ಶರಾವತಿ ನದಿ ಹಿನ್ನೀರಿನ ಐತಿಹಾಸಿಕ ಸಿಗಂದೂರು ಸೇತುವೆಯನ್ನು ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಉದ್ಘಾಟಿಸಿದರು.
ಮುಳುಗಡೆ ಸಂತ್ರಸ್ತರ ಆರು ದಶಕಗಳ ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ ಸಿಕ್ಕಿದೆ. ಶರಾವತಿ ನದಿಯ ಹಿನ್ನೀರಿಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿಂದ ನಿರ್ಮಿತವಾದ ಕೇಬಲ್ ಆಧಾರಿತ 2.25 ಕಿ.ಮೀ ಉದ್ದದ ಸುಮಾರು 423 ಕೋಟಿ ಅನುದಾನದಲ್ಲಿ ದೇಶದ ಎರಡನೇ ಅತಿ ದೊಡ್ಡ ಸಂಪರ್ಕ ಸೇತುವೆ “ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು – ಕೊಲ್ಲೂರು (ಸ್ಥಳೀಯರ ಹೊಳೆಬಾಗಿಲು ಸೇತುವೆ)” ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲಾಗಿದೆ.
ಬಿಜೆಪಿಯ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಅವರ ಯಾವುದೇ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್ಎನ್ ಚನ್ನಬಸಪ್ಪ, ಡಿಎಸ್ ಅರುಣ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಧಿಕಾರಿಗಳ ಪ್ರಕಾರ, ಸಾಗರ ತಾಲ್ಲೂಕಿನ ಅಂಬರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಈ ಸೇತುವೆಯನ್ನು 472 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸೇತುವೆಯು 2.44 ಕಿಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. ಈ ಸೇತುವೆಯು ಸಾಗರದಿಂದ ಸಿಗಂದೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ದೂರವನ್ನು ಕಡಿಮೆ ಮಾಡುತ್ತದೆ.
