ಬೆಂಗಳೂರು ನಗರ ಆಗ್ನೇಯ ಪೊಲೀಸ್ ವಿಭಾಗ ವ್ಯಾಪ್ತಿಯ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರೆಸ್ಟೀಜ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಯೀಮ್ ನೂರ್ ವಿರುದ್ಧ ‘ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ (ಅಟ್ರಾಸಿಟಿ) ಅಡಿ ಪ್ರಕರಣ ದಾಖಲಾಗಿದೆ.
ದಲಿತರ ಭೂಮಿ ಕಬಳಿಸುವ ಉದ್ದೇಶದಿಂದಲೇ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಎದುರಿಸುತ್ತಿರುವ ನಯೀಮ್ ನೂರ್ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಎಚ್.ಆರ್. ರವಿಚಂದ್ರನ್ (ರೆಡ್ಡಿ) ವಿರುದ್ಧ ಸಂತ್ರಸ್ತರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೇ 28ನೇ ತಾರೀಖಿನಂದು ತಡರಾತ್ರಿ 400- 500 ಮಂದಿ ಗೂಂಡಾಗಳನ್ನು ಕಳುಹಿಸಿ, ದಲಿತ ಕುಟುಂಬದ ಮನೆ ಹಾಗೂ ದೇವಾಲಯವನ್ನು ಧ್ವಂಸ ಮಾಡಿಸಲಾಗಿದೆ. ಜೊತೆಗೆ ಅಪಾರ ಆಸ್ತಿಪಾಸ್ತಿಯನ್ನು ಹಾನಿ ಮಾಡಿರುವ ಸಂಬಂಧ ಮಾದಿಗ ಸಮುದಾಯದ ನಾಗರಾಜ್ ಎಂಬವರು ದೂರು ನೀಡಿದ್ದಾರೆ.
ಇದನ್ನೂ ಓದಿರಿ: ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು
ಅದರ ಅನ್ವಯ ಎಸ್‌ಸಿ ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(2)(v), 3(1)(g) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 138, 190, 304(2), 310(2), 324(5), 331(4), 351(3), 352ರ ಅಡಿ ರವಿಚಂದ್ರ, ನಯೀಮ್ ನೂರ್ ಮತ್ತು ಅಪರಿಚಿತ 400ರಿಂದ 500 ಜನರ ವಿರುದ್ಧ ಕೇಸ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
“ಬೇಗೂರು ಗ್ರಾಮದ ಸರ್ವೇ ನಂಬರ್ 352ರಲ್ಲಿರುವ ಪಿತ್ರಾರ್ಜಿತ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸಿರುವ ಕುಟುಂಬವು, ಮನೆ ಮತ್ತು ಪೂಜೆಗಾಗಿ ರೇಣುಕಾ ಎಲ್ಲಮ್ಮ ದೇವಿ, ಮುನೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಾಣ ಮಾಡಿಕೊಂಡಿತ್ತು. ಹೀಗಿರುವಾಗ ಮೇ 28ರಂದು ಮಧ್ಯರಾತ್ರಿ ಸುಮಾರು 12:30ರ ಸಮಯದಲ್ಲಿ ಸದರಿ ಜಾಗವನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳುವ ಉದ್ದೇಶಕ್ಕೆ ಕೈ ಹಾಕಲಾಗಿದೆ. ಆರೋಪಿ ಎಚ್.ಆರ್. ರವಿಚಂದ್ರ ಹಾಗೂ ಪ್ರೆಸ್ಟೀಜ್ ವಿಕಸರ್ ಲಿಮಿಟೆಡ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಯೀಮ್ ನೂರ್ ಒಳಸಂಚು ರೂಪಿಸಿದ್ದರು. ಅಂದು ರಾತ್ರಿ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ” ಎಂದು ದಲಿತ ಸಮುದಾಯದ ಮುನಿಸ್ವಾಮಿ ಅವರ ಪುತ್ರ ನಾಗರಾಜ್ ದೂರಿನಲ್ಲಿ ವಿವರಿಸಿದ್ದಾರೆ.
