದೆ” ಎಂದರು.
