- ಬುಧವಾರ (ನ.15ರಂದು) ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ
- ಮುದ್ದಹನುಮೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆದಿದೆ: ಕೆ ರಾಜಣ್ಣ
ಮಾಜಿ ಶಾಸಕರಾದ ಡಿ ಸಿ ಗೌರಿಶಂಕರ್ ಮತ್ತು ದಾಸರಹಳ್ಳಿಯ ಮಂಜುನಾಥ್ ಅವರು ಜೆಡಿಎಸ್ ತೊರೆದು ಬುಧವಾರ (ನ.15) ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಶಾಸಕರ ಜೊತೆಯಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಮಾಜಿ ಶಾಸಕ ಗೌರಿಶಂಕರ್ ತುಮಕೂರು ಮತ್ತು ನೆಲಮಂಗಲ ಭಾಗದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ. ಇನ್ನು ಮಂಜುನಾಥ್ ಸಹ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಗೌರಿಶಂಕರ್ ಮತ್ತು ಮಂಜುನಾಥ್ ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ಕಾಂಗ್ರೆಸ್ ಕರೆತರುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ: ಎಚ್‌ಡಿಕೆ
ಜೆಡಿಎಸ್ ನಾಯಕರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಮಾಜಿ ಶಾಸಕರಾದ ಗೌರಿಶಂಕರ್, ಮಂಜುನಾಥ್ ಕಾಂಗ್ರೆಸ್ ಸೇರುವ ವಿಚಾರ ಹಳೆಯದು. ನನಗೇನೂ ಆಶ್ಚರ್ಯ ಆಗಲ್ಲ. ಗೌರಿಶಂಕರ್, ಮಂಜುನಾಥ್ ಕರೆದು ಎರಡು ಬಾರಿ ಮಾತನಾಡಿದ್ದೇನೆ. ಅವರಿಗೆ ಅನುಕೂಲ ಆಗುವ ಕಡೆ ಹೋಗಿದ್ದಾರೆ. ನಮಗೆ ಯಾವುದೇ ತೊಂದರೆ ಇಲ್ಲ. ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿದು ಉಳಿದ ಮಣ್ಣಿನ ಹಣತೆಯಲ್ಲಿ ಎಣ್ಣೆ ಹೆಕ್ಕುವ ಬಡವರು ಮತ್ತು ವಿಶ್ವಗುರು
ಮತ್ತಷ್ಟು ಬದಲಾವಣೆ: ಕೆ ಎನ್ ರಾಜಣ್ಣ
ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಡಿ ಸಿ ಗೌರಿಶಂಕರ್ ಅವರು ಕಾಂಗ್ರೆಸ್‌ಗೆ ಬರುವ ವಿಚಾರ ಚರ್ಚೆ ನಡೆದಿದೆ ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಐದು ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ” ಎಂದರು.
ಮಾಜಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಸೇರುತ್ತಾರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಡಿ.6ರಂದು ಸಿದ್ಧಗಂಗಾ ಮಠದಲ್ಲಿ ಸೋಮಣ್ಣ ಅವರು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದಕ್ಕೆ ನನ್ನನ್ನೂ ಆಹ್ವಾನಿಸಿದ್ದಾರೆ. ಅಧಿವೇಶನ ಇರುವುದರಿಂದ ಬಿಡುವು ಮಾಡಿಕೊಂಡು ಬರಲು ಪ್ರಯತ್ನಿಸುವೆ. ಉಳಿದ ವಿಚಾರ ಗೊತ್ತಿಲ್ಲ” ಎಂದರು.
“ನಾನು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಹೈಕಮಾಂಡ್ ಒಪ್ಪಿ ಟಿಕೇಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲಿವರೆಗೂ ರಾಜ್ಯ ರಾಜಕಾರಣದ ಅನೇಕ ಮಜುಲುಗಳ ಅನುಭವವಾಗಿದೆ, ಅನೇಕ ಸ್ಥಾನಮಾನಗಳು ದೊರೆತಿವೆ. ಇನ್ನು ಲೋಕಸಭೆಗೆ ಒಮ್ಮೆ ಕಾಲಿರಿಸುವ ಉಮೇದು ಇದೆ. ಇದಕ್ಕೆ ಪೂರಕವಾಗಿ ವರಿಷ್ಠರು ಒಪ್ಪಿ ಟಿಕೆಟ್ ನೀಡುವುದಾದರೆ ಸ್ಪರ್ಧಿಸುವೆ” ಎಂದು ಇದೇ ವೇಳೆ ಇಂಗಿತ ವ್ಯಕ್ತಪಡಿಸಿದರು.