ಹೃದಯವಾಹಿನಿ ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ವತಿಯಿಂದ ಜನವರಿ 18, 19ರಂದು ಸೌದಿ ಅರೇಬಿಯಾದಲ್ಲಿ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ.
ವಿಶ್ವದ ವಿವಿಧ ದೇಶಗಳಲ್ಲಿ ಈಗಾಗಲೇ ಸಮ್ಮೇಳನಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು ಎರಡು ದಿನಗಳ ಕಾಲ ಕನ್ನಡ ಸಂಸ್ಕೃತಿಯ ಸಂಭ್ರಮಾಚರಣೆ ಜರುಗಲಿದೆ.
ಈ ಕುರಿತು ಸಮ್ಮೇಳನದ ಆಯೋಜಕರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರಣೆಗಳನ್ನು ನೀಡಿದ್ದಾರೆ.
ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಝಕಾರಿಯಾ ಜೋಕಟ್ಟೆ ಮಾತನಾಡಿ, “ಸೌದಿ ಅರೇಬಿಯಾದಲ್ಲಿ ಕನ್ನಡದ ನಡೆ, ನುಡಿ ಸಂಸ್ಕೃತಿಯನ್ನು ವಿಜೃಂಭಿಸಲು ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲ ಕನ್ನಡಿಗರ ಸಹಕಾರ ಅಲ್ಲಿ ಸಿಕ್ಕಿದೆ. ಸೌದಿ ಅರೇಬಿಯಾ ದೊಡ್ಡ ಮಟ್ಟದಲ್ಲಿ ನಮಗೆ ಪ್ರೋತ್ಸಾಹ ನೀಡಿದೆ. ಕನ್ನಡ ಸಂಸ್ಕೃತಿಯನ್ನು ಪರಿಚರಿಸಲು ನಾವು ಉತ್ಸುಕರಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಅನಿವಾಸಿ ಭಾರತೀಯರಿಗಾಗಿ ಸಚಿವಾಲಯ ತೆರೆದಿದ್ದಾರೆ. ಅವರಿಗೆ ಧನ್ಯವಾದಗಳು. ಅವರನ್ನು ನಾವೆಂದೂ ಮರೆಯುವುದಿಲ್ಲ” ಎಂದು ಕೃತಜ್ಞತೆ ಸಲ್ಲಿಸಿದರು.

’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್, “ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಕನ್ನಡಿಗರು ಬಹುದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕರ್ನಾಟಕದಿಂದ ಸುಮಾರು 70ಕ್ಕೂ ಹೆಚ್ಚು ಕಲಾವಿದರು ಸೌದಿಗೆ ಬರುತ್ತಿದ್ದಾರೆ. ಯಕ್ಷಗಾನ, ದಫ್, ಡೊಳ್ಳುಕುಣಿತ, ಭರತನಾಟ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿವೆ” ಎಂದು ತಿಳಿಸಿದರು.

“2004ರಲ್ಲಿ ಅಬುಧಾಬಿಯಿಂದ ಆರಂಭಗೊಂಡ ಈ ವಿಶ್ವಕನ್ನಡ ಯಾತ್ರೆ ಇಲ್ಲಿಯವರೆಗೂ ನಿರಂತರವಾಗಿ ಸಾಗಿಬಂದಿದೆ. ಕೊರೊನಾ ಸಂದರ್ಭದ ಒಂದು ವರ್ಷ ಬಿಟ್ಟರೆ ಪ್ರತಿ ವರ್ಷವೂ ಕಾರ್ಯಕ್ರಮ ನಡೆಸಿದ್ದೇವೆ. ವಿಶ್ವಕನ್ನಡ ಸಮ್ಮೇಳನಕ್ಕೆ ಅನಿವಾಸಿ ಕನ್ನಡಿಗರ ಸಂಘಟನೆಗಳ ಕೊಡುಗೆ ಅಪಾರವಾಗಿದೆ” ಎಂದು ತಿಳಿಸಿದರು.