ದೂರುದಾರನ ತಂದೆ ಮುನಿಸ್ವಾಮಿ, ತಮ್ಮ ಯಲ್ಲಪ್ಪ ಹಾಗೂ ಸಹೋದರ ಸಂಬಂಧಿಗಳಾದ ವರುಣ್, ದೂರುದಾರನ ಅಕ್ಕನ ಮಗನಾದ ಇಂದ್ರಜಿತ್ ಮನೆಯಲ್ಲಿದ್ದರು. ಆ ಸಂದರ್ಭದಲ್ಲಿ 400ರಿಂದ 500 ಜನ ಗೂಂಡಾಗಳನ್ನು ಕಳುಹಿಸಿರುವ ಆರೋಪಿಗಳು ಅತಿಕ್ರಮ ಪ್ರವೇಶ ಮಾಡಿಸಿದ್ದಾರೆ. ಜೊತೆಗೆ ಯಲ್ಲಪ್ಪ ಮತ್ತು ವರುಣ್ ಅವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿ ಕೆಲ ಸಮಯದ ನಂತರ ವಾಪಸ್ ತಂದು ಬಿಟ್ಟಿದ್ದಾರೆ. ಆ ಸಮಯದಲ್ಲಿ ಗೂಂಡಾಗಳು ನಾಲ್ಕರಿಂದ ಐದು ಜೆಸಿಬಿ ಯಂತ್ರ ಹಾಗೂ ಪೋಕ್ಲೈನ್ ಯಂತ್ರಗಳ ಮೂಲಕ ಸಂತ್ರಸ್ತ ಕುಟುಂಬದ ಮನೆ, ರೇಣುಕಾ ಎಲ್ಲಮ್ಮದೇವಿ ದೇವಸ್ಥಾನ, ಮುನೇಶ್ವರ ದೇವಸ್ಥಾನಗಳನ್ನು ಒಡೆದು, ದೇವರ ಕಲ್ಲಿನ ಮೂರ್ತಿಗಳು ಹಾಗೂ ದೇವರ ಅಲಂಕಾರದ ಸುಮಾರು 50 ಗ್ರಾಂ ಬಂಗಾರದ ಒಡವೆಗಳನ್ನು ಹಾಗೂ ಮನೆಯಲ್ಲಿದ್ದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿರಿ: Ground Report | ಗೂಂಡಾಗಳಿಂದ ದಲಿತರ ಮನೆ, ದೇವಾಲಯ ಧ್ವಂಸವಾದರೂ ಬೇಗೂರು ಪೊಲೀಸರು ನಿರ್ಲಕ್ಷ್ಯ ತಾಳಿದ್ದೇಕೆ?
ಈ ದುಷ್ಕೃತ್ಯ ನಡೆಯುವ ಸಂದರ್ಭದಲ್ಲಿ ನಾಗರಾಜ್ ಅವರ ಅಕ್ಕನ ಮಗ ಶಾಂತಕುಮಾರ್ ಮತ್ತು ದೂರುದಾರನ ಕಡೆಯವರು ಪೊಲೀಸ್ ಸಹಾಯವಾಣಿ 112ಕ್ಕೆ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಅವರಿಗೆ ಕರೆ ಮಾಡಿ ರಕ್ಷಣೆ ಕೋರಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಗೂಂಡಾಗಳು ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ದರೋಡಿ ಮಾಡಿದ್ದಾರೆ. ಮನೆಯ ಆವರಣದಲ್ಲೇ ನಿಂತಿದ್ದ ಮಾರುತಿ ಕಾರು, ಡಿಯೋ ಬೈಕನ್ನು ಧ್ವಂಸ ಮಾಡಿದ್ದಾರೆ. ಸದರಿ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಹೋದ ದೂರುದಾರನ ಮೊಬೈಲ್ ಫೋನ್ ಕಿತ್ತುಕೊಂಡು, ಮನೆಯ ಆವರಣದಲ್ಲಿದ್ದ ದೇವಸ್ಥಾನ, ತೆಂಗು ಮತ್ತು ಹಲಸಿನ ಮರಗಳು, ಜೋಳದ ಸಸಿಗಳನ್ನು ಕೆಡವಿದ್ದಾರೆ. ನಾಗರಾಜ್ ಅವರು ಸಾಕಿದ್ದ ನೂರಾರು ಕೋಳಿಗಳನ್ನು ಹೊತ್ತೊಯ್ದು, ಅವರ ಮೇಲೆ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಜೊತೆಗೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
ರೆಡ್ಡಿ ಸಮುದಾಯಕ್ಕೆ ಸೇರಿದ ಎಚ್.ಆರ್.ರವಿಚಂದ್ರ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ನಯೀಮ್ ನೂರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.