ದರ್ಶನ್ ಹೆಸರು ಜೋರಾಗಿ ಕೂಗುವ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ರಾಮನಗರ ಜಿಲ್ಲೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆಪಾಳ್ಯ ಗ್ರಾಮದಲ್ಲಿ ನಡೆದಿದೆ. ಗಾಯಾಳುವನ್ನು ವೆಂಕಟಸ್ವಾಮಿ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮನಗರ ತಾಲ್ಲೂಕಿನ ದೊಡ್ಡ ಮಣ್ಣುಗುಡ್ಡೆ ಗ್ರಾಮದ ಕಟ್ಟಡದ ಮೇಸ್ತ್ರಿ ಸುರೇಶ್ ಎಂಬುವವರು ಸೂಲಿಕೆರೆ ಎಂಬಲ್ಲಿ ಮನೆ ನಿರ್ಮಾಣದ ಕೆಲಸಕ್ಕೆ ವೆಂಕಟಸ್ವಾಮಿ ಕರೆದುಕೊಂಡು ಬಂದಿದ್ದರು. ಕೆಲಸ ನಡೆಯುವ ಜಾಗದಲ್ಲೇ ಸಣ್ಣದೊಂದು ಶೆಡ್ ನಿರ್ಮಾಣ ಮಾಡಿಕೊಂಡು ಅಲ್ಲಿಯೇ ವಾಸವಿದ್ದರು. ಹೀಗಿರುವಾಗ ಗುರುವಾರ ರಾತ್ರಿ ವೆಂಕಟಸ್ವಾಮಿ ಹಾಗೂ ಇತರರು ವಾಸವಿರುವ ಶೆಡ್ ಬಳಿ ಬಂದ ಮೂವರು ದರ್ಶನ್ ಬಗ್ಗೆ ಮಾತನಾಡುತ್ತ ಜೋರಾಗಿ ಡಿ ಬಾಸ್ ಎಂದು ಘೋಷಣೆಗಳನ್ನು ಕೂಗಲು ಶುರುಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಧಾನಸೌಧದಲ್ಲೇ ಅತ್ಯಾಚಾರ? ಇದು ಕೇವಲ ತನಿಖೆಯಿಂದ ಬಗೆಹರಿಯುವ ಸಂಗತಿಯಲ್ಲ
ಆರೋಪಿಗಳು ಘೋಷಣೆ ಕೂಗಿದ್ದರಿಂದ ಶೆಡ್‌ನಲ್ಲಿ ಮಲಗಿದ್ದ ವೆಂಕಟಸ್ವಾಮಿ ಅಕ್ಕಪಕ್ಕ ಮನೆಗಳಿಗೆ ದಯವಿಟ್ಟು ಕೂಗಬೇಡಿ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ಕಿರಣ್ ಎಂಬಾತ ನಮ್ಮ ಡಿಬಾಸ್ ಬಗ್ಗೆ ನಿನಗೆ ಏನ್ಗೊತ್ತು ಎಂದು ಗಲಾಟೆ ತೆಗೆದಿದ್ದು, ವೆಂಕಟಸ್ವಾಮಿಯ ಕತ್ತು ಕೊಯ್ದಿದ್ದಾನೆ. ಇದಲ್ಲದೆ ಆರೋಪಿ ಕಿರಣ್ ಜೊತೆಗಿದ್ದ ಮಹದೇವ ಎಂಬಾತನು ಕೂಡ ಮಹದೇವಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಅಕ್ಕಪಕ್ಕದವರು ಬಂದು ಕೂಡಲೇ ವೆಂಕಟಸ್ವಾಮಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ವೆಂಕಟಸ್ವಾಮಿ ಅವರ ಪತ್ನಿ ಘಟನೆ ಕುರಿತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಾಗುತ್ತಿದ್ದಂತೆ ಆರೋಪಿಗಳಾದ ಕಿರಣ್ ಹಾಗೂ ಮಹಾದೇವ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಶೀಘ್ರದಲ್ಲೇ ಬಂದಿಸುವ ಭರವಸೆ ನೀಡಿದ್ದಾರೆ.