“ಗಲ್ಫ್ ರಾಷ್ಟ್ರಗಳಲ್ಲಿನ ಕನ್ನಡಿಗರು, ಸಿಂಗಾಪುರ, ಆಸ್ಟ್ರೆಲಿಯಾ, ಕೀನ್ಯಾ ಹಲವಾರು ದೇಶಗಳಲ್ಲಿ ಇರುವ ಕನ್ನಡಿಗರು ಈವರೆಗಿನ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಇದರಲ್ಲಿ ಕರ್ನಾಟಕ ಸರ್ಕಾರದ ಕೊಡುಗೆ ಮತ್ತು ಕರ್ನಾಟಕ ಜನರ ಬೆಂಬಲವೂ ಇದೆ” ಎಂದರು.
ಸೌದಿ ಅರೇಬಿಯಾದ ದಮಾಮ್ನ ಸಫ್ವಾ ಸಭಾಂಗಣದಲ್ಲಿ ನಡೆಯುವ ಈ ಸಲದ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ಸ್ವೀಕರ್ ಯು.ಟಿ.ಖಾದರ್ ಬರಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರನ್ನೂ ಆಹ್ವಾನಿಸಲಾಗಿದೆ. ಸಚಿವರಾದ ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ರಹೀಂ ಖಾನ್, ಅನಿವಾಸಿ ಭಾರತೀಯ ವೇದಿಕೆ ಉಪಾಧ್ಯಕ್ಷರಾದ ಆರತಿ ಕೃಷ್ಣ ಮೊದಲಾದವರಿಗೆ ಆಹ್ವಾನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಹೃದಯವಾಹಿನಿ ಸಂಸ್ಥೆಯು ಕಳೆದ 24 ವರ್ಷಗಳಿಂದ ಸಮಾರಂಭಗಳನ್ನು ಆಯೋಜಿಸುತ್ತಾ ಬಂದಿದೆ. ಆರಂಭದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. 2004ರಲ್ಲಿ ಅಬುಧಾಬಿ ಕನ್ನಡ ಸಂಘ ನಮ್ಮನ್ನು ಸಂಪರ್ಕಿಸಿತ್ತು. ಮೊದಲ ಬಾರಿಗೆ ವಿಶ್ವಕನ್ನಡ ಸಮ್ಮೇಳನ ನಡೆಯಿತು. ಅಶೋಕ್ ಪೈ ಅವರು ನಮ್ಮ ಪ್ರೋತ್ಸಾಹಕ್ಕೆ ನಿಂತಿದ್ದರು. ಅಬುಧಾಬಿ ಉದ್ಯಮಿಗಳಾದ ಬಿ.ಆರ್.ಶೆಟ್ಟಿ ಪ್ರೋತ್ಸಾಹಿಸಿದರು. ಅಂದು ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಪ್ರಥಮ ಸಮ್ಮೇಳನದ ಜ್ಯೋತಿ ಬೆಳಗಿಸಿದ್ದರು. ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿ, ನಿರಂತರವಾಗಿ ಕಾರ್ಯಕ್ರಮ ನಡೆಯುತ್ತಾ ಬಂದಿದೆ ಎಂದು ವಿವರಿಸಿದರು.
