ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಒಟ್ಟು ಅತ್ಯಾಚಾರ ಪ್ರಕರಣಗಳ ಪೈಕಿ ಶಿಕ್ಷೆಯಾಗಿರುವುದು ಕೇವಲ 0.36% ಪ್ರಕರಣಗಳಲ್ಲಿ ಮಾತ್ರವೆಂದು ವರದಿಯಾಗಿದೆ. ಸಾಕ್ಷ್ಯಾಧಾರಗಳ ಕೊರತೆ, ವಿಚಾರಣೆ ವಿಳಂಬ ಹಾಗೂ ನ್ಯಾಯಾಧೀಶರ ಕೊರತೆಯಿಂದಾಗಿ ಇತ್ಯರ್ಥವಾಗಿರುವ ಮತ್ತು ಶಿಕ್ಷೆಯಾಗಿರುವ ಪ್ರಕರಣಗಳು ತೀರಾ ಕಡಿಮೆಯಿಂದ ತಿಳಿದುಬಂದಿದೆ.
2022ರಿಂದ 2024ರ ಸೆಪ್ಟೆಂಬರ್‌ವರೆಗೆ ರಾಜ್ಯಾದ್ಯಂತ ಒಟ್ಟು 1,624 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ, 6 ಪ್ರಕರಣಗಳಲ್ಲಿ ಮಾತ್ರವೇ ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದ್ದು, ಶಿಕ್ಷೆ ವಿಧಿಸಲಾಗಿದೆ. 74 ಪ್ರಕರಣಗಳು ಖುಲಾಸೆಯಾಗಿವೆ. ಅಲ್ಲದೆ, 104 ಪ್ರಕರಣಗಳನ್ನು ಸುಳ್ಳು ಎಂದು ಘೋಷಿಸಲಾಗಿದೆ. 298 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, 1,037 ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.
ಗಮನಾರ್ಹವಾಗಿ, ಈ ವರ್ಷ (2024) ದಾಖಲಾಗಿರುವ ಅತ್ಯಾಚಾರ ಪ್ರಕರಣಗಳ ಪೈಕಿ 300 ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ಪರಿಚಯ ಇರುವವರೇ ಆರೋಪಿಗಳಾಗಿದ್ದಾರೆ. ಅವುಗಳಲ್ಲಿ 34 ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಯರ ಹತ್ತಿರದ ಸಂಬಂಧಿಗಳೇ ಆಗಿದ್ದಾರೆ.
2024ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಬೆಂಗಳೂರಿನಲ್ಲೇ 131 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಕೂಡ ಸೇರಿದೆ.
“ದಾಖಲಾದ ಹಲವಾರು ಪ್ರಕರಣಗಳು ವಿಚಾರಣೆಗೆ ಬರುವುದಕ್ಕೆಯೇ 3ರಿಂದ 5 ವರ್ಷವಾಗುತ್ತದೆ. ಆ ವೇಳೆಗೆ ಸಾಕ್ಷಿಗಳು ನಿರ್ಣಾಯಕ ವಿವರಗಳನ್ನು ಮರೆತುಬಿಡುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ವಿಳಂಬವು ಅನೇಕ ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು, ಖುಲಾಸೆಯಾಗಲು ಅನುವು ಮಾಡಿಕೊಡುತ್ತದೆ” ಎಂದು ಮಾಜಿ ಐಜಿಪಿ ಎಸ್.ಟಿ ರಮೇಶ್ ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.