ಪಶ್ಚಿಮ ಬಂಗಾಳದಲ್ಲಿ ಸಿಪಿಐಎಂ ಇದೇ ರೀತಿ ನಿರ್ದಾಕ್ಷಿಣ್ಯವಾಗಿ ಭೂಸ್ವಾಧೀನ ಮಾಡಿದ ತಪ್ಪಿಗೆ ಅಧಿಕಾರ ಕಳೆದುಕೊಂಡಿದೆ. ಈತನಕ ಮತ್ತೆ ಅಧಿಕಾರದ ಗದ್ದುಗೆ ಏರಿಲ್ಲ. ನೀವು ಇದೇ ಪರಿಸ್ಥಿತಿಗೆ ಬರ್ತೀರಿ. ನಿಮ್ಮ ಮುಂದಿರುವ ಈ ಎಲ್ಲ ಉದಾಹರಣೆಗಳನ್ನು ಅರ್ಥ ಮಾಡಿಕೊಂಡು ತೀರ್ಮಾನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಎಚ್ಚರಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸಾವಿರಾರು ಜನ ಭೂಸ್ವಾಧೀನ ವಿರೋಧಿಸಿ 1185 ದಿನಗಳ ಹೋರಾಟಕ್ಕೆ ಬೆಂಬಲ ಘೋಷಿಸಿ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಚರಿತ್ರೆ ಬರೆದಿರುವ ಹೋರಾಟ ಇದು. ಸಿದ್ದರಾಮಯ್ಯ ಅವರ ಸರ್ಕಾರ ಮತ್ತು ಅವರ ಸಚಿವ ಸಂಪುಟ ಸಭೆಗೆ ಮತ್ತೊಮ್ಮೆ ಅವಕಾಶ ಇಲ್ಲ ಅನ್ನುವಂತಹ ಸಂದೇಶವನ್ನು ಈ ಹೋರಾಟ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ರೈತ ಚಳುವಳಿ ದುರ್ಬಲ ಆಗಿದೆ ಅಂತ ಭಾವಿಸಬೇಡಿ ಮುಖ್ಯಂಂತ್ರಿಯವರೆ? ರೈತ ವಿರೋಧಿಯಾದ ಈ ಸರ್ಕಾರವನ್ನು ಬಗ್ಗಿಸುವ ಕೆಲಸವನ್ನು ಈ ಚಳವಳಿ, ಹೋರಾಟ ಮಾಡೇ ಮಾಡುತ್ತೆ ಎಂದು ಎಚ್ಚರಿಸಿದರು
ಸುಪ್ರೀಂ ಕೋರ್ಟ್ ಬಹಳಷ್ಟು ತೀರ್ಪುಗಳು ಹೇಳುತ್ತವೆ. ಯಾವ ಸರ್ಕಾರ ಜನವಿರೋಧಿ ರೈತ ವಿರೋಧಿ ಕಾನೂನುಗಳ ತರುತ್ತದೆಯೋ, ಅದೇ ಸರ್ಕಾರಕ್ಕೆ ವಾಪಸ್ ತೆಗೆದುಕೊಳ್ಳುವ ಹಕ್ಕು ಅಧಿಕಾರ ಇದೆ. ಇದನ್ನು ನೆನಪು ಮಾಡಿಕೊಳ್ಳಬೇಕು.
ರೈತರಿಗೆ ರೈತ ಮುಖಂಡರಿಗೆ ದಾರಿ ತಪ್ಪಿಸುವ ಈ ರೈತ ವಿರೋಧಿ ನಿರ್ಧಾರವನ್ನು ಕೈ ಬಿಡಿ ಇದು ಸರಿಯಲ್ಲ. ನಾಚಿಕೆ ಗೆಟ್ಟ ಸರ್ಕಾರದ ನಡವಳಿಕೆ ಇದು ಎಂದು ಹೇಳಿದರು.
ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಇರಲಿಲ್ಲ. ಮುಖ್ಯವಾಗಿ ಇರಬೇಕಾದಂತ ವ್ಯಕ್ತಿಯಾಗಿದ್ದರು, ರೈತರ ನಿಯೋಗದ ಸಭೆಯನ್ನು ಬಹಿಷ್ಕರಿಸಿದ್ದಾರೆ. ನೀವು ಕೂಡ ಸ್ಪಷ್ಟ ತೀರ್ಮಾನವನ್ನು ಕೈಗೊಳ್ಳಲಿಲ್ಲ, 13 ಹಳ್ಳಿಗಳ ಭೂಸ್ವಾದೀನ ಕೈ ಬಿಡ್ತೀವಿ ಅಂತ ಹೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ನೀವು ಮಾಡಿರುವ ಅನ್ಯಾಯದ ಅಪರಾಧಗಳ ಸಾಕ್ಷಿಯಾಗಿ ರಾಜ್ಯದ ಹಲವೆಡೆಯಿಂದ ರೈತರು ಕಾರ್ಮಿಕರು ಈ ಹೋರಾಟಕ್ಕೆ ಬಂದು ಸೇರಿದ್ದಾರೆ. ಅವರ ಎದೆಯೊಳಗೆ ತುಂಬಿಕೊಂಡಿರುವ ನೋವನ್ನು ಬಗೆಹರಿಸುವವರು ಯಾರು? ಇದು ಅಕ್ಷರಶ ಹೊಲಸು ಸರ್ಕಾರ. ಹಣದ ದಾಹವನ್ನ ನೆತ್ತಿಗೆ ಏರಿಸಿಕೊಂಡಿದ್ದಂತಹ ನಿಮ್ಮ ಸರ್ಕಾರದ ಜುಟ್ಟು ಹಿಡಿದು ಎಳೆದಿದೆ ಈ ಹೋರಾಟ. ಕರ್ನಾಟಕದಲ್ಲಿ ಹೊಸ ಶಕ್ತಿ ಹುಟ್ಟಿದೆ ಎಂದು ಹೇಳಿದರು.