ಸೌದಿ ಅರೇಬಿಯಾ ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಅವರು ಮಾತನಾಡಿ, “ಗ್ರಾಮೀಣ ಭಾರತದ ಕಲಾವಿದರಿಗೆ ಒಂದು ವೇದಿಕೆಯನ್ನು ನಿರ್ಮಿಸಿದ್ದೇವೆ. ಜಾನಪದ ಕಲಾವಿದರು, ಕಥಕ್ ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರದ ಜನರು ಬರಲಿದ್ದಾರೆ. ಕುದ್ರೋಳಿ ಗಣೇಶ್ ತಂಡದಿಂದ ಮ್ಯಾಜಿಕ್ ಶೋ, ಮಿಮಿಕ್ರಿ ಗೋಪಿ ಅವರಿಂದ ಸ್ವರಾನುಕರಣೆ, ಮಹದೇವ ಸತ್ತಿಗೇರಿ ಅವರಿಂದ ಹಾಸ್ಯ, ಗೋ.ನಾ.ಸ್ವಾಮಿ, ಪುಷ್ಪ ಆರಾಧ್ಯ, ಅನಿಲ್ ಬಾಸಗಿ ಮತ್ತು ಶಿವು ಮುಂತಾದ ಗಾಯಕರಿಂದ ಸ್ವರಮಂಜರಿ, ರಂಗ ಸಂಸ್ಕೃತಿ ಬೆಂಗಳೂರು ತಂಡದಿಂದ ಕಿರುನಗೆ ನಾಟಕ, ಬಹರೇನ್ ಕಲಾವಿದರಿಂದ ಯಕ್ಷಗಾನ, ಮಂಗಳೂರಿನ ಬ್ಯಾರಿ ಕಲಾವಿದರಿಂದ ದಫ್ ಪ್ರದರ್ಶನ, ಮುಷ್ಕರ ಪರ್ಫಾರ್ಮಿಂಗ್ಸ್ ಆರ್ಟ್ಸ್ ಬೆಂಗಳೂರು ತಂಡದಿಂದ ಭರತನಾಟ್ಯ, ಬಹರೇನ್ನ ಬಿಲ್ಲವ ಸಂಘದ ಕಲಾವಿದರಿಂದ ಹುಲಿವೇಶ ಕುಣಿತ, ಸಾಗರ ಮತ್ತು ಮಂಡ್ಯ ಜಾನಪದ ತಂಡದಿಂದ ಡೊಳ್ಳು ಕುಣಿತ ಸೇರಿದಂತೆ ಸೌದಿ ಅರೇಬಿಯಾ ಕನ್ನಡಗರಿಂದ ವಿಶೇಷ ಕಾರ್ಯಕ್ರಮಗಳು ನಡೆಲಿವೆ” ಎಂದು ಮಾಹಿತಿ ನೀಡಿದರು.

ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿಯ ಸೌದಿ ಅರೇಬಿಯಾ ಗೌರವಾಧ್ಯಕ್ಷರಾದ ಶೇಖ್ ಕರ್ನಿರೆ ಅವರು ಮಾತನಾಡಿ, “ವಿಜೃಂಭಣೆಯಿಂದ ಈ ಕಾರ್ಯಕ್ರಮವನ್ನು ನಾವು ನೆರವೇರಿಸುತ್ತಿದ್ದೇವೆ. ಸೌದಿ ಅರೆಬಿಯಾದಲ್ಲಿರುವ ಕನ್ನಡಿಗರು, ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಕನ್ನಡಿಗರು ಈ ಸಮಾರಂಭಕ್ಕೆ ಬರಬೇಕೆಂದು ಕೋರುತ್ತೇವೆ. ಸೌದಿಯಲ್ಲಿ ಮೊದಲಿಗೆ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರ ಸಹಕಾರ ಬೇಕಿದೆ. ಆಸ್ಟ್ರೇಲಿಯ, ಸಿಂಗಾಪುರ, ದುಬೈ, ಅಬುದಾಬಿ, ಕುವೈತ್, ಮಸ್ಕಾತ್ನಲ್ಲಿ ಈ ಹಿಂದೆ ಸಮ್ಮೇಳನಗಳನ್ನು ನಡೆದಿದ್ದವು” ಎಂದು ನೆನೆದರು.

ಸೌದಿ ಅರೇಬಿಯಾ ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಚ್.ರಫೀಕ್ ಸೂರಿಂಜೆ, ಕಾರ್ಯದರ್ಶಿ ಅಯಾಝ್ ಕೈಕಂಬ, ಕೋಶಾಧಿಕಾರಿ ಗೋ.ನಾ.ಸ್ವಾಮಿ, ಕಲಾವಿದರ ಒಕ್ಕೂಟದ ಅಧ್ಯಕ್ಷ ನಾಗರಾಜ್ ಮತ್ತು ಮಹಮ್ಮದ್ ಫಾರೂಕ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಇದೇ ವೇಳೆ ವಿಶ್ವಕನ್ನಡ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
