ದಲಿತ ಲೇಖಕರೊಬ್ಬರ ಪುಸ್ತಕವನ್ನು ಸರ್ಕಾರದ ವತಿಯಿಂದ ಬಿಡುಗಡೆ ಮಾಡಿದರೂ ಲೇಖಕರನ್ನು ವೇದಿಕೆಗೆ ಕರೆಯದಿರುವ ಪ್ರಮಾದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದಿದೆ.
ಕನಕದಾಸರ ಜನ್ಮದಿನದ ಪ್ರಯುಕ್ತ ‘ಕರ್ನಾಟಕ ತತ್ವಪದಕಾರರ ಹದಿನೆಂಟು ಸಂಪುಟಗಳ ಬಿಡುಗಡೆ ಸಮಾರಂಭ’ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಆದರೆ ಕಾರ್ಯಕ್ರಮ ಸಂಘಟಕರು ಸಾಹಿತಿ ಗಂಗಪ್ಪ ತಳವಾರ ಅವರನ್ನು ವೇದಿಕೆಗೆ ಆಹ್ವಾನಿಸಲಿಲ್ಲ. ಗಂಗಪ್ಪ ಅವರು ಭಾವಾನುವಾದ ಮಾಡಿರುವ ‘ಗುಟ್ಟಹಳ್ಳಿ ಆಂಜನಪ್ಪ ಅವರ ಸುಜ್ಞಾನ ಬೋಧ ತತ್ವಗಳು ಸಂಪುಟ’ ಕೃತಿಯನ್ನೂ ಬಿಡುಗಡೆ ಮಾಡಲಾಗಿತ್ತು.
‘ಈದಿನ.ಕಾಮ್’ನೊಂದಿಗೆ ಮಾತನಾಡಿದ ಗಂಗಪ್ಪ ಅವರು, “ಎಲ್ಲ ಲೇಖಕರನ್ನು ವೇದಿಕೆಗೆ ಕರೆದರು. ನನ್ನನ್ನು ಆಹ್ವಾನಿಸಲಿಲ್ಲ. ದೂರದ ಊರಿನಿಂದ ಕುಟುಂಬ ಸಮೇತವಾಗಿ ಕಾರ್ಯಕ್ರಮಕ್ಕೆ ಬಂದಿದ್ದೆ. ಸೌಜನ್ಯಕ್ಕೂ ನನ್ನ ಹೆಸರು ಉಲ್ಲೇಖಿಸದೆ ಅವಮಾನಿಸಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಅವರ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ. ಗೌರವಪ್ರತಿಯನ್ನೂ ಕೊಟ್ಟಿಲ್ಲ. ಕೇಳಿದರೆ ಹಣ ನೀಡುವಂತೆ ಹೇಳುತ್ತಿದ್ದಾರೆ. ಘಟನೆ ವರದಿಯಾದ ಬಳಿಕ ಚಿಕ್ಕಣ್ಣ ಕರೆ ಮಾಡಿ ಕ್ಷಮೆಯಾಚಿಸುವ ಮಾತನಾಡುತ್ತಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿರಿ: ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?
“ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯರನ್ನು ಆಮಂತ್ರಿಸಿ ಬಹಳಷ್ಟು ಜನರಿಗೆ ಗೌರವವನ್ನೂ ಸೂಚಿಸಿದ್ದಾರೆ. ನನ್ನ ಹೆಸರನ್ನೂ ಹೇಳದೆ ಅವಮಾನಿಸಿರುವ ಘಟನೆ ಮುಖ್ಯಮಂತ್ರಿಗಳ ಎದುರಲ್ಲಿ ನಡೆಯಿತು. ಅಷ್ಟು ಕೃತಿಗಳನ್ನು ಬಿಡುಗಡೆ ಮಾಡಿದರೂ ಲೇಖಕರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿಲ್ಲ. ಕಚೇರಿಯಿಂದ ಕರೆಬಂದಿತ್ತಷ್ಟೆ” ಎಂದು ಆರೋಪಿಸಿದ್ದಾರೆ.