ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ, ಕಾಂಗ್ರೆಸ್ ಮುಖಂಡ ರಾಜು ಕಪನೂರ ಹಾಗೂ ಇತರೆ ಎಂಟು ಜನರಿಂದ ಜೀವ ಬೆದರಿಕೆ ಇರುವುದಾಗಿ ಡೆತ್‌ನೋಟ್ ಬರೆದು ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ನಗರದ ಗಾಂಧಿಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ರಾಜೇಶ್ ಚೆಲ್ವಾ ಹಾಗೂ ಶಾಮಲಾ ಅಮಾನತುಗೊಂಡವರು.
ಬೀದರ್‌ನ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದಯುವ ಗುತ್ತಿಗೆದಾರ ಸಚಿನ್ಮಾನಪ್ಪ ಪಾಂಚಾಳ್ (26) ಅವರು ಗುರುವಾರ (ಡಿ.26) ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರು. ಇದನ್ನು ನೋಡಿ ಗಾಬರಿಗೊಂಡ ಸಚಿನ್ ಕುಟುಂಬ ಸದಸ್ಯರು ಗಾಂಧಿ ಗಂಜ್ ಠಾಣೆಗೆ ತೆರಳಿದ್ದರು. ಸಚಿನ್‌ನನ್ನು ಹುಡುಕಿಕೊಡುವಂತೆ ವಿಷಯ ತಿಳಿಸಿ, ದೂರು ಕೊಡಲು ಮುಂದಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಬರಿ ಮಸೀದಿ ಕೆಡವಿದಾಗಲೇ ‘ಸಾಮರಸ್ಯ’ ಸಮಾಧಿಯಾಗಿತ್ತಲ್ಲವೇ?
ಈ ವೇಳೆ ಠಾಣೆಯಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಜೇಶ್ ಚೆಲ್ವಾ ಮತ್ತು ಶಾಮಲಾ ಅವರು ದೂರು ಸ್ವೀಕರಿಸಿ, ಎಫ್ಐಆರ್ ದಾಖಲಿಸಿರಲಿಲ್ಲ. ಮೃತ ಯುವಕ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದವನಾದ ಕಾರಣ, ಧನ್ನೂರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವಂತೆ ಹೇಳಿದ್ದರು. ದೂರು ಸ್ವೀಕರಿಸಿದೆ ನಿರ್ಲಕ್ಷ್ಯ ತೋರಿ, ಕರ್ತವ್ಯಲೋಪ ಎಸಗಿದ ಕಾರಣಕ್ಕಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
